ರಿಕ್ಷಾಗಳಿಗೆ ಮಾತ್ರವಿರುವ ಏಕಮುಖ ರಸ್ತೆ ನಿಯಮ ಕೈ ಬಿಡುವಂತೆ ಕರ್ನಾಟಕ ರಿಕ್ಷಾ ಚಾಲಕ, ಮಾಲ್ಹಕರ ಸಂಘದಿಂದ ಮನವಿ

0

ಪುತ್ತೂರು:  ನಗರದ ಮುಖ್ಯ ರಸ್ತೆಯಲ್ಲಿ ಆಟೋ ರಿಕ್ಷಾಗಳಿಗೆ ಮಾತ್ರ ಇರುವ ಏಕಮುಖ ರಸ್ತೆ ನಿಯಮವನ್ನು ಕೈಬಿಡುವಂತೆ ಮತ್ತು ಪುತ್ತೂರಿನಲ್ಲೂ ಸಿಎನ್‌ಜಿ ಪಂಪನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಿಕ್ಷಾ ಚಾಲಕ, ಮಾಲ್ಹಕರ ಸಂಘದಿಂದ ಸಹಾಯಕ ಕಮೀಷನರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.


ಸಂಜೀವ ಶೆಟ್ಟಿ ಅಂಗಡಿ ಬಳಿಯಿಂದ ದರ್ಬೆ ಕಡೆಗೆ ಹೋಗುವ ಸಂದರ್ಭ ಚರ್ಚ್ ಮುಂಭಾಗದ ತನಕ ಆಟೋ ರಿಕ್ಷಾಗಳಿಗೆ ಮಾತ್ರ ಏಕಮುಖ ಸಂಚಾರ ಮಾಡಲಾಗಿದೆ. ಇತರ ಎಲ್ಲಾ ಲಘು ಮತ್ತು ಘನ ವಾಹನಗಳಿಗೆ ಅವಕಾಶ ನೀಡಲಾಗಿದೆ. ತುರ್ತು ಸಂದರ್ಭ ಪ್ರಯಾಣಿಕರನ್ನು ಕರೆದು ಕೊಂಡು ಬರುವ ರಿಕ್ಷಾಗಳಿಗೆ ಇಲ್ಲಿ ಕೇಸು ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಏಕಮುಖ ಸಂಚಾರ ನಿಯಮ ಹಿಂಪಡೆಯುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಸಿಎನ್‌ಜಿ ಪಂಪ್ ತೆರೆಯುವಂತೆ ಮನವಿ:

ಕಳೆದ ಆರು ತಿಂಗಳಿನಿಂದ ಸಿಎನ್‌ಜಿ ಆಟೋ ರಿಕ್ಷಾ ಕಂಪೆನಿಗಳು ಆಟೋ ರಿಕ್ಷಾಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ರಿಕ್ಷಾ ಚಾಲಕರು ಸಿಎನ್‌ಜಿ ಆಟೋ ರಿಕ್ಷಾವನ್ನು ಖರೀದಿಸುತ್ತಿದ್ದಾರೆ. ಆದರೆ ಇಲ್ಲಿ ಸಿಎನ್‌ಜಿ ಪಂಪ್ ಇಲ್ಲದಿರುವುದರಿಂದ ರಿಕ್ಷಾ ಚಾಲಕರು ಪೆಟ್ರೋಲ್ ಬಳಸಿ ಬಾಡಿಗೆ ಮಾಡಬೇಕಾಗಿದೆ. ಆದ್ದರಿಂದ ತಕ್ಷಣ ಸಿಎನ್‌ಜಿ ಪಂಪ್ ಅನ್ನು ತೆರೆಯುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಸಿಎನ್‌ಜಿ ಆಟೋ ರಿಕ್ಷಾಗಳನ್ನು ಹಿಂಪಡೆದು ಎಲ್‌ಪಿಜಿ ಆಟೋ ರಿಕ್ಷಾವನ್ನು ನೀಡಲು ಸಂಬಂಧಿಸಿದ ಕಂಪೆನಿಗಳಿಗೆ ಮತ್ತು ವಿತರಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಸಲಹೆಗಾರ ಗಿರೀಶ್ ನಾಯ್ಕ್ ಸೊರಕೆ, ಅಧ್ಯಕ್ಷ ಅರುಣ್ ಕುಮಾರ್ ಸಂಪ್ಯ, ಕಾರ್ಯಾಧ್ಯಕ್ಷ ಜಯರಾಮ ಕುಲಾಲ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಪುತ್ತು, ಉಪಾಧ್ಯಕ್ಷ ನಾರಾಯಣ ಗೌಡ, ಚಿದಾನಂದ ಪೇರಡ್ಕ, ಸದಸ್ಯರಾದ ಜಯರಾಮ ಮೊಟ್ಟೆತ್ತಡ್ಕ, ಯೋಗೀಶ್ ಆಚಾರ್ಯ, ಲೋಹಿತ್ ಮೊಟ್ಟೆತ್ತಡ್ಕ, ಇಸುಬು ಕೂರ್ನಡ್ಕ ಮತ್ತಿತರರು ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here