ನೆಲ್ಯಾಡಿ: ರಸ್ತೆ ಬದಿ ಬಿದ್ದು ಸಿಕ್ಕಿದ್ದ ನಗದು ಹಾಗೂ ದಾಖಲೆಗಳಿದ್ದ ಬ್ಯಾಗನ್ನು ಅದರ ವಾರಿಸುದಾರರಿಗೆ ಹಿಂತಿರುಗಿಸುವ ಮೂಲಕ ಪೆರಾಬೆಯ ಯುವಕನೋರ್ವ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಪೆರಾಬೆ ಗ್ರಾಮದ ಮನವಳಿಕೆ ನಿವಾಸಿ ಪ್ರವೀಣ್ಕುಮಾರ್ ಎಂಬವರು ನ.16ರಂದು ಸಂಜೆ ಮನವಳಿಕೆಯಿಂದ ರಾಮನಗರಕ್ಕೆ ಬರುತ್ತಿದ್ದ ವೇಳೆ ನೆಲ್ಯಾಡಿ ಗ್ರಾಮದ ಮಾದೇರಿ ಜಾರಂಗೇಲ್ ಎಂಬಲ್ಲಿ ರಸ್ತೆ ಬದಿ ಬ್ಯಾಗೊಂದು ಬಿದ್ದು ಸಿಕ್ಕಿದೆ. ಈ ವಿಚಾರವನ್ನು ಅವರು ರಾಮನಗರಕ್ಕೆ ಹೋಗಿ ಸಹೋದರಿಯಾಗಿರುವ ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯೆ, ಆಶಾ ಕಾರ್ಯಕರ್ತೆ ಚಿತ್ರಾ ಅವರ ಗಮನಕ್ಕೆ ತಂದರು. ಅವರು ಬ್ಯಾಗ್ ಪರಿಶೀಲನೆ ನಡೆಸಿದ ವೇಳೆ ಅದರಲ್ಲಿ ಸುಮಾರು 10 ಸಾವಿರ ರೂ., ನಗದು ಹಾಗೂ ದಾಖಲೆಪತ್ರಗಳಿತ್ತು. ಅದರಲ್ಲಿನ ದಾಖಲೆಯೊಂದರಲ್ಲಿದ್ದ ಫೋನ್ ನಂಬರ್ ಮೂಲಕ ಬ್ಯಾಗ್ನ ವಾರಿಸುದಾರರಾದ ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಅಬ್ದುಲ್ ಹಮೀದ್ರವರ ಮಗ ಮುಸ್ತಾಫರವರನ್ನು ಸಂಪರ್ಕಿಸಿ ಅವರನ್ನು ರಾಮನಗರಕ್ಕೆ ಬರಲು ಹೇಳಿ ನಗದು ಹಾಗೂ ದಾಖಲೆಗಳಿದ್ದ ಬ್ಯಾಗ್ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮುಸ್ತಾಫರವರು ಆಲಂಕಾರಿನಿಂದ ನೆಲ್ಯಾಡಿಗೆ ಬೈಕ್ನಲ್ಲಿ ಬಂದಿದ್ದು ಮನೆಗೆ ತಲುಪಿದ್ದ ವೇಳೆ ಅವರಿಗೆ ಬ್ಯಾಗ್ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಚಿಂತಿತರಾದ ಅವರು ’ ಸ್ವಾಮಿ ಕೊರಗಜ್ಜ’ ಕಳೆದು ಹೋದ ಬ್ಯಾಗ್ ಸಿಗಲೆಂದು ಕೈ ಮುಗಿಯುತ್ತಿದ್ದಂತೆ ಅವರಿಗೆ ಬ್ಯಾಗ್ ಸಿಕ್ಕಿದ್ದ ಪ್ರವೀಣ್ಕುಮಾರ್ ಕಡೆಯಿಂದ ಫೋನ್ ಕರೆಬಂದಿರುವುದು ವಿಶೇಷವಾಗಿದೆ.