ಪುತ್ತೂರು: ಡಾ. ಅರ್ಚನಾ ಕೆ. ನಾಯಕ್ 06 ಜನವರಿ 2023ರಂದು ತಮ್ಮ ವೈದ್ಯಕೀಯ ಸೇವೆ ಪ್ರಾರಂಭಿಸಿದರು. ಇವರು ಕಿವಿ, ಮೂಗು, ಗಂಟಲು ವಿಭಾಗದಲ್ಲಿ ಎಂ ಎಸ್ ಪದವಿಯನ್ನು ಬೆಂಗಳೂರಿನ ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪೂರ್ರೈಸಿ, ಈಗ ಪುತ್ತೂರಿನ ಹೆಸರಾಂತ ಮಹಾವೀರ ಮೆಡಿಕಲ್ ಸೆಂಟರಿನಲ್ಲಿ ತಮ್ಮ ENT ಕ್ಲಿನಿಕ್ ಪ್ರಾರಂಭಿಸಿದರು.
ಮಹಾವೀರ ಮೆಡಿಕಲ್ ಸೆಂಟರಿನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀಯುತ ಡಾ. ಅಶೋಕ್ ಪಡಿವಾಳ್ ದೀಪ ಬೆಳಗಿಸಿ ಕ್ಲಿನಿಕ್ ಉದ್ಘಾಟಿಸಿ ಮಹಾವೀರ ಮೆಡಿಕಲ್ ಸೆಂಟರಿನ ENT ಕ್ಲಿನಿಕ್ ನಿಂದ ಜನರು ಉಪಯೋಗ ಪಡೆಯಲಿ ಮತ್ತು ಸಂಸ್ಥೆಯಲ್ಲಿರುವ ಉತ್ತಮ ಸೌಲಭ್ಯಗಳು ಜನರಿಗೆ ಸಿಗುವಂತಾಗಲಿ ಎಂದು ಶುಭಹಾರೈಸಿದರು. ಪುತ್ತೂರಿನ ಹೆಸರಾಂತ ವೈದ್ಯರಾದ ಶ್ರೀಯುತ ಡಾ. ಸುರೇಶ್ ಪುತ್ತೂರಾಯರು ಈ ಕ್ಲಿನಿಕ್ ನಿಂದ ವೈದ್ಯರಿಗೂ ಸಂಸ್ಥೆಗೂ ಕೀರ್ತಿಬರಲಿ, ಪುತ್ತೂರಿನ ಜನತೆಗೂ ಉತ್ತಮ ಸೇವೆ ಸಿಗಲಿ ಎಂದು ಹಿತನುಡಿಗಳನ್ನಾಡಿದರು.
ಡಾ. ಅರ್ಚನಾರ ಹೆತ್ತವರಾದ ಶ್ರೀಮತಿ ಇಂದಿರಾ ಮತ್ತು ಶ್ರೀ ದಿವಾಕರ ನಾಯಕ್ ಕೋಟಿಗದ್ದೆ (ಎರ್ಮೆಟ್ಟಿ) ಹಾಗೂ ಅತ್ತೆ ಮಾವಂದಿರಾದ ಶ್ರೀಮತಿ ವೇದಾವತಿ ಮತ್ತು ಶ್ರೀ ಬಾಲಕೃಷ್ಣ ನಾಯಕ್ ಆಜೇರು (ತೆಂಕಿಲ) ಈ ಕಾರ್ಯಕ್ರಮದಲ್ಲಿ ಜೊತೆಯಾದರು.
ಮಹಾವೀರ ಮೆಡಿಕಲ್ ಸೆಂಟರಿನಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆಯ ವೈದ್ಯರುಗಳಾದ ಡಾ. ಪ್ರದೀಪ್ ಬೋರ್ಕರ್, ಡಾ. ಸಾಯಿಪ್ರಕಾಶ್ ಮತ್ತು ಸೆಂಟರಿನ ಸಿಬ್ಬಂದಿವರ್ಗದವರು ಹಾಗೂ ನ್ಯಾಯವಾದಿಗಳಾದ ಶ್ರೀ ಸತೀಶ್ ವಾಗ್ಲೆ ಉಪಸ್ಥಿತರಿದ್ದರು. ಡಾ. ಅರ್ಚನಾ ಇವರ ಪತಿ ಶ್ರೀ ಅಭಿಷೇಕ್ ಸ್ವಾಗತಿಸಿ ಶ್ರೀ ಬಾಲಕೃಷ್ಣ ನಾಯಕ್ ವಂದಿಸಿದರು.
ಡಾ. ಅರ್ಚನಾ ಕೆ ನಾಯಕ್ ಮೂಲತಃ ಸುಳ್ಯದ ಎರ್ಮೆಟ್ಟಿಯಲ್ಲಿ ಹುಟ್ಟಿ ನಾರಣಕಜೆ ಮತ್ತು ಎಲಿಮಲೆ ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು ಅರಂತೋಡು NMPUC ಕಾಲೇಜಿನಲ್ಲಿ PUC ಮುಗಿಸಿ ಉತ್ತಮ ಶ್ರೇಣಿಯೊಂದಿಗೆ ಹಾಸನದ HIMS ನಲ್ಲಿ MBBS ಪದವಿ ಪಡೆದರು. ಕಡ್ಡಾಯ ಗ್ರಾಮೀಣ ಸೇವೆಯ ಅಡಿಯಲ್ಲಿ ಬೆಳ್ಳಾರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2.5ವರ್ಷ ಸೇವೆಸಲ್ಲಿಸಿದ್ದು ಜನಮಾನಸದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಪ್ರಸ್ತುತ ಪುತ್ತೂರಿನ ಮಹಾವೀರ ಮೆಡಿಕಲ್ ಸೆಂಟರಿನಲ್ಲಿ ಕ್ಲಿನಿಕ್ ತೆರೆದಿದ್ದು ಜನತೆ ಇದರ ಉಪಯೋಗ ಪಡೆಯಲು ಕೋರಲಾಗಿದೆ. ಟೋಕನ್ ಪಡೆಯಲು ಮಹಾವೀರ ಮೆಡಿಕಲ್ ಸೆಂಟರಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ವೈದ್ಯರು ಬೆಳಗ್ಗೆ 10 ರಿಂದ 01ಗಂಟೆವರೆಗೆ ಮತ್ತು ಅಪರಾಹ್ನ 3 ರಿಂದ 6ಗಂಟೆವರೆಗೆ ಲಭ್ಯರಿರುತ್ತಾರೆ.