ವಿಶೇಷ ವರದಿ: ಸಿಶೇ ಕಜೆಮಾರ್
ಪುತ್ತೂರು: ಇದು ಬರೋಬ್ಬರಿ ನಾಲ್ಕು ದಶಕಗಳ ಬೇಡಿಕೆ. ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರೆಪುಣಿಯಿಂದ ಸನ್ಯಾಸಿಗುಡ್ಡೆ-ಮುಂಡಾಲ-ಬೋಳೋಡಿ ಮೂಲಕ ಮುಂಡೂರು ಸಂಪರ್ಕಿಸುವ ಸಂಪರ್ಕ ರಸ್ತೆ ಹಾಗೂ ಸೇತುವೆ ಆಗಬೇಕು ಎಂದು ಈ ಭಾಗದ ಜನರು ಕಳೆದ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದರು. ಇದೀಗ ರಸ್ತೆ ನಿರ್ಮಾಣಗೊಂಡು ಸೇತುವೆ ಕಾಮಗಾರಿ ಕೊನೆ ಹಂತದಲ್ಲಿದೆ. ಇನ್ನೇನು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಂಪರ್ಕ ಸೇತುವೆ ಜನ ಸಂಚಾರಕ್ಕೆ ಮುಕ್ತವಾಗಲಿದೆ. ಆ ಮೂಲಕ ಈ ಭಾಗದ ಜನರ ಕನಸು ನನಸಾಗಲಿದೆ.
ಸಾರೆಪುಣಿಯಿಂದ ಮುಂಡೂರು ಸಂಪರ್ಕ
ಹೌದು… ಕುಂಬ್ರ-ತಿಂಗಳಾಡಿ ರಾಜ್ಯ ರಸ್ತೆಯಲ್ಲಿ ಕುಂಬ್ರದಿಂದ 1 ಕಿ.ಮೀ ದೂರದ ಸಾರೆಪುಣಿಯಿಂದ ಸನ್ಯಾಸಿಗುಡ್ಡೆ ರಸ್ತೆಯಲ್ಲಿ ಮುಂಡಾಲ ಮೂಲಕ ಬೋಳೋಡಿಗೆ ಸಂಪರ್ಕ ಪಡೆದು ಅಲ್ಲಿಂದ ಮುಂಡೂರು ರಸ್ತೆಗೆ ಸಂಪರ್ಕ ಪಡೆಯಬಹುದಾಗಿದೆ. ಇದರಿಂದಾಗಿ ಕುಂಬ್ರದಿಂದ ಮುಂಡೂರುಗೆ ಹೋಗುವವರು ಇನ್ನು ಕೇವಲ 4 ಕಿ.ಮೀನಲ್ಲಿ ಮುಂಡೂರು ಸಂಪರ್ಕಿಸಬಹುದಾಗಿದೆ. ಈ ಸಂಪರ್ಕ ಸೇತುವೆ ಆಗಿರುವುದರಿಂದ ಬೋಳೋಡಿ, ಮುಂಡಾಲ ಭಾಗದ ಜನರಿಗೆ ಬಹಳಷ್ಟು ಅನುಕೂಲತೆ ಇದೆ. ಏಕೆಂದರೆ ಬೋಳೋಡಿಯಿಂದ ಕೆದಂಬಾಡಿ ಪಂಚಾಯತ್ಗೆ ಬರಬೇಕಾದರೆ ಸುಮಾರು 8 ಕಿ.ಮೀ ಸುತ್ತು ಬಳಸಿ ತಿಂಗಳಾಡಿಗೆ ಬರಬೇಕಾಗಿದೆ. ಇದಲ್ಲದೆ ಸನ್ಯಾಸಿಗುಡ್ಡೆ, ಮುಂಡಾಲ ಭಾಗದಿಂದ ಬೋಳೋಡಿಗೆ ಹೋಗುವವರು ಸುಮಾರು 14 ಕಿ.ಮೀ ಸುತ್ತುಬಳಸಿ ಬರಬೇಕಾಗಿದೆ. ಆದರೆ ಸಂಪರ್ಕ ಸೇತುವೆಯಿಂದಾಗಿ ಈ ಭಾಗದ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಮುಖ್ಯವಾಗಿ ಸನ್ಯಾಸಿಗುಡ್ಡೆ ಭಾಗದಿಂದ ಮುಂಡೂರು ದೇವಸ್ಥಾನಕ್ಕೆ ಬರಬೇಕಾದರೆ ಇನ್ನು ಕೇವಲ 1 ಕಿ.ಮೀ ಕ್ರಮಿಸಿದರೆ ಸಾಕು ಅದೇ ರೀತಿ ಬೋಳೋಡಿ ಭಾಗದವರು ಸನ್ಯಾಸಿಗುಡ್ಡೆ ಭಜನಾ ಮಂದಿರಕ್ಕೆ ಬರಬೇಕಾದರೆ ಇನ್ನು ಕೇವಲ 1 ಕಿ.ಮೀ ಕ್ರಮಿಸಿದರೆ ಸಾಕಾಗುತ್ತದೆ. ಈ ಭಾಗದಲ್ಲಿರುವವರು ಇನ್ನು ಕೇವಲ 2 ಕಿ.ಮೀ ಸಂಚರಿಸಿದರೆ ಮುಖ್ಯ ರಸ್ತೆ, ಪೇಟೆಗೆ ಬರಬಹುದಾಗಿದೆ. ಈ ಹಿಂದೆ 8 ಕಿ.ಮೀನಷ್ಟು ಸಂಚರಿಸಬೇಕಾಗಿತ್ತು.
1.5 ಕೋಟಿ ರೂ.ವೆಚ್ಚದ ಸೇತುವೆ, ಕಿಂಡಿ ಅಣೆಕಟ್ಟು
ಶಾಸಕರ ಹಾಗೂ ಸಂಸದರ ಮುತುವರ್ಜಿ ಹಾಗೂ ಈ ಭಾಗದ ಗ್ರಾಮಸ್ಥರ ಸಹಕಾರದೊಂದಿಗೆ ಈ ಸಂಪರ್ಕ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಶಾಸಕರ ಹಾಗೂ ಸಂಸದರ ಅನುದಾನ 1.5 ಕೋಟಿ ರೂ.ವೆಚ್ಚದಲ್ಲಿ ಮುಂಡಾಲದಲ್ಲಿ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಸೇತುವೆ ಹಾಗೂ ಕಿಂಡಿ ಅಣೆಕಟ್ಟಿನ ಕಾಮಗಾರಿ ಬಹುತೇಕ ಮುಗಿದಿದ್ದು ಕೊನೆ ಹಂತದಲ್ಲಿದೆ. ಕೆದಂಬಾಡಿ ಗ್ರಾಮ ಪಂಚಾಯತ್ ವತಿಯಿಂದ 3 ಲಕ್ಷ ರೂ.ವೆಚ್ಚದಲ್ಲಿ ರಸ್ತೆಯ ಮಣ್ಣಿನ ಕೆಲಸ ಮಾಡಲಾಗಿದೆ.
ಸಂಪರ್ಕ ರಸ್ತೆ, ಸೇತುವೆಗೆ ಜಾಗ ಬಿಟ್ಟು ದಾನಿಗಳಿವರು
ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾತ್ರ ಬಹಳ ಹಿರಿದಾದದು ಅನ್ನುತ್ತಾರೆ. ಗ್ರಾಮಸ್ಥರ ಸಹಕಾರ ಇಲ್ಲದೇ ಇದ್ದಲ್ಲಿ ಯಾವುದೇ ಅಭಿವೃದ್ಧಿ ಅಸಾಧ್ಯ. ಮುಂಡಾಲ-ಬೋಳೋಡಿ ಸಂಪರ್ಕ ರಸ್ತೆ, ಸೇತುವೆ ನಿರ್ಮಾಣವಾಗಬೇಕಾದರೆ ಈ ಭಾಗದ ಹಲವು ಮಂದಿ ದಾನಿಗಳು ತಮ್ಮ ವರ್ಗ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಆ ಮೂಲಕ ಗ್ರಾಮದ ಅಭಿವೃದ್ಧಿಗೆ ತಮ್ಮ ಸಹಕಾರವನ್ನು ನೀಡಿದ್ದಾರೆ. ಮುಖ್ಯವಾಗಿ ಮುಂಡಾಳಗುತ್ತು ವಿನೋದ್ ಕುಮಾರ್ ರೈ, ಮುಂಡಾಲಗುತ್ತು ಮೋಹನದಾಸ ಆಳ್ವ, ಮುಂಡಾಲಗುತ್ತು ಸಂಜೀವಿ ರೈ, ನಾಲ ಕೃಷ್ಣ ರೈ, ಕಡಮಜಲು ಸುಭಾಷ್ ರೈ, ದಿ.ಪಾಚು ಹೆಂಗ್ಸು ಮನೆಯವರು, ವಿಶು ಕುಮಾರ್ ರೈ ಮುಂಡಾಲಗುತ್ತು, ಸಾವಿತ್ರಿ ವಸಂತ ರೈರವರುಗಳು ತಮ್ಮ ವರ್ಗ ಜಾಗವನ್ನು ರಸ್ತೆ, ಸೇತುವೆಗಾಗಿ ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದ್ದಾರೆ.
‘ಇದು ಈ ಭಾಗದ ಜನರ ನಾಲ್ಕು ದಶಕಗಳ ಬೇಡಿಕೆಯಾಗಿತ್ತು. ಶಾಸಕರ ಹಾಗೂ ಸಂಸದರ ಮುತುವರ್ಜಿ ಮತ್ತು ಅನುದಾನ ಹಾಗೂ ಈ ಭಾಗದ ಜನರ ಸಹಕಾರದಿಂದಾಗಿ ಈ ಸಂಪರ್ಕ ಸೇತುವೆ ನಿರ್ಮಾಣವಾಗಿದೆ. ಶಾಸಕರ, ಸಂಸದರ 1.5 ಕೋಟಿ ರೂ. ಅನುದಾನದಿಂದ ಸಂಪರ್ಕ ಸೇತುವೆ, ಕಿಂಡಿಅಣೆಕಟ್ಟು ನಿರ್ಮಾಣವಾಗಿದೆ. ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಮುಂಡಾಳಗುತ್ತು ಕುಟುಂಬಸ್ಥರು ಸೇರಿದಂತೆ 8 ಮಂದಿ ದಾನಿಗಳು ತಮ್ಮ ವರ್ಗ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಕಾಮಗಾರಿ ಭರದಿಂದ ಸಾಗುತ್ತಿದ್ದು ಒಂದು ತಿಂಗಳೊಳಗೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ.’
ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಮ ಪಂಚಾಯತ್