ಕ್ಷೇತ್ರ ಭೇಟಿಗೆ ಸರಕಾರ ಪಂಚಾಯತ್‌ಗೊಂದು ವಾಹನ ನೀಡಬೇಕು; ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆ

0

ಪಾಣಾಜೆ: ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳ ಭೇಟಿಗಾಗಿ ಪಂಚಾಯತ್ ಅಧ್ಯಕ್ಷರಿಗೆ ವಾಹನ ನೀಡಬೇಕು. ಬಾಡಿಗೆ ವಾಹನದಲ್ಲಿ ಭೇಟಿ ನೀಡಲು ತಿಂಗಳಿಗೆ ಸುಮಾರು ಖರ್ಚು ಬೀಳುತ್ತದೆ. ಇದರಿಂದಾಗಿ ಪಂಚಾಯತ್‌ಗೆ ಸಾಕಷ್ಟು ಹೊರೆ ಬೀಳುತ್ತಿದೆ. ಇದನ್ನು ತಪ್ಪಿಸಲು ಪಂಚಾಯತ್ ಗೊಂದು ವಾಹನದ ವ್ಯವಸ್ಥೆ ಸರಕಾರ ಮಾಡಿದ್ದಲ್ಲಿ ಪ್ರಯೋಜನವಾಗಲಿದೆ ಎಂದು ಸರ್ವಸದಸ್ಯರು ಹೇಳಿದ ಹಿನ್ನೆಲೆಯಲ್ಲಿ ಸರಕಾರಕ್ಕೆ ಈ ಬಗ್ಗೆ ನಿರ್ಣಯ ಬರೆದು ಕಳುಹಿಸುವುದಾಗಿ ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯು ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ರವರ ಅಧ್ಯಕ್ಷತೆಯಲ್ಲಿ ದ. 27ರಂದು ನಡೆಯಿತು.

ಸೂರಂಬೈಲು ಶಾಲಾ ಶೌಚಾಲಯಕ್ಕೆ ಅನುದಾನ ಇಡಿ: ಸೂರಂಬೈಲು ಸ.ಹಿ.ಪ್ರ.ಶಾಲೆಯ ಶೌಚಾಲಯ ನಾದುರಸ್ತಿಯಲ್ಲಿದ್ದು, ದುರಸ್ತಿಗಾಗಿ ನರೇಗಾದಲ್ಲಿ ಯೋಜನೆ ರೂಪಿಸಬೇಕು ಎಂದು ಸದಸ್ಯ ಮೋಹನ ನಾಯ್ಕ್ ಹೇಳಿದರು.

ಸರಕಾರದ ಸುತ್ತೋಲೆ: ಸರಕಾರದ ಸುತ್ತೋಲೆಯನ್ನು ಪಿಡಿಒ ಚಂದ್ರಮತಿಯವರು ವಾಚಿಸಿದರು. ದಡಾರಾ ರುಬೆಲಾ ನಿರ್ಮೂಲನಾ ಜಾಗೃತಿ ಮೂಡಿಸುವ ಅಭಿಯಾನ ಮಾಡಬೇಕು. ಸಂಬಂಽಸಿದ ಲಸಿಕೆಯನ್ನು ಜನರಿಗೆ ನೀಡುವಲ್ಲಿ ಕ್ರಮ ಕೈಗೊಳ್ಳುವುದು.

ಸೋಲಾರ್ ಬೀದಿ ದೀಪ ದುರಸ್ತಿಗೆ ಕ್ರಮ: ಹಣಕಾಸು ಸಮಿತಿಯಲ್ಲಿ ಚರ್ಚಿಸಿ ಸೋಲಾರ್ ಬೀದಿ ದೀಪಗಳನ್ನು ದುರಸ್ತಿ ಮಾಡಿ ಅಳವಡಿಸಲು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಗಡಿನಾಡ ಗ್ರಾಮ ಸಾಹಿತ್ಯ ಸಂಭ್ರಮಕ್ಕೆ ನೆರವು ನೀಡುವ ಕುರಿತು ಚರ್ಚಿಸಲಾಯಿತು. ಸುತ್ತೋಲೆ ಬಂದಿರುವ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದ ಸಾಧ್ಯವಾದಷ್ಟು ನೆರವು ನೀಡಿ ಸಹಕರಿಸುವುದೆಂದು ತೀರ್ಮಾನಿಸಲಾಯಿತು.

ಅಬಕಾರಿ ನಿಯಮ ಉಲ್ಲಂಘನೆ – ಜಾಗೃತಿ: ಅಬಕಾರಿ ನೀತಿ ಉಲ್ಲಂಘನೆ ಕಂಡುಬಂದಲ್ಲಿ ಅದನ್ನು ನಿವಾರಿಸಲು ಸದಸ್ಯರು ಸೂಚಿಸಿ ಅವರಿಗೆ ಸರಿಯಾದ ಮಾಹಿತಿ ನೀಡಿ ಅಬಕಾರಿ ನಿಯಮ ಉಲ್ಲಂಘಿಸದಂತೆ ಕ್ರಮ ಕೈಗೊಳ್ಳುವುದು.

ಕಡಂದೇಲು ರಸ್ತೆ ಅಭಿವೃದ್ಧಿಗೆ ಸ್ಥಳ ಪರಿಶೀಲನೆ: ಆರ್ಲಪದವು – ಕಡಂದೇಲು ರಸ್ತೆ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ. 30 ಲಕ್ಷ ಅನುದಾನ ಮಂಜೂರಾಗಿದೆ. ಈ ಬಗ್ಗೆ ಇಲಾಖೆಯಿಂದ ಸ್ಥಳ ಪರಿಶೀಲನೆ ನಡೆದಿದೆ. ಈ ಕುರಿತು ಚರ್ಚಿಸಲಾಯಿತು.

ನೆಲ್ಲಿತ್ತಿಮಾರ್ ಬಸ್ ತಂಗುದಾಣ ಇನ್ನೂ ಸರಿಯಾಗಿಲ್ಲ: ರಸ್ತೆ ಅಗಲೀಕರಣವಾದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯವರು ನೆಲ್ಲಿತ್ತಿಮಾರ್ ಬಸ್ ತಂಗುದಾಣ ತೆರವುಗೊಳಿಸಿ ಬಳಿಕ ಇದುವರೆಗೆ ಸರಿ ಮಾಡಿಕೊಟ್ಟಿಲ್ಲ. ಈ ವಿಷಯ ಮತ್ತೆ ಸಭೆಯಲ್ಲಿ ಪ್ರಸ್ತಾಪವಾಯಿತು. ಪಿಡಬ್ಲ್ಯೂಡಿಯವರು ಸರಿ ಮಾಡಿಕೊಡದಿದ್ದರೆ ಮಾಡುವುದಿಲ್ಲ ಎಂದು ಬರೆದುಕೊಡಲಿ’ ಎಂದು ಸದಸ್ಯರಾದ ಮೈಮೂನತ್ತುಲ್ ಮೆಹ್ರಾ ಮತ್ತು ವಿಮಲ ಆಗ್ರಹಿಸಿದರು. ಮುಂದಿನ ಸಭೆಯೊಳಗೆ ಆಗದಿದ್ದರೆ ಪಂಚಾಯತ್ ನಿಂದಲೇ ಅದನ್ನು ಸರಿಪಡಿಸಬೇಕು ಎಂದು ಹೇಳಿದರು.

ಸಾರ್ವಜನಿಕರ ಅರ್ಜಿ ದೂರು – ಗೊಂದಲ: ಸಾರ್ವಜನಿಕರು ಪಂಚಾಯತ್ ಗೆ ಸಲ್ಲಿಸುವ ದೂರು ಅರ್ಜಿಗಳಿಗೆ ಪಂಚಾಯತ್ ನಿಂದ ಪ್ರತಿಕ್ರಿಯೆ ಕೆಲವೊಮ್ಮೆ ಗೊಂದಲಗಳಾಗುತ್ತಿವೆ ಎಂದು ಸದಸ್ಯೆ ಮೈಮೂನತ್ತುಲ್ ಮೆಹ್ರಾ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಚಂದ್ರಮತಿಯವರು ’ಅರ್ಜಿಗಳ ಬಗ್ಗೆ ಸ್ಪಷ್ಟ ಮಾಹಿತಿ ಕೇಳುವಾಗ ಕಾನೂನಿನಲ್ಲಿ ಆಗದಿದ್ದರೆ ನಾವು ಆಗುವುದಿಲ್ಲ ಎಂದು ಹೇಳುತ್ತೇವೆ. ಅರ್ಜಿದಾರರು ನಮ್ಮಲ್ಲಿ ಒಂದು ಹೇಳುತ್ತಾರೆ. ಸದಸ್ಯರಾದ ನಿಮ್ಮಲ್ಲಿ ಇನ್ನೊಂದು ರೀತಿಯಲ್ಲಿ ಹೇಳುತ್ತಾರೆ ಎಂದು ಹೇಳಿದರು.

ಚರ್ಮಗಂಟು ರೋಗ ನಿವಾರಣೆ ಮಾಹಿತಿ: ದನಕರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗ ನಿವಾರಣೆಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪಶುವೈದ್ಯಾಧಿಕಾರಿ ಪುಷ್ಪರಾಜ್ ಮಾಹಿತಿ ನೀಡಿದರು.

ದನಕರುಗಳಿಗೆ ವೈರಲ್ ಆಗುತ್ತಿರುವ ಚರ್ಮಗಂಟು ರೋಗ ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳುವುದು. ಜನರಲ್ಲಿ ಮಾಹಿತಿ ನೀಡಿಜಾಗೃತಿ ಮೂಡಿಸಬೇಕು. ಸ್ವಚ್ಛತೆ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ದನಗಳಿಗೆ 10 ವೀಳ್ಯದೆಲೆ, ಉಪ್ಪು, ಬೆಳ್ಳುಳ್ಳಿ, ಕರಿಮೆಣಸು, ಬೆಲ್ಲ ಮಿಶ್ರಣ ಮಾಡಿ 15 ದಿನಗಳ ಕಾಲ ಕೊಡಬೇಕು. ಆರಂಭದ ದಿನ 3 ಗಂಟೆಗೊಮ್ಮೆ ನಂತರ 15 ದಿನ ದಿನಕ್ಕೆ ಮೂರು ಬಾರಿ ಕೊಡಬೇಕು. ಅರಶಿನ ಕಹಿಬೇವು ಹಚ್ಚಿ ದನಕರುಗಳ ಮೈ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮಾಹಿತಿ ನೀಡಲಾಯಿತು. ಸಾರ್ವಜನಿಕರಿಂದ ಬಂದಿರುವ ವಿವಿಧ ಅರ್ಜಿಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಉಪಾಧ್ಯಕ್ಷ ಅಬೂಬಕ್ಕರ್, ಸದಸ್ಯರಾದ ಸುಭಾಸ್ ರೈ, ಕೃಷ್ಣಪ್ಪ ಪೂಜಾರಿ, ಸುಲೋಚನಾ ವಿವಿಧ ವಿಷಯಗಳಲ್ಲಿ ಚರ್ಚಿಸಿದರು.

LEAVE A REPLY

Please enter your comment!
Please enter your name here