ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ನೈವೇದ್ಯಕ್ಕಾಗಿ ದೇವರಮಾರು ಗದ್ದೆಯಲ್ಲಿ ಜು. 16ರ ಸಂಕಷ್ಟ ಚತುರ್ಥಿಯಂದು ನೆರವೇರಿಸಿದ ಬಿತ್ತನೆ ಮೂರುವರೆ ತಿಂಗಳಲ್ಲಿ ಸಮೃದ್ಧಿ ಭತ್ತ ಬೆಳೆದಿರುವ ಪೈರಿನ ಕಟಾವಿಗೆ ನ.4ರಂದು ಚಾಲನೆ ನೀಡಲಾಯಿತು.
ಸಂಪ್ರದಾಯದಂತೆ ದೇವಳದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ಸಲ್ಲಿಸಿದರು. ಕೃಷಿಕ ಸುದೇಶ್ ಚಿಕ್ಕಪುತ್ತೂರು ಅವರು ಭತ್ತದ ತೆನೆಗೆ ಹಾಲೆರೆದು ಕಟಾವು ಮಾಡಿದರು. ಶಾಸಕ ಸಂಜೀವ ಮಠಂದೂರು ಸಹಿತ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಸದಸ್ಯರು ಹಾಲೆರೆದು ಭತ್ತದ ತೆನೆ ಕಟಾವಿಗೆ ಸಾಂಕೇತಿಕ ಚಾಲನೆ ನೀಡಿದರು. ಬಳಿಕ ಯಂತ್ರಧಾರೆಯ ಮೂಲಕ ಭತ್ತದ ಕಟಾವು ನಡೆಯಿತು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತ್ತಡ್ಕ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಭತ್ತದ ಕೃಷಿಕ ಉಮೇಶ್ ಕರ್ಕೆರ, ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹರಿಪ್ರಸಾದ್ ಯಾದವ್ ಸಹಿತ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.