ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಹಿರಿಯ ಪುಷ್ಪಾ ಪ್ರಶಸ್ತಿ ಪ್ರದಾನ
ಪುತ್ತೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ತಾಲೂಕಿನ ಅತೀ ದೊಡ್ಡ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆದ ಮಕ್ಕಳ ವರ್ಷದ ಹಬ್ಬ ‘ಚಿಣ್ಣರ ಆಯನ’ ಸಡಗರ ಸಂಭ್ರಮಗಳೊಂದಿಗೆ ಡಿ.21ರಂದು ಸಂಪನ್ನಗೊಂಡಿತು.
ಡಿ.20 ರಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡ ಚಿಣ್ಣರ ಆಯನ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಮಕ್ಕಳಿಗೆ ಬಹುಮಾನ ವಿತರಣೆಯು ನೆರವೇರಿತು. ಡಿ.21ರಂದು ಸಂಜೆ ಚಿಣ್ಣರ ಆಯನ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ‘ಹಿರಿಯ ಪುಷ್ಪ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮ ಬಹಳಷ್ಟು ಶಿಸ್ತು ಬದ್ದವಾಗಿ ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಿಣ್ಣರ ಆಯನದಲ್ಲಿ ಸಂಭ್ರಮಿಸಿದರು.
ಮಕ್ಕಳು ಸಮಾಜದ, ದೇಶದ ಸಂಪತ್ತುಗಳಾಗಬೇಕು-ಲಾರೆನ್ಸ್ ಮಸ್ಕರೇನಸ್;
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಾಯಿದೇ ದೇವುಸ್ ಚರ್ಚಿನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ದೇವಾಲಯವಿದ್ದಂತೆ. ಅಲ್ಲಿ ವಿದ್ಯಾರ್ಥಿಗಳು ಜಾತಿ, ಧರ್ಮ, ಲೆಕ್ಕಿಸದೆ ಒಂದೇ ಭಾವನೆಯೊಂದಿಗೆ ವಿದ್ಯಾಭ್ಯಾಸ ಪಡೆದು ಸಮಾಜ, ದೇಶದ ಸಂಪತ್ತು ಆಗಬೇಕು. ಮಕ್ಕಳು ನಮ್ಮ ಸಂತೋಷ, ಸರ್ವಸ್ವ. ಮಕ್ಕಳು ದೇವರ ಮಕ್ಕಳಾಗಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ. ಮೌಲ್ಯ,ಪ್ರೀತಿ ನೀಡಬೇಕು. ದೇವರ ಭಯ ಭಕ್ತಿಯಿಂದ ಬೆಳೆದರೆ ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಪ್ರಕೃತಿ ಪ್ರೀತಿ ಕಲಿಸಬೇಕು. ಮಾನವೀಯ ಸಂಬಂಧಗಳನ್ನು ಬೆಳೆಸಬೇಕು ಎಂದರು.
ದೇಶದ ಮಹಾ ಫ್ಲವರ್ ಗಳಾಗಿ ಬೆಳೆಯಲಿ-ಶಕುಂತಳಾ ಶೆಟ್ಟಿ:
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಕಬಡ್ಡಿಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿರುವ ವಿದ್ಯಾರ್ಥಿನಿ ಸಂಸ್ಥೆಯ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪ್ರತಿಭೆಯಾಗಿ ಬೆಳೆದು ಗೌರವ ಸ್ವೀಕರಿಸುವಂತಾಗಲಿ. ಲಿಟ್ಲ್ ಪ್ಲವರ್ ನ ವಿದ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ದೇಶದ ಮಹಾನ್ ಫ್ಲವರ್ ಗಳಾಗಿ ಬೆಳೆಯಲಿ ಹಾರೈಸಿದರು.
ವಾರ್ಷಿಕ ರೂ.30 ಸಾವಿರ ದೇಣಿಗೆ-ಕೇಶವ ಪ್ರಸಾದ್ ಮುಳಿಯ:
ಶಾಲೆಯ ಫೇಸ್ ಬುಕ್ ಪೇಜ್ ಲೋಕಾರ್ಪಣೆ ಗೊಳಿಸಿದ ಹಿರಿಯ ವಿದ್ಯಾರ್ಥಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಬೆಳೆದವರು ಹೆಚ್ಚು ಸೃಜನಶೀಲ ವಿದ್ಯಾರ್ಥಿಗಳಾಗಿ ಬೆಳೆಯುತ್ತಾರೆ. ಭಾವನೆ ಹಂಚಿಕೊಳ್ಳಲು ಕನ್ನಡ ಮಾಧ್ಯಮ ಶಾಲೆಗಳು ಅವಶ್ಯ ಎಂದರು. ಎಲ್ಲಾ ಶಾಲೆಗಳಲ್ಲಿ ಐದನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರಕಾರದಿಂಲೇ ವೇತನ ನೀಡುವಂತಾಗಬೇಕು ಎಂದ ಅವರು ಗೌರವ ಶಿಕ್ಷಕಿಯರಿಗೆ ವೇತನಕ್ಕೆ ರೂ.ವಾರ್ಷಿಕ 15,000, ಹಾಗೂ ಸಹಕಾರ ನಿಧಿಗೆ 15,000 ನೀಡುವುದಾಗಿ ಘೋಷಣೆ ಮಾಡಿದರು. ಶಾಲೆಯ ಅಭಿವೃದ್ಧಿ ಗೆ ಪೋಷಕರು ದೇಣಿಗೆ ನೀಡಬೇಕು ಹೇಳಿದರು.
ಅಚ್ಚು ಕಟ್ಟಾಗಿ ನಡೆದ ಕಾರ್ಯಕ್ರಮ-ಸೀತಾರಾಮ ರೈ:
ಉದ್ಯಮಿ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ನ ಮ್ಹಾಲಕ ಸೀತಾರಾಮ ರೈ ಕೆದಂಬಾಡಿ ಗುತ್ತು ಮಾತನಾಡಿ, ಶಾಲಾ ವಿದ್ಯಾರ್ಥಿಗಳ ಶಿಸ್ತಿನ ಮೂಲಕ ವಾರ್ಷಿಕೋತ್ಸವ ಅಚ್ಚು ಕಟ್ಟಾಗಿ ಮೂಡಿ ಬಂದಿದೆ ಎಂದರು.
ಲಿಟ್ಲ್ ಫ್ಲವರ್ ಶಾಲಾ ಶಿಕ್ಷಣದಿಂದ ನಾನು ವೈದ್ಯೆಯಾದೆ-ಡಾ.ಬಿಲಿಂದಾ ಫೆರ್ನಾಂಡೀಸ್:
ಹಿರಿಯ ವಿದ್ಯಾರ್ಥಿ, ಮಂಗಳೂರಿನ ಮಕ್ಕಳ ತಜ್ಞೆ ಬಿಲಿಂದಾ ಫೆರ್ನಾಂಡೀಸ್ ಮಾತನಾಡಿ, ಜೀವನದ ನಿಷ್ಕಲ್ಮಶ ಹಾಗೂ ನಿರ್ಮಲ ಕಲಿಕೆ ಪ್ರಾರಂಭವಾಗುವುದು ಪ್ರಾಥಮಿಕ ಶಾಲೆಗಳಲ್ಲಿ. ಇಲ್ಲಿ ಪಡೆದ ಶಿಕ್ಷಣದಿಂದಾಗಿ ಇಂದು ವೈದ್ಯೆಯಾಗಿದ್ದೇನೆ. ನಿಜವಾದ ಶಿಕ್ಷಣದಿಂದ ಮಗುವಿನಲ್ಲಿ ಅಂತರ್ಗತವಾಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದು ಹಾಗೂ ಉತ್ತಮ ಭವಿಷ್ಯ ನಿರ್ಮಿಸುವುದಾಗಿದ್ದು ಮಕ್ಕಳನ್ನು ಅಂಕಗಳಿಗೆ ಸೀಮಿತಗೊಳಿಸದೆ ಅವರಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು ಎಂದರು.
ಕನ್ನಡ ಮಾದ್ಯಮದಿಂದ ಹೆಚ್ಚುವರಿ ಭಾಷೆ ಪಡೆದಂತೆ-ರಾಮಚಂದ್ರ ಶೆಣೈ:
ಹಿರಿಯ ವಿದ್ಯಾರ್ಥಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ಪ್ರಿನ್ಸಿಪಾಲ್ ಇನ್ಫೋಸೆಟಕ್ ಅಡ್ವೈಸರ್ ರಾಮಚಂದ್ರ ಶೆಣೈ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದರಿಂದ ಹೆಚ್ಚುವರಿ ಭಾಷೆ ಪಡೆದಂತಾಗುತ್ತದೆ. ನಾವು ಬಡತನದಲ್ಲಿ ಹುಟ್ಟಿದ್ದರೂ ಉತ್ತಮ ಶಿಕ್ಷಣ ಪಡೆದು ಮುಂದೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದ್ದು ನಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿದೆ.
ಸಂಸ್ಥೆಯಲ್ಲಿ ಮಕ್ಕಳ ಭವಿಷ್ಯದ ಬುನಾದಿಗೆ ಪೂರಕ ಶಿಕ್ಷಣ-ಸಿಸಿಲಿಯಾ ಮೆಂಡೋನ್ಸಾ:
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಕಾರ್ಪೊರೇಟ್ ಮ್ಯಾನೇಜರ್ ಭಗಿನಿ ಸಿಸಿಲಿಯಾ ಮೆಂಡೋನ್ಸಾ ಮಾತನಾಡಿ, ಮಕ್ಕಳ ಜೀವನದ ಬೆಳಕಿಗೆ ನಾವು ದಾರಿ ತೋರಿಸಬೇಕು. ಅದು ಅವರ ಮುಂದಿನ ಜೀವನಕ್ಕೆ ಭದ್ರ ಬುನಾದಿಯಾಗಿರಬೇಕಾಗಿದ್ದು ಲಿಟ್ಲ್ ಫ್ಲವರ್ ಶಾಲೆಯು ಇದೇ ತಳಹದಿಯಲ್ಲಿ ಶಿಕ್ಷಣ ನೀಡುತ್ತಿದೆ. ಶಾಲಾ ಶಿಕ್ಷಣದ ಜೊತೆಗೆ ಮಕ್ಕಳಿಗೆ ಜೀವನದ ಶಿಕ್ಷಣವು ಆವಶ್ಯಕವಾಗಿದ್ದು ಪೋಷಕರು ಶಿಕ್ಷಕರ ಜತೆ ಸಹಕರಿಸುವಂತೆ ಅವರು ವಿನಂತಿಸಿದರು.ಸನ್ಮಾನಿತರ ಪರವಾಗಿ ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲು ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಪುಷ್ಪ ಪ್ರಶಸ್ತಿ ಪ್ರದಾನ;
ಸಂಸ್ಥೆಯಲ್ಲಿ ಪ್ರಥಮ ಭಾರಿಗೆ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಹಿರಿಯ ಪುಷ್ಪ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಅಮೇರಿಕಾ ದಲ್ಲಿ ತಾಂತ್ರಿಕ ಕ್ಷೇತ್ರದ ಸಾಧಕ ಹಾರೂನ್ ರಶೀದ್ ಪರವಾಗಿ ಸಹೋದರ ಮಹಮ್ಮದ್ ಕೆ.ಎ., ಮಾಧ್ಯಮ ಕ್ಷೇತ್ರದ ಹಮೀದ್ ಕೂರ್ನಡ್ಕ, ಕಲಾಕ್ಷೇತ್ರದ ಸಾಧಕ ರಾಜರತ್ನ ದೇವಾಡಿಗ, ಉದ್ಯಮ ಕ್ಷೇತ್ರದ ದೀಪಕ್ ಮಿನೇಜಸ್, ಶೈಕ್ಷಣಿಕ ಕ್ಷೇತ್ರದ ರಾಮಚಂದ್ರ ಶೆಣೈ, ಧಾರ್ಮಿಕ ಕ್ಷೇತ್ರದ ಭಗಿನಿ ಮೋನಿಕಾ ರೆಬೆಲ್ಲೋ, ನಿವೃತ್ತ ಯೋಧ ಸುಬ್ರಹ್ಮಣ್ಯ ಕೆಮ್ಮಿಂಜೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲು, ಸಮಾಜ ಸೇವೆಯಲ್ಲಿ ಪ್ರದೀಪ್ ಕೆ., ಕ್ರೀಡಾ ಕ್ಷೇತ್ರದಲ್ಲಿ ಅನುಷಾ ಪ್ರಭು ಪರವಾಗಿ ಅವರ ತಾಯಿ ಪ್ರಶಸ್ತಿ ಸ್ವೀಕರಿಸಿದರು. ಅತ್ಯುತ್ತಮ ಸಿಆರ್.ಪಿ ರಾಜ್ಯ ಪ್ರಶಸ್ತಿ ಪಡೆದ ಶಶಿಕಲಾ, ಕಬಡ್ಡಿ ಪಂದ್ಯಾಟದಲ್ಲಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಪ್ರೀತಿಕ, ಅನನ್ಯ ಹಾಗೂ ವಿಜೇತ, ಕಬಡ್ಡಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ದೀಕ್ಷಾ, ಕಬಡ್ಡಿ ತರಬೇತು ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಭಗಿನಿ.ವೆನಿಶಾ ಬಿ.ಎಸ್ ಸ್ವಾಗತಿಸಿದರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕ ವಿಲ್ಮಾ ಫೆರ್ನಾಂಡೀಸ್ ವಂದಿಸಿದರು. ಬ್ಯಾಂಕ್ ಆಫ್ ಬರೋಡಾದ ಶಾಖಾ ಪ್ರಬಂಧಕಿ ಮಮತಾ, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಪ್ರಿಯ, ಚಂದ್ರಶೇಖರ ರೈ, ಮಮತಾ, ಸತೀಶ್ ಕೆ.ಆರ್., ಪ್ರದೀಪ್, ಸುಜಾತ, ರೇಣುಕಾ, ಅಬ್ದಲ್ ರಹಮಾನ್, ಪ್ರವೀಣ್, ಹರೀಶ್, ವಿಶ್ವನಾಥ, ಬದ್ರುನ್ನೀಸಾ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಮಕ್ಕಳ ವರ್ಷದ ಹಬ್ಬ ಚಿಣ್ಣರ ಆಯನದಲ್ಲಿ ಸಭಾ ಕಾರ್ಯಕ್ರಮ ಪ್ರಾರಂಭದಲ್ಲಿ ಬಾಲವಾಡಿಯಿಂದ ನಾಲ್ಕನೇ ತರಗತಿಯ ಮಕ್ಕಳು ಹಾಗೂ ಸಭಾ ಕಾರ್ಯಕ್ರಮದ ಬಳಿಕ ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಂದ ವಿನೂತನ ಶೈಲಿಯ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.