ಮರೆಯಾದ ಪ್ರತಿಮೆ…. ಅಮರವಾಗುಳಿದ ಹೆಸರು ಈಡೇರಲಿದೆಯೇ ಮತ್ತೊಂದು ಗಾಂಧಿಪಾರ್ಕ್‌ನ ಕನಸು??

0

ಉಪ್ಪಿನಂಗಡಿ: ಇಲ್ಲಿನ ಪ್ರದೇಶವೊಂದಕ್ಕೆ ಹೆಸರು ತಂದು ಕೊಟ್ಟ ‘ಗಾಂಧಿ ಪಾರ್ಕ್’ ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಬಲಿಯಾಗಿದೆ. ಪಾರ್ಕ್ ಹೋದರೂ, ಅದರ ಹೆಸರು ಮಾತ್ರ ಆ ಪ್ರದೇಶಕ್ಕೆ ಶಾಶ್ವತವಾಗಿ ಉಳಿದಿದೆ. ಇದಕ್ಕೆ ಪರ್ಯಾಯವಾಗಿ ಉಪ್ಪಿನಂಗಡಿಯ ಮತ್ತೊಂದು ಕಡೆ ಗಾಂಧಿಪಾರ್ಕ್ ನಿರ್ಮಾಣ ಮಾಡಬೇಕೆನ್ನುವುದು ಹಲವರ ಒತ್ತಾಸೆಯಾಗಿದ್ದು, ಈ ಕನಸು ಈಡೇರಬಹುದೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಉಪ್ಪಿನಂಗಡಿ ಪೇಟೆಯ ಕೊನೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಜಾಗದಲ್ಲಿ 1971ರಲ್ಲಿ ಅಹಿಂಸಾ ಮೂರ್ತಿ ಗಾಂಧೀಜಿಯ ಪುತ್ಥಳಿಯನ್ನಿಟ್ಟು ಪಾರ್ಕ್ ಒಂದನ್ನು ಸ್ಥಾಪಿಸಲಾಗಿತ್ತು. ಇದರ ಸುತ್ತ ಸುಮಾರು 20 ಸೆಂಟ್ಸ್ ಜಾಗಕ್ಕೆ ಆವರಣಗೋಡೆಯನ್ನು ಕಟ್ಟಿ ಉದ್ಯಾನವನ ನಿರ್ಮಿಸಲಾಗಿತ್ತು. ಆ ಬಳಿಕ ಈ ಪ್ರದೇಶವು ಗಾಂಧಿ ಪಾರ್ಕ್ ಎಂದೇ ನಾಮಾಂಕಿತಗೊಂಡಿತು.

ಈ ಜಾಗವು ಸರ್ವೇ ನಂಬರ್ 19ರಲ್ಲಿ ಬರುತ್ತಿದ್ದು, ರಾಷ್ಟ್ರಪತಿಯವರ ಹೆಸರಿನಲ್ಲಿದೆ. ಆದ್ದರಿಂದ ಸ್ಥಳೀಯ ಗ್ರಾ.ಪಂ. ವತಿಯಿಂದಲೂ ಇದರ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರಲಿಲ್ಲ. ಕೆಲವು ಸಂಘ- ಸಂಸ್ಥೆಗಳು ಮುತುವರ್ಜಿಯಿಂದ ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸಿತ್ತಾದರೂ, ಬಳಿಕದ ದಿನಗಳಲ್ಲಿ ಇದು ಅಭಿವೃದ್ಧಿ ಇಲ್ಲದೆ ಪಾಳು ಬೀಳುವಂತಾಗಿತ್ತು. ಇಲ್ಲಿ ಕಟ್ಟೆಯೊಂದರ ಮೇಲೆ ಗಾಂಧೀಜಿಯ ಪುತ್ಥಳಿ, ಮತ್ತೊಂದು ರಾಷ್ಟ್ರ ಧ್ವಜಸ್ತಂಭ, ನಾಲ್ಕೈದು ಸಿಮೆಂಟ್ ಬೆಂಚು ಹಾಗೂ ಉದ್ಯಾನವನಕ್ಕೆ ಹುಲ್ಲಿನ ಹಾಸು, ಕೆಲವು ಗಿಡ-ಮರಗಳು ಬಿಟ್ಟರೆ ಮತ್ತೇನೂ ಇರಲಿಲ್ಲ. ಆದರೂ ಗ್ರಾಮಕ್ಕೊಂದು ಉದ್ಯಾನವನವಿಲ್ಲ ಎಂಬ ಕೊರಗನ್ನು ಇದು ನೀಗಿಸಿತ್ತು. ಸಂಜೆಯ ಹೊತ್ತಿನಲ್ಲಿ ಪೇಟೆಯ ಕೆಲವರು ಮಕ್ಕಳನ್ನು ಕರೆದುಕೊಂಡು ಇಲ್ಲಿನ ಸವಿಗಾಳಿಯನ್ನು ಪಡೆದು ಮನೋಲ್ಲಾಸದಿಂದ ತೆರಳುತ್ತಿದ್ದರು. ಕಾಲಕ್ರಮೇಣ ಇದರ ಆವರಣಗೋಡೆಯು ಅಲಲ್ಲಿ ಕುಸಿದು ಬಿದ್ದಿತ್ತು. ಇದರಿಂದ ದನ- ಆಡುಗಳು ನುಗ್ಗಿ ಇಲ್ಲಿನ ಗಿಡಗಳನ್ನು ತಿಂದು ಮುಗಿಸಿದವು. ಸಿಮೆಂಟ್ ಬೆಂಚ್‌ಗಳು ಮುರಿದು ಬಿದ್ದಿದ್ದವು. ಬಳಿಕದ ದಿನಗಳಲ್ಲಿ ಈ ಉದ್ಯಾನವನ ತನ್ನ ಎಂದಿನ ಹಿರಿಮೆ ಕಳೆದುಕೊಂಡು ಕಳೆಗುಂದತೊಡಗಿತ್ತಲ್ಲದೆ, ಉದ್ಯಾನವನದ ತುಂಬೆಲ್ಲಾ ಕುರುಚಲು ಗಿಡಗಂಟಿಗಳು ಬೆಳೆದು ಹೋದವು. ಕೊನೆಕೊನೆಗೆ ಇದು ಪರಿಸರ ನಿವಾಸಿಗಳು ದನ, ಆಡುಗಳನ್ನು ಮೇಯಲು ಕಟ್ಟುವ ತಾಣವಾಗಿಯೂ ಬದಲಾಯಿತು. ಇಲ್ಲಿರುವ ಪಾರ್ಕ್ ನೆಪ ಮಾತ್ರಕ್ಕೆ ಸೀಮಿತವಾಯಿತು. ಎಲ್ಲರಿಗೂ ಇಲ್ಲಿರುವ ಗಾಂಧೀಜಿಯ ಪುತ್ಥಳಿ ನೆನಪಾಗುತ್ತಿದ್ದದ್ದು ಸ್ವಾತಂತ್ರ್ಯ ದಿನ ಹಾಗೂ ಗಾಂಧಿ ಜಯಂತಿ ದಿನ ಮಾತ್ರ. ಅಟೋ ರಿಕ್ಷಾ ಚಾಲಕ ಮಾಲಕ ಸಂಘದವರು ವರ್ಷಂಪ್ರತಿ ಇಲ್ಲಿ ಸ್ವಾತಂತ್ರ್ಯ ದಿನ ಹಾಗೂ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದರು.

ಗಾಂಪಾ ಗೆಳೆಯರು: ಗಾಂಧಿ ಪಾರ್ಕ್‌ನ ಹೆಸರನ್ನಿಟ್ಟುಕೊಂಡು ‘ಗಾಂಧಿ ಪಾರ್ಕ್ ಗೆಳೆಯರು’ ಎಂಬ ಹೆಸರಿನಲ್ಲಿ 1995ರಲ್ಲಿ ಸಮಾನ ಮನಸ್ಕ ಗೆಳೆಯರ ಜಾತ್ಯಾತೀತ ನೆಲೆಗಟ್ಟಿನ ಸಂಘಟನೆಯೊಂದು ಹುಟ್ಟಿಕೊಂಡಿತು. ‘ಗಾಂಪಾ ಗೆಳೆಯರು’ ಎಂದೇ ಕರೆಯಲ್ಪಡುತ್ತಿದ್ದ ಈ ಸಂಘಟನೆಯು ಅನ್ಯಾಯದ ವಿರುದ್ಧ ಸಾಕಷ್ಟು ಹೋರಾಟಗಳನ್ನು ನಡೆಸಿತ್ತು. ಬರಬರುತ್ತಾ ಉದ್ಯೋಗ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಈ ಸಂಘಟನೆಯಲ್ಲಿದ್ದವರು ಚದುರಿ ಹೋದರು. ಆದ್ದರಿಂದ ಒಂದು ಕಾಲದಲ್ಲಿ ಹೋರಾಟದಲ್ಲಿ ಸಕ್ರಿಯವಾಗಿದ್ದುಕೊಂಡು ಮಾದರಿಯಾಗಿದ್ದ ಈ ಸಂಘಟನೆ ಈಗ ನೇಪಥ್ಯಕ್ಕೆ ಸರಿದಿದ್ದು, ಹೆಸರಿಗಷ್ಟೇ ಸೀಮಿತವಾಗಿದೆ.

ಕಾಮಗಾರಿಗೆ ಬಲಿ: ಹಲವು ಏಳು-ಬೀಳುಗಳನ್ನು ಕಂಡಿದ್ದ ಈ ಗಾಂಽಪಾರ್ಕ್ ಕೊನೆಗೂ ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಬಲಿಯಾಗಿದೆ. ಇಲ್ಲಿದ್ದ ಗಾಂಧಿ ಪ್ರತಿಮೆ ಹಾಗೂ ಧ್ವಜಸ್ತಂಭವನ್ನು ಗ್ರಾ.ಪಂ. ತೆರವುಗೊಳಿಸಿದೆ. ತೆರವುಗೊಳಿಸುವ ಸಂದರ್ಭ ಗಾಂಧೀಜಿಯ ಪ್ರತಿಮೆ ವಿಘ್ನಗೊಂಡಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಅದೇನೇ ಇರಲಿ. ಗಾಂಧಿ ಪ್ರತಿಮೆ ಹಾಗೂ ಪಾರ್ಕ್ ಇಲ್ಲಿಂದ ಮರೆಯಾದರೂ, ಈ ಪ್ರದೇಶಕ್ಕೆ ಗಾಂಧೀಪಾರ್ಕ್ ಎಂಬ ಹೆಸರು ಚಿರಸ್ಥಾಯಿಯಾಗಿ ಉಳಿದುಬಿಟ್ಟಿದೆ. ಈ ಗಾಂಧಿಪಾರ್ಕ್‌ನ ನೆನಪಿಗಾದರೂ, ಉಪ್ಪಿನಂಗಡಿಯಲ್ಲಿ ಬೇರೆ ಕಡೆ ಸ್ಥಳ ಹುಡುಕಿ ‘ಗಾಂಧಿ ಪಾರ್ಕ್’ ನಿರ್ಮಾಣ ಮಾಡಲು ಗ್ರಾ.ಪಂ. ಮುಂದಾಗಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

ಅಂದಿನ ಆಕ್ರೋಶ ಈಗಿಲ್ಲ!

ಕೆಲವು ವರ್ಷದ ಹಿಂದೆ ಅಟೋ ಚಾಲಕನೋರ್ವ ಇಲ್ಲಿದ್ದ ಗಾಂಧೀಜಿಯ ಪ್ರತಿಮೆಗೆ ಕಪ್ಪು ಕನ್ನಡಕ ಇಟ್ಟು ತೆರಳಿದ್ದ. ಗಾಂಧೀಜಿಗೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆ ಸಂದರ್ಭ ಬಹಳಷ್ಟು ಆಕ್ರೋಶಗಳು ಕೇಳಿ ಬಂದಿದ್ದವು. ಗಾಂಧೀಜಿಯವರಿಗೆ ಇಲ್ಲಿ ನಡೆಯುತ್ತಿರುವ ಅನ್ಯಾಯಗಳು ಕಾಣದಿರಲೆಂದು ಕಪ್ಪು ಕನ್ನಡಕ ಇಟ್ಟಿದ್ದೇನೆಂದು ಆತ ಸಮಜಾಯಿಷಿ ಕೊಟ್ಟಿದ್ದರೂ, ಈತನ ವ್ಯಂಗ್ಯ ಭರಿತ ನಡೆಯನ್ನು ಜನರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ಈತ ಅಲ್ಲಿ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸುವ ಪ್ರಸಂಗ ಬಂದೊದಗಿತ್ತು. ಆದರೆ ಈಗ ಉಪ್ಪಿನಂಗಡಿಯಲ್ಲಿ ಗಾಂಧೀಜಿಯ ಪ್ರತಿಮೆಯೂ ಇಲ್ಲ. ಪಾರ್ಕ್ ಇಲ್ಲ. ಇದರೊಂದಿಗೆ ಅಂದಿನ ಆಕ್ರೋಶದ ಧ್ವನಿಗಳೂ ಈಗ ಇಲ್ಲ.!

ಉಪ್ಪಿನಂಗಡಿಯ ನದಿ ಬದಿಯಲ್ಲಿ ಸುಂದರ ಪಾರ್ಕ್‌ವೊಂದನ್ನು ನಿರ್ಮಿಸಬೇಕೆಂಬ ಕನಸಿತ್ತು. ನಾವು ನೋಡಿದ ಪ್ರದೇಶವು ಖಾಸಗಿಯವರ ಒಡೆತನದಲ್ಲಿರುವುದರಿಂದ ಅವರ ಒಪ್ಪಿಗೆ ಸಿಕ್ಕಿಲ್ಲ. ಉಳಿದ ಕಡೆ ಉದ್ಯಾನವನಕ್ಕೆ ಬೇಕಾದ ಸ್ಥಳಾವಕಾಶ ಇಲ್ಲ. ಆದ್ದರಿಂದ ಈಗ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ಆವರಣದಲ್ಲಿ ಉದ್ಯಾನವನ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ. ಶೀಘ್ರದಲ್ಲೇ ಇದರ ಶಂಕು ಸ್ಥಾಪನೆಯೂ ನಡೆಯಲಿದೆ. ಅಲ್ಲಿ ಈಗ ಇರುವುದು ಉದ್ಯಾನವನದ ಯೋಜನೆಯಷ್ಟೇ. ಪ್ರತಿಮೆ ಇಡುವ ಬಗ್ಗೆ ಯೋಚಿಸಿಲ್ಲ.

– ಉಷಾಚಂದ್ರ ಮುಳಿಯ, ಅಧ್ಯಕ್ಷರು, ಉಪ್ಪಿನಂಗಡಿ ಗ್ರಾ.ಪಂ.

LEAVE A REPLY

Please enter your comment!
Please enter your name here