ಪ್ರತಿಯೊಬ್ಬರೂ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಕಾಲುಬಾಯಿ ರೋಗ ಮುಕ್ತ ಗ್ರಾಮ ಆಗಬೇಕು: ಮಠಂದೂರು
ಹಿರೇಬಂಡಾಡಿ: ದ.ಕ.ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನ.7ರಿಂದ ಡಿ.7ರ ತನನ ನಡೆಯುವ 3ನೇ ಸುತ್ತಿನ ಉಚಿತ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಶಿಬಿರದ ಉದ್ಘಾಟನೆ ನ.7ರಂದು ಬೆಳಿಗ್ಗೆ ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರುರವರು ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಕೃಷಿ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಪಶುಪಾಲನೆಯ ಮೂಲಕ ನಮ್ಮ ಆರೋಗ್ಯವನ್ನೂ ಕಾಪಾಡಬಹುದು. ಹಳ್ಳಿಯ ಬದುಕು ನೆಮ್ಮದಿಯ ಬದುಕು. ಹೈನುಗಾರಿಕೆ ಮೂಲಕ ಜೀವನ ಸಾಗಿಸುವುದು, ಜಾನುವಾರುಗಳ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಅವಶ್ಯಕವಾಗಿದೆ. ಜಾನುವಾರುಗಳಿಗೆ ಬರುವ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ಉಚಿತ ಲಸಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ನೀಡುತ್ತಿದೆ. ಪ್ರತಿಯೊಬ್ಬರು ತಮ್ಮ ಮನೆಯ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಈ ಮೂಲಕ ತಮ್ಮ ಗ್ರಾಮವನ್ನು ಕಾಲುಬಾಯಿ ರೋಗ ಮುಕ್ತ ಗ್ರಾಮ ಮಾಡಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ನಿರ್ದೇಶಕರಾದ ನಾರಾಯಣ ಪ್ರಕಾಶ್, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್‌ಕುಮಾರ್ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ಡಿ.ಅಶೋಕ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ.ಸತೀಶ್ ರಾವ್, ಡಾ.ಜಿತೇಂದ್ರ ಪ್ರಸಾದ್, ಪಶು ಸಂಗೋಪನಾ ಇಲಾಖೆಯ ಡಾ.ಎಂ.ಪಿ.ಪ್ರಕಾಶ್, ಪಶುವೈದ್ಯಕೀಯ ಪರಿವೀಕ್ಷಕರಾದ ಡಾ.ಪ್ರಶಾಂತ್, ಡಾ.ಪುಂಡರೀಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಚಂದ್ರಾವತಿ ನೆಹರುತೋಟ ಅಧ್ಯಕ್ಷತೆ ವಹಿಸಿದ್ದರು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಸ್ವಾಗತಿಸಿದರು. ಕೃತಕ ಗರ್ಭಧಾರಣಾ ಕಾರ್ಯಕರ್ತ ಗಣೇಶ್ ಮಠಂದೂರು ವಂದಿಸಿದರು. ಹಿರೇಬಂಡಾಡಿ ಹಾ.ಉ.ಸಹಕಾರಿ ಸಂಘದ ಕಾರ್ಯದರ್ಶಿ ವಿಶಾಲಾಕ್ಷಿ, ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕರಾದ ಸತೀಶ್, ಆಶಾ ಪಿ., ಯೋಗೀಶ್ ಸಹಕರಿಸಿದರು. ಸಭೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು, ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.