‘ನೆಲ್ಯಾಡಿ ಧೂಳುಮಯ’ ಹೆದ್ದಾರಿ ಕಾಮಗಾರಿ ಅವಾಂತರ; ಜನರಿಗೆ ಕಾಡುತ್ತಿದೆ ಆರೋಗ್ಯ ಸಮಸ್ಯೆ

0

 

ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ನೆಲ್ಯಾಡಿ ಪೇಟೆ ಸಂಪೂರ್ಣ ಧೂಳುಮಯಗೊಂಡಿದೆ. ದೂಳುತಿಂದು ಜನರಲ್ಲಿ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದ್ದು ಕೆಮ್ಮು, ಜ್ವರ, ಅಲರ್ಜಿಯಿಂದ ಶಾಲಾ ಮಕ್ಕಳು, ವರ್ತಕರು, ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ದಿನದಲ್ಲಿ ಒಂದೆರಡು ಸಲ ನೀರು ಹಾಯಿಸಲಾಗುತ್ತಿದ್ದರೂ ದೂಳಿನ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಕನಿಷ್ಠ ನಾಲ್ಕೈದು ಸಲವಾದರೂ ಹೆದ್ದಾರಿಯುದ್ದಕ್ಕೂ ನೀರು ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿ ತನಕ ಹೆದ್ದಾರಿಯುದ್ದಕ್ಕೂ ಬೃಹತ್ ಜೆಸಿಬಿ ಯಂತ್ರಗಳು ಘರ್ಜಿಸುತ್ತಿವೆ. ಹೊಸ ರಸ್ತೆ ನಿರ್ಮಾಣಕ್ಕಾಗಿ ಹೆದ್ದಾರಿ ಬದಿಯ ಗುಡ್ಡ ಅಗೆಯಲಾಗುತ್ತಿದೆ. ಹೊಸದಾಗಿ ರಸ್ತೆ ನಿರ್ಮಿಸಿ ಕಾಂಕ್ರಿಟೀಕರಣ ಮಾಡಲು ಈಗಿರುವ ಡಾಮರು ರಸ್ತೆಯನ್ನು ಅಗೆದು ಅಲ್ಲಿಗೆ ಲಾರಿಗಳಲ್ಲಿ ಮಣ್ಣು ತಂದು ರಾಶಿ ಹಾಕಿ ಸಮತಟ್ಟು ಮಾಡಿ ರಸ್ತೆಯನ್ನು ಏರಿಸಲಾಗುತ್ತಿದೆ. ಇದರಿಂದಾಗಿ ಹೆದ್ದಾರಿಯುದ್ದಕ್ಕೂ ಧೂಳು ಆವರಿಸಿಕೊಂಡಿದೆ. ನೆಲ್ಯಾಡಿ ಪೇಟೆಯಲ್ಲಂತೂ ಧೂಳಿನ ಸಮಸ್ಯೆ ಗಂಭೀರವಾಗಿದೆ. ಇಲ್ಲಿ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುವವರು, ಬೈಕ್ ಹಾಗೂ ವಾಹನಗಳಲ್ಲಿ ಸಂಚರಿಸುವವರು ತಮಗೆ ಇಷ್ಟವಿಲ್ಲದಿದ್ದರೂ ಉಚಿತವಾಗಿ ಸಿಗುವ ಧೂಳು ತಿನ್ನಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಶಾಲಾ ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹೆಚ್ಚಿನವರು ಕೆಮ್ಮು, ಅಲರ್ಜಿ, ಜ್ವರಕ್ಕೆ ತುತ್ತಾಗಿರುವುದಾಗಿ ವರದಿಯಾಗಿದೆ.

ಶಾಲಾ ಮಕ್ಕಳಿಗೆ ಕೆಮ್ಮು, ಅಲರ್ಜಿ: ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯು ನೆಲ್ಯಾಡಿ ಪೇಟೆಗೆ ಹೊಂದಿಕೊಂಡೇ ಇದೆ. ಹೆದ್ದಾರಿ ಅಗಲೀಕರಣಕ್ಕೆ ಶಾಲೆಯ ಮುಂಭಾಗದಲ್ಲಿರುವ ಆವರಣಗೋಡೆ ಈಗಾಗಲೇ ನೆಲಸಮಗೊಂಡಿದೆ. ಇಲ್ಲೇ ಪಕ್ಕದಲ್ಲಿ ಪ್ಲೈಓವರ್‌ನ ಕಾಮಗಾರಿಯೂ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಬಿಡುವಿಲ್ಲದೇ ವಾಹನಗಳು ಸಂಚರಿಸುತ್ತಲೇ ಇವೆ. ಶಾಲೆಯ ಒಂದು ಬದಿಯಲ್ಲಿ ಪಡ್ಡಡ್ಕ ಕಡೆಗೆ ಹಾಗೂ ಇನ್ನೊಂದು ಬದಿ ಗ್ರಾಮ ಪಂಚಾಯತ್‌ಗೆ ಹೋಗುವ ರಸ್ತೆ ಇದೆ. ಈ ಎರಡೂ ರಸ್ತೆಗಳಲ್ಲೂ ವಾಹನಗಳು ಸಾಲುಗಟ್ಟಿ ಸಂಚರಿಸುತ್ತಿವೆ. ವಾಹನಗಳ ಓಡಾಟದ ವೇಳೆ ಧೂಳು ಎದ್ದು ಪಕ್ಕದಲ್ಲೇ ಇರುವ ಶಾಲೆಗೆ ನುಗ್ಗಿ ಮಕ್ಕಳ ಹೊಟ್ಟೆ ಸೇರುತ್ತಿದೆ. ಇದರಿಂದಾಗಿ ಮಕ್ಕಳಲ್ಲಿ ವಾಂತಿ, ಕೆಮ್ಮು, ಜ್ವರ, ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದೆ. ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದೂ ಅಲ್ಲಿನ ಮಕ್ಕಳೂ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಖಾಸಗಿ ಶಾಲೆಗಳೂ ಇವೆ. ಬೆಳಿಗ್ಗೆ ಹಾಗೂ ಸಂಜೆಯ ವೇಳೆಗೆ ನೂರಾರು ಮಕ್ಕಳು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಈ ಸಮಯದಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆಯೂ ಇರುತ್ತದೆ. ಮಕ್ಕಳಂತೂ ಧೂಳು ತಿಂದುಕೊಂಡೇ ಸಂಚರಿಸಬೇಕಾಗಿದೆ.

ವರ್ತಕರ ಪಾಡೂ ಹೇಳತೀರದು: ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ನೆಲ್ಯಾಡಿ ಪೇಟೆಯಲ್ಲಿರುವ ವರ್ತಕರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ವರ್ತಕರು ಬೆಳಗ್ಗಿನಿಂದ ಸಂಜೆ ತನಕ ಧೂಳಿನ ಸ್ನಾನ ಮಾಡಿಕೊಂಡೇ ವ್ಯಾಪಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದರ ಜೊತೆಗೆ ಅಂಗಡಿಯೊಳಗಿರುವ ಸಾಮಾಗ್ರಿಗಳನ್ನೂ ಧೂಳಿನಿಂದ ರಕ್ಷಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೆಲವೊಂದು ಅಂಗಡಿಯವರು ಪ್ಲಾಸಿಕ್ ಹೊದಿಕೆ ಹಾಕಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಅಂಗಡಿಯ ಮುಂಭಾಗದಲ್ಲಿನ ಡ್ರೈನೇಜ್‌ಗಳನ್ನು ಮುಚ್ಚದೇ ಇರುವುದರಿಂದ ಕೊಳಚೆ ನೀರಿನ ವಾಸನೆ, ಸೊಳ್ಳೆಗಳ ಕಾಟವನ್ನೂ ಸಹಿಸಿಕೊಂಡೇ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇದೆ.

ವಾಹನ ಚಾಲಕರಿಗೂ ಸಮಸ್ಯೆ: ಹೆದ್ದಾರಿ ಅಗಲೀಕರಣದಿಂದಾಗಿ ನೆಲ್ಯಾಡಿ ಪೇಟೆಯಲ್ಲಿ ರಿಕ್ಷಾ, ಜೀಪು ಚಾಲಕರು ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ಹೆದ್ದಾರಿ ಬದಿಯಲ್ಲಿ ರಿಕ್ಷಾ, ಜೀಪು ನಿಲ್ಲಿಸಿ ಬಾಡಿಗೆ ಮಾಡಬೇಕಾಗಿರುವುದರಿಂದ ಅವರೂ ದೂಳು ತಿಂದುಕೊಂಡೇ ಇರಬೇಕಾಗಿದೆ. ನೆಲ್ಯಾಡಿ ಪೇಟೆಗೆ ದಿನಂಪ್ರತಿ ಸಾವಿರಾರು ಮಂದಿ ಬರುತ್ತಿದ್ದಾರೆ. ಇವರೆಲ್ಲರೂ ಅನಿವಾರ್ಯವಾಗಿ ಧೂಳಿನ ರುಚಿ ಸವಿಯಬೇಕಾಗಿದೆ. ಆದ್ದರಿಂದ ಇವರೆಲ್ಲರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕಂಪನಿಯವರು ಜನರಿಗೆ ದೂಳಿನಿಂದ ರಕ್ಷಣೆ ನೀಡಬೇಕಾಗಿದೆ. ಈ ಬಗ್ಗೆ ಗುತ್ತಿಗೆ ಕಂಪನಿಯವರು ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ.

ನೆಲ್ಯಾಡಿಯಲ್ಲಿ ರಸ್ತೆ ಕಾಮಗಾರಿ ಆರಂಭಿಸಿ 1 ವರ್ಷಕ್ಕಿಂತ ಹೆಚ್ಚು ಸಮಯ ಆಗಿದೆ. ಇಲ್ಲಿ ಕಾಮಗಾರಿ ಆಮೆ ಗತಿಯಿಂದ ಸಾಗುತ್ತಿದೆ. ಪೇಟೆಯ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ತುರ್ತಾಗಿ ಮಾಡುವಂತೆ ಗುತ್ತಿಗೆ ಸಂಸ್ಥೆಗೆ ಹಲವು ಸಲ ಮನವಿ ಮಾಡಿದ್ದೇವೆ. ನೆಲ್ಯಾಡಿ ಪೇಟೆಯಲ್ಲಿ ಧೂಳಿನಿಂದಾಗಿ ಮಕ್ಕಳು, ವರ್ತಕರು, ಸಾರ್ವಜನಿಕರ ಆರೋಗ್ಯ ಕೆಡುತ್ತಿದೆ. ದಿನಕ್ಕೆ ಕನಿಷ್ಠ ನಾಲ್ಕೈದು ಸಲವಾದರೂ ನೀರು ಹಾಕುವಂತೆ ಮನವಿ ಮಾಡಿದರೂ ನಿರ್ಲಕ್ಷಿಸಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ಜನರ ಆರೋಗ್ಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಅಬ್ದುಲ್ ಜಬ್ಬಾರ್, ಉಪಾಧ್ಯಕ್ಷರು, ಗ್ರಾ.ಪಂ.ನೆಲ್ಯಾಡಿ

ಕೆಲ ದಿನಗಳಿಂದ ನೆಲ್ಯಾಡಿ ಪೇಟೆಯಲ್ಲಿ ಧೂಳಿನ ಸಮಸ್ಯೆ ವಿಪರೀತವಾಗಿದೆ. ಇದರಿಂದಾಗಿ ಶಾಲಾ ಮಕ್ಕಳು, ವರ್ತಕರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ಶಾಲೆಗಳಿಂದ ದೂರು ಬರುತ್ತಿದೆ. ಸ್ವತ: ನಾನೇ ಅಲರ್ಜಿಗೆ ಒಳಗಾಗಿದ್ದು ದಿನಲೂ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಕೇರಳದಲ್ಲೂ ಕೆಎನ್‌ಆರ್‌ಸಿ ಕಂಪನಿಯವರು ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದು ಹೊಸದಾಗಿ ಡಾಮರು ಹಾಕಿ ತಾತ್ಕಾಲಿಕವಾಗಿ ಸರ್ವೀಸ್ ರಸ್ತೆ ಮಾಡುತ್ತಿದ್ದಾರೆ. ಆದರೆ ನೆಲ್ಯಾಡಿಯಲ್ಲಿ ಬೇರೆ ಕಡೆಯಿಂದ ತೆಗೆದ ಡಾಮರು ತಂದು ಹಾಕಿ ತಾತ್ಕಾಲಿಕವಾಗಿ ಸರ್ವೀಸ್ ರಸ್ತೆ ಮಾಡಲಾಗುತ್ತಿದೆ. ಹೆದ್ದಾರಿ ಅಗಲೀಕರಣದಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಗುತ್ತಿಗೆ ಕಂಪನಿಗೆ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈಗಿರುವ ಧೂಳಿನ ಸಮಸ್ಯೆಗೆ ಮುಕ್ತಿ ನೀಡಲು ದಿನದಲ್ಲಿ ನಾಲ್ಕೈದು ಸಲವಾದರೂ ನೀರು ಹಾಕಬೇಕು.

ರಫೀಕ್ ಸೀಗಲ್, ಅಧ್ಯಕ್ಷರು, ವರ್ತಕ ಸಂಘ ನೆಲ್ಯಾಡಿ

ದೂಳಿನ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಈಗ ದಿನದಲ್ಲಿ ಮೂರು ಸಲ ಗೋಳಿತ್ತೊಟ್ಟಿನಿಂದ ನೆಲ್ಯಾಡಿ ತನಕ 20 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕರ್‌ನಲ್ಲಿ ನೀರು ತಂದು ಹಾಕಲಾಗುತ್ತಿದೆ. ಅದೇ ರೀತಿ ಗೋಳಿತ್ತೊಟ್ಟಿನಿಂದ ಉಪ್ಪಿನಂಗಡಿ ತನಕ ಅಷ್ಟೇ ಸಾಮರ್ಥ್ಯದ ಇನ್ನೊಂದು ಟ್ಯಾಂಕರ್‌ನಲ್ಲಿ ಹೆದ್ದಾರಿಗೆ ನೀರು ಹಾಕಲಾಗುತ್ತಿದೆ. ಇವರೆಡೂ ಬಾಡಿಗೆ ಟ್ಯಾಂಕರ್‌ಗಳಾಗಿದ್ದು ಚಾಲಕರಿಂದಲೂ ಸಮಸ್ಯೆ ಆಗಿದೆ. ಇನ್ನು ಮುಂದೆ ಕಂಪನಿಯ ಟ್ಯಾಂಕರ್‌ನಲ್ಲಿಯೇ ನೀರು ತುಂಬಿಸಿಕೊಂಡು ಬಂದು ದಿನದಲ್ಲಿ ನಾಲ್ಕು ಸಲ ಹೆದ್ದಾರಿಯುದ್ದಕ್ಕೂ ನೀರು ಹಾಕುತ್ತೇವೆ. ಇದರಿಂದ ದೂಳಿನ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂಬ ವಿಶ್ವಾಸವಿದೆ.

-ಕುಮಾರ್, ಸೀನಿಯರ್ ಇಂಜಿನಿಯರ್, ಕೆಎನ್‌ಆರ್ ಕಂಪನಿ

LEAVE A REPLY

Please enter your comment!
Please enter your name here