ಸ್ವಸ್ಥ ಸಮಾಜ ನಿರ್ಮಾಣದ ಗುರಿ ಯುವ ಜನಾಂಗಕ್ಕಿದೆ: ಬಾಲಕೃಷ್ಣ ಆಳ್ವ ಕೊಡಾಜೆ
ವಿಟ್ಲ: ಸ್ವಸ್ಥ ಸಮಾಜ ನಿರ್ಮಾಣದ ಗುರಿ ಯುವ ಜನಾಂಗಕ್ಕೆ ಇರಬೇಕು. ಸ್ವಸ್ಥ ಆರೋಗ್ಯ, ಸ್ವಸ್ಥ ಮನಸ್ಸು ಮತ್ತು ಸ್ವಸ್ಥ ಶರೀರದಿಂದ ಇದು ಸಾಧ್ಯ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆರವರು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಮತ್ತು ಲಯನ್ಸ್ ಕ್ಲಬ್ ಮಾಣಿ ಇವುಗಳ ಜಂಟಿ ಆಶ್ರಯದಲ್ಲಿ ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ದುಶ್ಚಟ, ದುರಾಭ್ಯಾಸಗಳಿಗೆ ಬಲಿಯಾಗಬಾರದು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವಿಸಬೇಕಾದರೆ ಇವುಗಳಿಂದ ದೂರವಿರಬೇಕು. ಒಮ್ಮೆ ದಾರಿ ತಪ್ಪಿದರೆ ಮತ್ತೆ ಸರಿ ದಾರಿಗೆ ಬರಲು ಅಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ನಿವೃತ್ತ ಮಲೇರಿಯಾ ಪರಿವೀಕ್ಷಣಾಧಿಕಾರಿ ಜಯರಾಮ ಪೂಜಾರಿಯವರು, ಅಮಲು ಪದಾರ್ಥಗಳ ಸೇವನೆಯಿಂದ ಆಗಬಹುದಾದ ತೊಂದರೆಗಳು ಮತ್ತು ವಹಿಸಬೇಕಾದ ಎಚ್ಚರದ ಬಗ್ಗೆ ಮಾಹಿತಿ ನೀಡಿದರು.
ಪ್ರಗತಿ ಬಂಧು ಸ್ವಸಹಾಯ ಸಂಘದ ವಲಯಾಧ್ಯಕ್ಷ ಸುಧಾಕರ ಸಪಲ್ಯ ಅಧ್ಯಕ್ಷತೆ ವಹಿಸಿದ್ದರು. ಮಾಣಿ ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಸೇವಾಪ್ರತಿನಿಧಿ ಲೈಲಾಬಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಬಿ.ಕೆ.ಭಂಡಾರಿ ಸ್ವಾಗತಿಸಿದರು. ಶಿಕ್ಷಕಿ ಸುಶ್ಮಿತಾ ವಂದಿಸಿದರು. ಮೇಲ್ವಿಚಾರಕಿ ವಿನೋದಾ ಕಾರ್ಯಕ್ರಮ ನಿರೂಪಿಸಿದರು.