ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಜ್ರುಪಾದೆ ಶಾಖಾ ನೂತನ ಕಚೇರಿ ಕಟ್ಟಡ ಉದ್ಘಾಟನೆ

0

ಪುತ್ತೂರು: ಸುಮಾರು 62 ವರ್ಷಗಳ ಇತಿಹಾಸವಿರುವ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಜ್ರುಪಾದೆ ಶಾಖೆಯ ನೂತನ ಸ್ವಂತ ಕಚೇರಿ ಕಟ್ಟಡವು ಡಿ.8 ರಂದು ಉದ್ಘಾಟನೆಗೊಂಡಿತು.


ಸಹಕಾರಿ ಸಂಘಗಳು ಕಾಮದೇನು, ಕಲ್ಪವೃಕ್ಷವಾಗಿ ಬೆಳೆಯಬೇಕು-ಸಂಜೀವ ಮಠಂದೂರು:
ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಬೆನ್ನೆಲುಬಾಗಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ಸಂಘಗಳ ಮೂಲಕ ಎಲ್ಲಾ ಸೇವೆಗಳ ಮೂಲಕ ದೊರೆತಾಗ ಮಾತ್ರ ಸ್ವಾಭಿಮಾನದ ಜೀವನಕ್ಕೆ ಸಹಕಾರಿ. ಬ್ಯಾಂಕಿಂಗ್ ವ್ಯವಹಾರ, ರಾಸಾಯನಿಕ ಗೊಬ್ಬರ, ಪಡಿತರ ಸಾಮಾಗ್ರಿಗಳ ಜೊತೆಗೆ ಗ್ರಾಮದ ಜನತೆಗೆ ಆವಶ್ಯಕವಾದ ಎಲ್ಲಾ ಸೌಲಭ್ಯಗಳನ್ನು ಮೂಲಕ ನೀಡಿದಾದ ಸಹಕಾರಿ ಸಂಘಗಳು ಊರಿನ ಕಾಮದೇನು, ಕಲ್ಪವೃಕ್ಷ ಕಾಮದೇನುವಾಗಿ ಬೆಳೆಯಬೇಕು ಎಂದರು. ಕೇಂದ್ರದಲ್ಲಿ ಸಹಕಾರಿ ಇಲಾಖೆ ತೆರೆಯುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಸಹಕಾರಿ ಕಾಯಿದೆಯಡಿಯಲ್ಲಿ ಸಹಕಾರಿ ಸಂಘಗಳು ವ್ಯವಹರಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘಗಳು ಒಂದೊಂದು ರೀತಿಯ ವೈವಿದ್ಯಮಯವಾದ ವ್ಯವಹಾರದ ಮೂಲಕ ಜನರನ್ನು ತಲುಪುತ್ತಿದೆ. ಜನ ಸಾಮಾನ್ಯರಿಗೆ ನೀಡಿದ ಸೇವೆ, ವ್ಯವಹಾರಗಳಿಂದಾಗಿ ಸಹಕಾರಿ ಸಂಘಗಳು ಸರ್ವವ್ಯಾಪಿಯಾಗಿ ಬೆಳೆದು ಜನರ ಮನದಲ್ಲಿದೆ. ಪ್ರತಿಯೊಬ್ಬ ಸದಸ್ಯರು ಸಂಘ ಬೆನ್ನೆಲುಬು. ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಆಡಳಿತ ವರ್ಗ, ಗ್ರಾಹಕರು ಹಾಗೂ ಸಿಬಂದಿಗಳ ಪ್ರಾಮಾಣಿಕ ಸೇವೆಯ ಮೂಲಕ ಇಂದು ಸಹಕಾರಿ ರಂಗವು ರಾಷ್ಟ್ರೀಕೃತ ಬ್ಯಾಂಕ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಹೇಳಿದ ಶಾಸಕರು ಸಾಲಾ ಮನ್ನಾ ಮಾಡುವ ಮೂಲಕ ರೈತರ ಋಣ ತೀರಿಸುವ ಕೆಲಸ ಸರಕಾರ ಮಾಡಿದೆ ಎಂದರು.


ಭಾರತೀಯ ಜೀವನ ಶೈಲಿಯೇ ಸಹಕಾರಿ ತತ್ವ-ಶಕುಂತಳಾ ಶೆಟ್ಟಿ:
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ನೂರು ವರ್ಷಗಳ ಇತಹಾಸವಿದ್ದರೂ ಬಾರತೀಯರ ಜೀವನ ಶೈಲಿಯೇ ಸಹಕಾರ ತತ್ವದಲ್ಲಿದೆ. ಅದಕ್ಕೆ ಒಂದು ವ್ಯವಸ್ಥಿತವಾದ ರೂಪ ಕೊಟ್ಟು ಸಹಕಾರಿ ಇಲಾಖೆ ಎಂದು ಮಾಡಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಇಂದು ಬಹಳಷ್ಟು ಸುಧಾರಣೆಯಾಗಿದೆ. ನಾನು ಶಾಸಕಿಯಾಗಿದ್ದ ಸಂದರ್ಭದಲ್ಲಿ ಉತ್ತರ ಕನ್ನಡದ ಬಹುತೇಕ ಬ್ಯಾಂಕ್ ನಷ್ಟದಲ್ಲಿದ್ದರೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಾತ್ರ ರಾಜ್ಯಕ್ಕೆ ಮಾದರಿಯಾಗಿ ಬೆಳೆದಿದೆ. ಅದು ನಮ್ಮ ಜಿಲ್ಲೆಯದ್ದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ತರಕಾರಿ ಬೆಲೆಯಲ್ಲಿ ಆವಿಷ್ಕಾರ ಮಾಡಿದ ಅಧ್ಯಕ್ಷ ಸತೀಶ್‌ರವರ ತರಕಾರಿ ಬೆಲೆ ದೇಶಕ್ಕೆ ಮಾದರಿಯಾಗಿದೆ. ನೀರು, ಕೃಷಿಗೆ ಬೇಕಾದ ಎಲ್ಲಾ ಆವಿಷ್ಕಾರಗಳು ಬಲ್ನಾಡಿನಲ್ಲಿ ನಡೆಯುತ್ತಿದೆ ಎಂದರು.


ಹುಟ್ಟಿನಿಂದ ಚಟ್ಟದ ತನಕ ಎಲ್ಲಾ ನೆರವು-ಶಶಿಕುಮಾರ್ ರೈ ಬಾಲ್ಯೊಟ್ಟು:
ಆಡಳಿತ ಕಚೇರಿ ಉದ್ಘಾಟಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ ಕ್ಷೇತ್ರ ಹುಟ್ಟಿನಿಂದ ಚಟ್ಟದ ತನಕ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಇಂದು 15 ಸೆಂಟ್ಸ್ ಜಾಗವಿದ್ದವರಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಮಾತ್ರವೇ ನೀಡುತ್ತಿದೆ. ಸಂಘದ ಮೂಲಕ ರೈತರಿಗೆ ಶೇ.3ರ ಬಡ್ಡಿದರದಲ್ಲಿ ರೂ.10 ಲಕ್ಷದ ತನಕ ಸಾಲ ನೀಡುತ್ತಿದೆ. ಆಸ್ತಿ ಅಡಮಾನ ಸಾಲ, ಮನೆ ನಿರ್ಮಾಣ, ಆರ್ಥಿಕ ಸೌಲಭ್ಯಗಳಿಗೆ ಸೂಕ್ತ ಭದ್ರತೆ ನೀಡಿದಲ್ಲಿ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ಪಡೆದುಕೊಳ್ಳುವ ಸೌಲಭ್ಯ ಕಲ್ಪಿಸಲಾಗುವುದು. ಠೇವಣಾತಿಗೂ ಸೂಕ್ತ ಭದ್ರತೆ ನೀಡಲಾಗುತ್ತಿದ್ದು ಕೃಷಿಕರು ತಮ್ಮ ಎಲ್ಲಾ ವ್ಯವಹಾರಗಳನ್ನು ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ನಡೆಸುವಂತೆ ಅವರು ವಿನಂತಿಸಿದರು.


ಬ್ಯಾಂಕಿಂಗ್ ಜೊತೆಗೆ ಆರ್ಥಿಕ ಕ್ರೂಡಿಕರಣದಲ್ಲಿ ತೊಡಗಿಸಿಕೊಳ್ಳಬೇಕು-ತಿಮ್ಮಪ್ಪ ಶೆಟ್ಟಿ:
ಮುಖ್ಯ ಅತಿಥಿಯಾಗಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸಹಕಾರಿ ಕ್ಷೇತ್ರವು ಬಹಳಷ್ಟು ವಿಸ್ತಾರವಾಗಿ ಬೆಳೆದಿದ್ದು ರೈತರ, ಕೂಲಿ ಕಾರ್ಮಿಕರ ಆರ್ಥಿಕ ಸ್ಥಿತಿನ ಸುಧಾರಣೆಯಲ್ಲಿ ಬೆನ್ನೆಲುಬಾಗಿ ನಿಂತಿದೆ ಎಂದರು. ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿ ಸಹಕಾರಿ ಸಂಘವು ನಗರಕ್ಕೆ ಹತ್ತಿರವಾಗಿರುವುದರಿಂದ ಜನರ ವ್ಯವಹಾರ ನಗರದೊಂದಿಗೆ ಅವಲಂಬಿಸಿದೆ. ಹೀಗಾಗಿ ಸಂಘವು ಬ್ಯಾಂಕಿಂಗ್ ವ್ಯವಹಾರ, ರಾಸಾಯಣಿಕ ಗೊಬ್ಬರ ಹಾಗೂ ಪಡಿತರ ಸಾಮಾಗ್ರಿ ವಿತರಣೆಗೆ ಸೀಮಿತವಾಗಿರದೇ ಇತರ ಆರ್ಥಿಕ ಕ್ರೂಡೀಕರಣದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.


ಡಿವಿಡೆಂಡ್ ದೇಣಿಗೆ ನೀಡಿದ ಸದಸ್ಯರು ಅಭಿನಂದನೀಯರು-ತ್ರಿವೇಣಿ ರಾವ್:
ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕಚೇರಿ ಉದ್ಘಾಟಿಸಿದ ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಮಾತನಾಡಿ, ಗ್ರಾಮದ ಸಹಕಾರಿಗಳ ಸಹಕಾರದಿಂದಾಗಿ ಸ್ವಂತ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸದಸ್ಯರು ತಮ್ಮ ಡಿವಿಡೆಂಡ್‌ನ್ನು ದೇಣಿಗೆಯಾಗಿ ನೀಡಿರುವ ಸದಸ್ಯರಿಗೆ ಅವರರು ಅಭಿನಂದನೆ ಸಲ್ಲಿಸಿದರು. ಸಂಘದ ಠೇವಣಿಯನ್ನು ರೂ.೬ಕೋಟಿಯಿಂದ ರೂ.60 ಕೋಟಿಗೆ ಏರಿಕೆ ಮಾಡಬೇಕು. ಎಂದು ಹೇಳಿದ ಅವರು ಆರ್ಥಿಕ ಅಭಿವೃದ್ಧಿಯಾದಾಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.


ರೂ.1 ಕೋಟಿ ವೆಚ್ಚದಲ್ಲಿ ಕೇಂದ್ರ ಕಚೇರಿ ಕಟ್ಟಡ-ಸತೀಶ್ ಗೌಡ:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸತೀಶ್ ಗೌಡ ವಳಗುಡ್ಡೆ ಮಾತನಾಡಿ, 1940 ರಲ್ಲಿ ಪ್ರಾರಂಭಗೊಂಡಿರುವ ನಮ್ಮ ಸಹಕಾರ ಸಂಘವು ನಂತರದ ದಿನಗಳಲ್ಲಿ ಉಜ್ರುಪಾದೆಯಲ್ಲಿ ಶಾಖೆಯನ್ನು ಪ್ರಾರಂಭಿಸಿ ಕಳೆದ 40 ವರ್ಷಗಳಿಂದ ನಿರಂತವಾಗಿ ಸೇವೆ ನೀಡುತ್ತಾ ಬಂದಿದೆ. ಶಾಖೆಯಲ್ಲಿ ಸದಸ್ಯರಿಗೆ ಪಡಿತರ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಪ್ರಾರಂಭವಾದ ಶಾಖೆಯಲ್ಲಿ ನಂತರದ ದಿನಗಳಲ್ಲಿ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸುವ ಇರಾದೆ ಆಡಳಿತ ಮಂಡಳಿಯಲ್ಲಿದೆ. ಬಾಡಿಗೆ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ಶಾಖಾ ಕಛೇರಿಗೆ ಇದೀಗ ಜಾಗ ಖರೀದಿ ಹಾಗೂ ಸ್ವಂತ ಕಟ್ಟಡ ಸುಮಾರು ರೂ.60ಲಕ್ಷದಲ್ಲಿ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಸುಮಾರು ರೂ.೧ಕೋಟಿ ವೆಚ್ದಲ್ಲಿ ಸಂಘದ ಕೇಂದ್ರ ಕಚೇರಿಗೂ ನೂತನ ಕಟ್ಟಡ ನಿರ್ಮಾಣವಾಗಲಿದ್ದು, ಜಾಗ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದಕ್ಕಾಗಿ ಸದಸ್ಯರು ತಮ್ಮ ಡಿವಿಡೆಂಡ್ ಶೇ.50ರಷ್ಟು ಭಾಗವನ್ನು ನೀಡಿ ಸಹಕರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಮಾಜಿ ಅಧ್ಯಕ್ಷ ಎ.ಎಂ ಪ್ರಕಾಶಚಂದ್ರ ಆಳ್ವ ಮಾತನಾಡಿ, ಸಂಘದ ಶಾಖೆಗೆ ಜಾಗ ಖರೀದಿಸಿ ಹಲವು ಅಡೆ, ತಡೆಗಳನ್ನು ಮೆಟ್ಟಿ ನಿಂತು ಈಗ ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ. ಇದು ಗ್ರಾಮದ ಸಹಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ. ಇನ್ನು ಒಂದು ವರ್ಷದಲ್ಲಿ ಪ್ರಧಾನ ಕಚೇರಿಗೂ ಸ್ವಂತ ಕಟ್ಟಡ ನಿರ್ಮಾಣವಾಗಲಿದ್ದು ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.


ಸಂಘದ ಮಾಜಿ ಅಧ್ಯಕ್ಷ ಎ.ಎಂ ಪ್ರವೀಣಚಂದ್ರ ಆಳ್ವ ಮಾತನಾಡಿ, ಶಾಖೆ ಪ್ರಾರಂಭವಾಗಿ 40 ವರ್ಷಗಳ ನಂತರ ಸ್ವಂತ ಹೊಸ ಕಟ್ಟಡ ನಿರ್ಮಾಣವಾಗಿದ್ದ ಬಹಳ ವರ್ಷಗಳ ಬೇಡಿಕೆ ಈಡೇರಿದೆ. ಪ್ರಧಾನ ಕಚೇರಿಗೂ ಹೊಸ ಕಟ್ಟಡ ನಿರ್ಮಾಣವಾಗಲಿದ್ದು ಸದಸ್ಯ ಬಾಂಧವರು ನಿಗದಿತ ಸಮಯದಲಲಿ ಸಾಲ ಮರುಪಾವತಿ ಮಾಡಿ ಸಹಕರಿಸುವಂತೆ ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ಕೆ.ಚಂದಪ್ಪ ಪೂಜಾರಿ, ಅಂಬ್ರೋಸ್ ಡಿ’ಸೋಜ, ನವೀನ ಕರ್ಕೇರ, ಸುರೇಶ್ ಎನ್., ಪ್ರಮೋದ್ ಬಿ., ಸೀತಾರಾಮ ಗೌಡ ಬಿ.ಕೆ., ವಿನಯ, ಶುಕವಾಣಿ, ವಲಯ ಮೇಲ್ವಿಚಾರಕ ವಸಂತ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರಾದ ಎ.ಎಂ ಪ್ರವೀಣಚಂದ್ರ ಆಳ್ವ, ಎ.ಎಂ ಪ್ರಕಾಶಚಂದ್ರ ಆಳ್ವ, ಶಾಖಾ ಕಟ್ಟಡಕ್ಕೆ ಜಾಗ ಖರೀದಿಯಲ್ಲಿ ಸಹಕರಿಸಿದ ದಿವಾಕರ ರಾವ್ ಪಳ್ಳತ್ತಾರು, ನಿವೃತ್ತ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎನ್. ಬಾಲಕೃಷ್ಣ ರೈ ಕೆಳಗಿನಮನೆಯವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತೀಶ್ ಗೌಡರವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.

ಪಲ್ಲವಿ ಹಾಗೂ ಆರತಿ ಪಾಳೆತ್ತಾರು ಪ್ರಾರ್ಥಿಸಿದರು. ಅಧ್ಯಕ್ಷ ಸತೀಶ್ ಗೌಡ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ವಂದಿಸಿದರು. ಸಿಬಂದಿಗಳಾದ ಕೆ.ಶುಭ, ಕೀರ್ತನ್ ಶೆಟ್ಟಿ, ವೆಂಕಟಕೃಷ್ಣ, ಪುಷ್ಪಾ ಹಾಗೂ ಹರ್ಷಿತ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂಪರ್ತಣೆ ನಡೆಯಿತು.

ಪೂಜಾ ವಿಧಿ ವಿಧಾನಗಳು:
ಉದ್ಘಾಟನಾ ಸಮಾರಂಭಕ್ಕೆ ಮುಂಚಿತವಾಗಿ ವಿವಿಧ ಧಾರ್ಮಿಕ ಪೂಜಾ ವಿಧಿ, ವಿಧಾನಗಳು ನೆರವೇರಿತು. ರವಿಚಂದ್ರ ನೆಲ್ಲಿತ್ತಾಯರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು.

LEAVE A REPLY

Please enter your comment!
Please enter your name here