ರಾಮಕುಂಜ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ರಾಮಕುಂಜ ಇದರ ಸಹಯೋಗದೊಂದಿಗೆ ಕಡಬ ತಾಲೂಕು ವ್ಯಾಪ್ತಿಯ ಪ್ರಾಥಮಿಕ(5-7)ಹಾಗೂ ಪ್ರೌಢಶಾಲಾ (8-9)ವಿಭಾಗದ ವಿದ್ಯಾರ್ಥಿಗಳಿಗೆ ಕಥೆ ಮತ್ತು ಕವನಾ ರಚನ ಕಮ್ಮಟ ಜ.4 ರಂದು ರಾಮಕುಂಜ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.
ಕಡಬ ತಾಲೂಕು ಕಸಾಪ ಅಧ್ಯಕ್ಷ ಕೆ.ಸೇಸಪ್ಪ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಥೆ ಮತ್ತು ಕವನಾ ರಚನಾ ಕಮ್ಮಟ ಆರಂಭದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ನಡೆಯಲಿದ್ದು ಇಲ್ಲಿ ಎರಡೂ ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಕಡಬದಲ್ಲಿ ನಡೆಯುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.
ಮಕ್ಕಳಲ್ಲಿ ಕನ್ನಡ ಅಭಿರುಚಿ ಉಣಬಡಿಸುವ ದೃಷ್ಟಿಯಿಂದ ಕಥೆ ಮತ್ತು ಕವನಾ ರಚನಾ ಕಮ್ಮಟ ಆಯೋಜಿಸಲಾಗಿದೆ. ಎಲ್ಲಾ ಭಾಷೆಗಳು ಬೇಕು. ಇದರ ಜೊತೆಗೆ ಕನ್ನಡ ಉಳಿಸಿ, ಬೆಳೆಸಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಲೇಖಕ ಟಿ.ನಾರಾಯಣ ಭಟ್‌ರವರು ಮಾತನಾಡಿ, ಭಾರತ ಬಹುಭಾಷೆಗಳ ದೇಶ. ಭಾಷೆಗಳು ಹೆಚ್ಚು ಬಂದಷ್ಟು ನಾವು ಜನಪ್ರಿಯರಾಗುತ್ತೇವೆ. ಕನ್ನಡ ಅನ್ನ ಕೊಡುವ ಭಾಷೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕೆಂದು ಹೇಳಿದರು.
ಆಲಂಕಾರು ಪ್ರಾಥಮಿಕ ಕೃ.ಪ.ಸ.ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಮಾತನಾಡಿ, ಸಂಘದ ಲಾಭಾಂಶದಲ್ಲಿ ಒಂದು ಪಾಲು ಶಿಕ್ಷಣಕ್ಕೋಸ್ಕರ ವಿನಿಯೋಗಿಸುವ ದೃಷ್ಟಿಯಿಂದ ಸಂಘದ ವ್ಯಾಪ್ತಿಯ ಶಾಲೆಗಳಿಗೆ ಈ ಸಲ ಸುಮಾರು 1 ಲಕ್ಷ ರೂ. ನೆರವು ನೀಡಲಾಗಿದೆ ಎಂದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಓಬಳೇಶ್ವರ, ಗೋಳಿತ್ತಡಿ ಹಾ.ಉ.ಸ.ಸಂಘದ ಅಧ್ಯಕ್ಷ ಬಿ.ಶ್ಯಾಮ್ ಭಟ್ ಕೊಂಡ್ಯಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ನಾಮನಿರ್ದೇಶಿತ ಸದಸ್ಯ ನಿಂಗರಾಜು ಕೆ.ಪಿ., ಮಾತನಾಡಿ ಶುಭಹಾರೈಸಿದರು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿಯವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.
ರಾಮಕುಂಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಕರೀಂ, ಕಸಾಪ ಕಡಬ ತಾಲೂಕು ಘಟಕದ ಬಾಲಚಂದ್ರ ಮುಚ್ಚಿಂತಾಯ, ಸಂಪನ್ಮೂಲ ಶಿಕ್ಷಕಿ ಹರಿಣಾಕ್ಷಿ ಸೀತಾರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಮಕುಂಜ ಶಾಲಾ ಮುಖ್ಯಶಿಕ್ಷಕ, ಸಿಆರ್‌ಪಿಯೂ ಆದ ಮಹೇಶ್ ಸ್ವಾಗತಿಸಿ, ಶಿಕ್ಷಕಿ ಜಾನಕಿ ವಂದಿಸಿದರು. ಸಬಳೂರು ಶಾಲಾ ಶಿಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನೋಡೆಲ್ ಅಧಿಕಾರಿಯಾಗಿರುವ ರಾಮಕುಂಜ ಶಾಲಾ ಶಿಕ್ಷಕ ಮಲ್ಲೇಶಯ್ಯ ಹಾಗೂ ಶಾಲಾ ಶಿಕ್ಷಕರು ಸಹಕರಿಸಿದರು. ಕಥೆ ಹಾಗೂ ಕವನ ರಚನೆ ಕುರಿತಂತೆ ಶಿಕ್ಷಕಿ ಹರಿಣಾಕ್ಷಿಯವರು ಮಕ್ಕಳಿಗೆ ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಿತು.