






ಗಡಿಗುರುತು ಬಳಿಕ ಬೇಲಿ ನಿರ್ಮಾಣಕ್ಕೆ ಅಗ್ರಹ, ಸ್ಥಗಿತಗೊಂಡ ಕಾರ್ಯಾಚರಣೆ


ಕಡಬ: ಕುಟ್ರುಪ್ಪಾಡಿ ಗ್ರಾಮದ ಹೊಸ್ಮಠ ಬಲ್ಯದಲ್ಲಿರುವ ಕಾಡಿಗೆ ಮನ್ನಾ ಜಾಗಕ್ಕೆ ಬೇಲಿ ನಿರ್ಮಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಅಗಳು ನಿರ್ಮಾಣಕ್ಕೆ ಮುಂದಾದಾಗ ಇಲ್ಲಿನ ಇನ್ನೊಂದು ಗುಂಪು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.






ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಗ್ರಾಮ ಪಂಚಾಯಿತಿಯವರು ಪಂಚಾಯಿತಿ ಅಧ್ಯಕ್ಷ ಮೋನಪ್ಪ ಗೌಡ(ಮೋಹನ ಗೌಡ) ಕೆರೆಕೋಡಿ ಅವರ ನೇತೃತ್ವದಲ್ಲಿ ಜೆಸಿಬಿ ತಂದು ಅಗಳು ನಿರ್ಮಾಣಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುಧೀರ್ ದೇವಾಡಿಗ ಹಾಗೂ ಮಾಜಿ ಸದಸ್ಯ ಕ್ಸೇವಿಯರ್ ಬೇಬಿ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪ್ರತಿರೋಧ ಒಡ್ಡಿತು. ಇಲ್ಲಿಸ್ಪಷ್ಠವಾಗಿ ಕಂಡುಬಂದಿರುವುದು ಪಂಚಾಯಿತಿಯವರು ದುರುದ್ದೇಶದಿಂದ ಪಂಚಾಯಿತಿ ಒಡೆತನದ 4.29 ಎಕ್ರೆ ಜಾಗದ ಹೊರತುಪಡಿಸಿ ಕೇವಲ ಸ್ವಲ್ಪ ಜಾಗವನ್ನು ಸ್ವಾಧೀನಪಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ. ಪಂ. ಒಡೆತನದ ಎಲ್ಲಾ ಜಾಗವನ್ನು ಗಡಿಗುರುತು ಮಾಡಿ ಬಳಿಕ ಅಗಳು ನಿರ್ಮಾಣ ಕಾರ್ಯ ಮಾಡಬೇಕು ಎಂದು ಅಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಧ್ಯಕ್ಷರು ಹಾಗೂ ಇತರ ಸದದ್ಯರು ನಾವು ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದ ಪ್ರಕಾರ ಅಗಳು ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದರಿಂದ ಯಾರಿಗೂ ತೊಂದರೆಯಿಲ್ಲ ಎಂದು ಸಮಜಾಯಿಕೆ ನೀಡಿದರು. ಈ ಎಲ್ಲಾ ಬೆಳವಣಿಗೆಯಿಂದ ಬಿಜೆಪಿ ಹಾಗೂ ಕಾಂಗ್ರೇಸ್ ಬೆಂಬಲಿತರ ಗುಂಪುಗಳು ಇಲ್ಲಿ ಕಾದಾಟ ಮಾಡುತ್ತಿವೆ ಎನ್ನುವುದು ಸ್ಪಷ್ಟವಾಗಿ ಗೋಚರಿಸಿತು.
ಮಾತಿನ ಚಕಮುಖಿ : ಕಡಬ ಠಾಣಾ ಎ.ಎಸ್.ಐ ಸುರೇಶ್ ಸಿ.ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಇತ್ತಂಡಗಳ ಮಧ್ಯೆ ಮಾತುಕತೆ ನಡೆಸಿದರೂ ವಾಗ್ಯುದ್ಧ ತಾರಕಕ್ಕೇರಿತು. ಈ ಮಧ್ಯೆ ಕಾಂಗ್ರೇಸ್ ಮುಖಂಡರಾದ ರಾಯ್ ಅಬ್ರಹಾಂ ಹಾಗೂ ಸತೀಶ್ ನಾಯಕ್ ಮೇಲಿನ ಮನೆ ಬಂದು ಮಾತುಕತೆಗೆ ಮುಂದಾಗಿ ಗಡಿಗುರುತು ಮಾಡಿಯೇ ಸ್ವಾಧೀನಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದರಿಂದ ಕೆಂಡಾಮಂಡಲರಾದ ಪಂ.ಅಧ್ಯಕ್ಷರು ಇದು ನಮ್ಮ ಗ್ರಾಮದ ಸಮಸ್ಯೆ ಇದರಲ್ಲಿ ಬೇರೆ ಗ್ರಾಮದವರು ಬಂದು ತಲೆ ಹಾಕುವುದು ಬೇಡ. ನಮ್ಮ ಸಮಸ್ಯೆ ಪರಿಸಿಕೊಳ್ಳಲು ನಮಗೆ ಗೊತ್ತು, ಇಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಇತ್ತಂಡಗಳ ಮಧ್ಯೆ ಮಾತಿನ ಚಕಮುಖಿ ಬಿರುಸುಗೊಂಡಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಿದರು. ಬಳಿಕ ಸರ್ವೆ ಮಾಡಿಯೇ ಗ್ರಾ.ಪಂ.ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದೆಂದು ನಿರ್ಧರಿಸಿ ಜೆಸಿಬಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಈ ಸಂದರ್ಭದಲ್ಲಿ ಇಲ್ಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಗ್ರಾ.ಪಂ. ಉಪಾಧ್ಯಕ್ಷೆ ವಾಣಿ ನಾಗೇಶ್, ಸದಸ್ಯರಾದ ಮಹಮ್ಮದಾಲಿ, ಲಕ್ಷ್ಮೀಶ ಬಂಗೇರ, ಕಿರಣ್ ಗೋಗಟೆ, ಸಂತೋಷ್ ದೋಳ, ಯಶೋಧಾ, ಸ್ವಪ್ನಾ, ರಮೇಶ್ ಪೆಡ್ಯಾನೆ, ಸುಮಾನ, ಪಿಡಿಒ ಆನಂದ ಗೌಡ, ಮಾಜಿ ಸದಸ್ಯ ತನಿಯ ಸಂಪಡ್ಕ, ಪ್ರಮುಖರಾದ ಜಗನ್ನಾಥ ಶೆಟ್ಟಿ, ಅವಿನ್ ಪೂಜಾರಿ, ಆನಂದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಹೊಸ್ಮಠ ಬಲ್ಯದಲ್ಲಿರುವ ಕಾಡಿಗೆ ಮನ್ನಾ ಭೂಮಿಯನ್ನು ರಕ್ಷಣೆ ಮಾಡುವ ದೃಷ್ಠಿಯಿಂದ ಕಳೆದ ತಿಂಗಳ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಬೇಲಿ ನಿರ್ಮಾಣ ಮಾಡುವ ನಿರ್ಣಯ ಅಂಗೀಕರಿಸಲಾಗಿತ್ತು. ಅದೇ ಪ್ರಕಾರ ಅಗಳು ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ. ಆದರೆ ಕೆಲವೊಂದು ಜನ ರಾಜಕೀಯ ಪ್ರೇರಿತರಾಗಿ ಪಂಚಾಯಿತಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ವಿನಾಕಾರಣ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಮುಂದೆ ಗಡಿಗುರುತು ಮಾಡಿ ಬೇಲಿ ನಿರ್ಮಾಣ ಮಾಡಲಾಗುವುದು.
ಮೋನಪ್ಪ ಗೌಡ(ಮೋಹನ ಗೌಡ) ಕೆರೆಕೋಡಿ
ಅಧ್ಯಕ್ಷರು, ಕುಟ್ರುಪ್ಪಾಡಿ ಗ್ರಾ.ಪಂ.
ಗ್ರಾ.ಪಂ. ಅಧೀನದಲ್ಲಿರುವ 4.29 ಎಕ್ರೆ ಜಾಗದಲ್ಲಿ ಈಗಾಗಲೇ ಖಾಸಗಿಯವರು ಅತಿಕ್ರಮಣ ಮಾಡಿದ್ದಾರೆ. ಕೆಲವರು ಮನೆ ಕಟ್ಟಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಅನೈತಿಕ ಚಟುವಟಿಕೆ ಕೂಡ ನಡೆಯುತ್ತಿದೆ. ನಾವು ಹದಿನೈದು ವರ್ಷದಿಂದ ಸರ್ವೆ ಮಾಡಿ ಅಗಳು ನಿರ್ಮಿಸಬೇಕೆಂದು ಬೇಡಿಕೆ ಇಟ್ಟಿದೆವು. ಈಗ ಗ್ರಾ.ಪಂ.ನವರು ಏಕಾಏಕಿ ಅತಿಕ್ರಮಣ ಮಾಡಿ ಉಳಿದ ಜಾಗಕ್ಕೆ ಬೇಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ, ಸರ್ವೆ ಮಾಡಿಯೇ ಗ್ರಾ.ಪಂ.ನ ಸಂಪೂರ್ಣ ಹಕ್ಕಿನ ಜಾಗವನ್ನು ವಶಪಡಿಸಿಕೊಳ್ಳಬೇಕು.
ಕ್ಸೇವಿಯರ್ ಬೇಬಿ, ಮಾಜಿ ಸದಸ್ಯರು, ಕುಟ್ರುಪ್ಪಾಡಿ ಗ್ರಾ.ಪಂ .









