- ರೈತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವುದು ಖಂಡನೀಯ
- ಅಡಿಕೆ ಬೆಳೆಗೆ ಕಾಡುವ ಹಳದಿ, ಎಲೆಚುಕ್ಕಿ ರೋಗಕ್ಕೆ ಔಷಧಿ ಒದಗಿಸಿ
ಉಪ್ಪಿನಂಗಡಿ: ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ರಾಜ್ಯ ಬಿಜೆಪಿ ಸರ್ಕಾರದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಡಿಕೆಯನ್ನು ಬೆಳೆಯಬೇಡಿ, ಅದಕ್ಕೆ ಭವಿಷ್ಯ ಇಲ್ಲ ಎಂದು ಆತಂಕದ ಹೇಳಿಕೆ ನೀಡುವ ಮೂಲಕ ಅಡಿಕೆ ಬೆಳೆಗಾರರ ಪಾಲಿಗೆ ಮರಣ ಶಾಸನ ಬರೆಯಲು ಹೊರಟಿದ್ದಾರೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಹೇಳಿದರು.
ಅವರು ಡಿ. 30ರಂದು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಸೇರಿದಂತೆ ರಾಜ್ಯದ ಸುಮಾರು 12 ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರಿದ್ದು, ಅಂದಾಜು 2 ಕೋಟಿ ಜನರ ಆರ್ಥಿಕತೆ ಅಡಿಕೆ ಬೆಳೆಯ ಮೇಲೆ ನಿಂತಿದೆ. ಇದೀಗ ಯಾವುದೇ ನಿರ್ಬಂಧಗಳಿಲ್ಲದೆ ಭೂತಾನ್‌ನಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಸ್ವದೇಶಿ ಅಡಿಕೆಯ ಧಾರಣೆ ಕುಸಿತಕ್ಕೆ ಕಾರಣವಾಗಿದೆ. ಇದನ್ನು ಮರೆ ಮಾಚುವ ಸಲುವಾಗಿ ಸಚಿವ ಅರಗ ಜ್ಞಾನೇಂದ್ರರವರು ಆತಂಕದ ಹೇಳಿಕೆ ನೀಡುವ ಮೂಲಕ ಅಡಿಕೆ ಬೆಳೆಗಾರರಿಗೆ ಕೊಡಲಿ ಏಟು ನೀಡಿದ್ದಾರೆ. ಇದು ಖಂಡನೀಯವಾಗಿದೆ ಎಂದರು.
ರಾಜ್ಯ ಅಡಿಕೆ ಮಂಡಳಿ ಸ್ಥಾಪಿಸುವ ಭರವಸೆ ಏನಾಯಿತು?: ಬಿಜೆಪಿ ಸರಕಾರ 2018ರ ಪ್ರಣಾಳಿಕೆಯಲ್ಲಿ ರಾಜ್ಯ ಅಡಿಕೆ ಮಂಡಳಿ ಸ್ಥಾಪಿಸುವ ಭರವಸೆ ನೀಡಿತ್ತು. ಮತ್ತು ಕಳಪೆ ದರ್ಜೆಯ ಅಡಿಕೆ ಆಮದು ನಿಲ್ಲಿಸಲು ಮನವಿ ಮಾಡುತ್ತೇವೆ ಎಂದು ಹೇಳಿಕೊಂಡಿತ್ತು. ಆದರೆ ಇದೀಗ ಅಡಿಕೆ ಬೆಳೆಗೆ ಭವಿಷ್ಯವಿಲ್ಲ. ಹಾಗಾಗಿ ಈ ಬೆಳೆಗೆ ಪ್ರೋತ್ಸಾಹ ನೀಡಬಾರದು ಎಂದ ಅರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಗಾರರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಡಾ. ರಾಜಾರಾಮ್ ಆಪಾದಿಸಿದರು.
ಹಳದಿ, ಎಲೆಚುಕ್ಕಿ ರೋಗದಿಂದಾಗಿ ಬೆಳೆಗಾರ ತತ್ತರ: ಅರಗ ಜ್ಞಾನೇಂದ್ರರವರು ಅಡಿಕೆ ಬೆಳೆಗಾರರು ಮತ್ತು ಅಡಿಕೆ ಕಾರ‍್ಯಪಡೆ ಅಧ್ಯಕ್ಷರೂ ಆಗಿರುತ್ತಾರೆ. ಅಡಿಕೆ ಬೆಳೆಗಾರರ ಸಂಕಷ್ಠ ಅವರಿಗೆ ಗೊತ್ತಿದೆ. ಅಷ್ಟಾಗಿಯೂ ಅಡಿಕೆ ಬೆಳೆಗೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗ ಬಂದಿದೆ, ಬೆಳೆಗಾರರು ಇದರಿಂದಾಗಿ ತತ್ತರಿಸಿ ಹೋಗಿದ್ದಾರೆ, ಇದಕ್ಕೆ ಔಷಧಿ ವ್ಯವಸ್ಥೆ ಮಾಡಬೇಕಾದ ಮತ್ತು ಬೆಂಬಲ ಬೆಲೆ ಕೊಡಿಸಬೇಕಾದ ಇವರು ಅಡಿಕೆ ಬೆಳೆಗೆ ಭವಿಷ್ಯ ಇಲ್ಲ. ಅದಕ್ಕೆ ಪ್ರೋತ್ಸಾಹ ಕೊಡಬಾರದು ಎನ್ನುವ ಇವರ ಹೇಳಿಕೆ ಅವರ ನಿರ್ಲಜ್ಝತನದ ಪರಮಾವಧಿ ಎಂದು ಪಕ್ಷದ ಹಿರಿಯ ಮುಖಂಡ, ಅಡಿಕೆ ಬೆಳೆಗಾರ ಎ. ಕೃಷ್ಣ ರಾವ್ ಅರ್ತಿಲ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯ ಸೋಮನಾಥ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಯುವ ಕಾಂಗ್ರೆಸ್‌ನ ಮಹಮ್ಮದ್ ಫಾರೂಕ್ ಪೆರ್ನೆ, ಅನಸ್ ಉಪ್ಪಿನಂಗಡಿ ಉಪಸ್ಥಿತರಿದ್ದರು.
ಬಸ್ ಪಾಸ್ ಇದೆ, ಬಸ್ ಇಲ್ಲ..!!!
ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲಾಗಿದೆ. ಆದರೆ ಬಸ್ ಕೊರತೆ ಎದುರಾಗಿದೆ. ಉಪ್ಪಿನಂಗಡಿಯಿಂದ ನೂರಾರು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ಉನ್ನತ ಶಿಕ್ಷಣಕ್ಕಾಗಿ ಪುತ್ತೂರು, ಮಂಗಳೂರು, ಉಜಿರೆಗೆ ಹೋಗುವವರಿದ್ದಾರೆ. ಆದರೆ ಬಸ್ ವ್ಯವಸ್ಥೆ ಇಲ್ಲದಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳ ವಿದ್ಯಾರ್ಜನೆ ಕುಂಟಿತವಾಗಿದೆ. ಪೋಷಕರು ಆತಂಕಿತರಾಗಿದ್ದಾರೆ. ಬಸ್ ವ್ಯವಸ್ಥೆ ಶೀಘ್ರ ಸರಿ ಆಗದಿದ್ದಲ್ಲಿ ವಿದ್ಯಾರ್ಥಿ ಸಂಘಟನೆಗಳ ಸಹಕಾರ ಪಡೆದುಕೊಂಡು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಡಾ. ರಾಜಾರಾಮ್ ತಿಳಿಸಿದರು.