ಪುತ್ತೂರು:ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮಾರುಕಟ್ಟೆ ಲೈಸನ್ಸ್ ಪಡೆದು ಮುಖ್ಯ ಪ್ರಾಂಗಣ ಹಾಗೂ ಆರು ಉಪ ಮಾರುಕಟ್ಟೆಗಳಲ್ಲಿ ವ್ಯಾಪಾರ ನಡೆಸುತ್ತಿರುವ ವರ್ತಕರು ಕಡ್ಡಾಯವಾಗಿ ವ್ಯವಹಾರದ ವರದಿಯನ್ನು ನಿಯಮಿತವಾಗಿ ಸಲ್ಲಿಸಿ, ಮಾರುಕಟ್ಟೆ ಶುಲ್ಕವನ್ನು ಪಾವತಿಸಬೇಕು. ವರ್ತಕರು ಲೈಸನ್ಸ್ ಪಡೆದೇ ವ್ಯಾಪಾರ ನಡೆಸಬೇಕು. ಈ ಎರಡು ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧವೂ ಎಪಿಎಂಸಿ ಕಾಯಿದೆಯನ್ವಯ ಕಾನೂನು ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿಯವರು ತಿಳಿಸಿದ್ದಾರೆ.
ಪುತ್ತೂರು ಎ.ಪಿ.ಎಂ.ಸಿ.ಯಿಂದ ನೀಡಲಾದ ನೋಟೀಸ್ ಬಗ್ಗೆ ಉಪ್ಪಿನಂಗಡಿ ಉಪಮಾರುಕಟ್ಟೆಯ ಲೈಸೆನ್ಸ್ ಪಡೆದ ವರ್ತಕರುಗಳು ಇತ್ತೀಚೆಗೆ ಎ.ಪಿ.ಎಂ.ಸಿ. ಕಛೇರಿಗೆ ಭೇಟಿ ನೀಡಿ ಚರ್ಚಿಸಿದ ಸಭೆಯಲ್ಲಿ ಕಾರ್ಯದರ್ಶಿ ರಾಮಚಂದ್ರರವರು ಸೂಚನೆ ನೀಡಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಅವಿಭಜಿತ ಪುತ್ತೂರು ತಾಲೂಕನ್ನು ಮಾರುಕಟ್ಟೆ ಕ್ಷೇತ್ರವಾಗಿ ಹೊಂದಿದ್ದು, ಸದರಿ ಮಾರುಕಟ್ಟೆ ಕ್ಷೇತ್ರದಲ್ಲಿ ಪುತ್ತೂರು ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಉಪ್ಪಿನಂಗಡಿ, ನೆಲ್ಯಾಡಿ, ಕಡಬ, ಕಾಣಿಯೂರು, ಈಶ್ವರಮಂಗಲ ಮತ್ತು ಪಾಣಾಜೆ ಸೇರಿದಂತೆ 6 ಸಂಖ್ಯೆ ಉಪಮಾರುಕಟ್ಟೆಗಳನ್ನು ಸರ್ಕಾರವು ಅಧಿಸೂಚನೆ ಮೂಲಕ ಸ್ಥಾಪಿಸಿರುತ್ತದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966 ಹಾಗೂ ನಿಯಮಗಳು 1968 ಮತ್ತು ಸಮಿತಿಯ ಬೈಲಾದನ್ವಯ ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ಮಾರುಕಟ್ಟೆ ಪ್ರಾಂಗಣ ಹಾಗೂ ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ಮಾತ್ರ ನಡೆಯಬೇಕಿದ್ದು, ಕೃಷಿ ಮಾರಾಟ ಇಲಾಖೆ ಹಾಗೂ ಪುತ್ತೂರು ಎ.ಪಿ.ಎಂ.ಸಿ. ವತಿಯಿಂದ ಪುತ್ತೂರು ಮುಖ್ಯ ಮಾರುಕಟ್ಟೆ ಪ್ರಾಂಗಣ ಮತ್ತು ಉಪ್ಪಿನಂಗಡಿ, ನೆಲ್ಯಾಡಿ, ಕಡಬ, ಕಾಣಿಯೂರು, ಈಶ್ವರಮಂಗಲ ಮತ್ತು ಪಾಣಾಜೆ ಸೇರಿದಂತೆ 6 ಸಂಖ್ಯೆ ಉಪಮಾರುಕಟ್ಟೆಗಳಲ್ಲಿ ಮಾತ್ರ ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ಮಾಡಲು ಲೈಸೆನ್ಸ್ ನೀಡಲಾಗಿರುತ್ತದೆ. ಸದರಿ ಪುತ್ತೂರು ಮುಖ್ಯ ಮಾರುಕಟ್ಟೆ ಹಾಗೂ ಮೇಲ್ಕಂಡ 6 ಉಪಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವರ್ತಕರುಗಳು ಅವರ ವ್ಯಾಪಾರ ವ್ಯವಹಾರದ ಬಗ್ಗೆ ಪುತ್ತೂರು ಎ.ಪಿ.ಎಂ.ಸಿ.ಗೆ ಕಡ್ಡಾಯವಾಗಿ ವಾರದ ವಹಿವಾಟಿನ ವರದಿಯನ್ನು ಸಲ್ಲಿಸಿ ಮಾರುಕಟ್ಟೆ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ಎ.ಪಿ.ಎಂ.ಸಿ. ಕಾಯ್ದೆಗೆ ಇತ್ತೀಚೆಗೆ ಬಂದಿರುವ ತಿದ್ದುಪಡಿ ಕಾಯ್ದೆಯ ಬಗೆಗಿನ ಮಾಹಿತಿಯ ಕೊರತೆ, ತಪ್ಪು ತಿಳುವಳಿಕೆ ಹಾಗೂ ಸ್ಥಾಪಿತ ಹಿತಾಸಕ್ತಿಗಳ ಅಪಪ್ರಚಾರದಿಂದಾಗಿ ಕೆಲವೊಂದು ವರ್ತಕರುಗಳು ವಾರದ ವಹಿವಾಟು ವರದಿಯನ್ನು ಸಮಿತಿಗೆ ಸಲ್ಲಿಸಿ ಮಾರುಕಟ್ಟೆ ಶುಲ್ಕವನ್ನು ಪಾವತಿಸಲು ವಿಫಲರಾಗಿರುತ್ತಾರೆ. ಸಮಿತಿಯ ಪುತ್ತೂರು ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ 6 ಸಂಖ್ಯೆ ಉಪಮಾರುಕಟ್ಟೆಗಳಲ್ಲಿನ ಅಂತಹ ಲೈಸೆನ್ಸ್ ಪಡೆದ ವರ್ತಕರುಗಳಿಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟಿನ ವಾರದ ವರದಿಯನ್ನು ಸಮಿತಿಗೆ ನಿಯಮಿತವಾಗಿ ಸಲ್ಲಿಸಿ ಮಾರುಕಟ್ಟೆ ಶುಲ್ಕವನ್ನು ಪಾವತಿಸಲು ಸೂಚಿಸಿ ಹಾಗೂ ಅವರುಗಳ ವ್ಯಾಪಾರದ ಲೆಕ್ಕಪುಸ್ತಕಗಳನ್ನು ಪರಿಶೀಲನೆಗಾಗಿ ಹಾಜರುಪಡಿಸಲು, ತಪ್ಪಿದಲ್ಲಿ ಅಂತಹ ವರ್ತಕರುಗಳ ವಿರುದ್ಧ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966 ಹಾಗೂ ನಿಯಮಗಳು 1968 ಮತ್ತು ಸಮಿತಿಯ ಬೈಲಾದನ್ವಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸೂಚಿಸಿ ಪುತ್ತೂರು ಎ.ಪಿ.ಎಂ.ಸಿ.ಯಿಂದ ಈಗಾಗಲೇ ನೋಟೀಸ್ ಜ್ಯಾರಿ ಮಾಡಲಾಗಿರುವುದಾಗಿ ಪುತ್ತೂರು ಎ.ಪಿ.ಎಂ.ಸಿ.ಯ ಪ್ರಭಾರ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿಯವರು ತಿಳಿಸಿರುತ್ತಾರೆ.