ಬಿಎಂಎಸ್ ಆಟೋ ರಿಕ್ಷಾ ಚಾಲಕ- ಮ್ಹಾಲಕರ ಸಂಘದ 41ನೇ ಮಹಾಸಭೆ

0

ಪುತ್ತೂರು:ಯಾವುದೇ ಸಮಯದಲ್ಲಿಯೂ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಆಟೋ ಚಾಲಕರೇ ಪ್ರಮುಖವಾಗಿದ್ದು ಅವರ ಸೇವೆ ವೈದ್ಯರಿಗಿಂತಲೂ ದೊಡ್ಡ ಸೇವೆಯಾಗಿದೆ. ಇಂತಹ ರಿಕ್ಷಾ ಚಾಲಕರ ಜೀವನ ಭದ್ರತೆಗೆ ಮಧ್ಯಮ ವರ್ಗದವರಿಗೆ ನೀಡುವ ಎಂಎಸ್‌ಎಂಇ ಸೇರಿಸಬೇಕು. ಅವರಿಗೆ ಇಎಸ್‌ಐ ಸೌಲಭ್ಯ ನೀಡುವಂತೆ ಹೋರಾಟ ನಡೆಸಬೇಕು ಎಂದು ಪುತ್ತೂರಿನ ಖ್ಯಾತ ವೈದ್ಯರು, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಗೌರವಾಧ್ಯಕ್ಷ ಡಾ. ಎಂ.ಕೆ ಪ್ರಸಾದ್ ಹೇಳಿದರು.


ಪುತ್ತೂರು ಕೋ-ಆಪರೇಟಿವ್ ಟೌನ್‌ಬ್ಯಾಂಕ್‌ನ ಸಭಾಂಗಣದಲ್ಲಿ ಜ.14 ರಂದು ನಡೆದ ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ-ಮ್ಹಾಲಕರ ಸಂಘದ 41 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರಿನ ರಿಕ್ಷಾ ಚಾಲಕರು ಇತರ ಕಡೆಯವರಂತಲ್ಲ. ಶಿಸ್ತಿನಲ್ಲಿದ್ದಾರೆ. ಸ್ವ ಉದ್ಯೋಗ ಮಾಡಿ ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಿದ್ದಾರೆ. ಒಂದೇ ಒಂದು ಅಪಘಾತವಿಲ್ಲದೆ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ತಲುಪಿಸುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಲ್ಲೂ ರಿಕ್ಷಾ ಚಾಲಕರ ಪರಿಶ್ರಮವಿದೆ. ಪುತ್ತೂರಿನಲ್ಲಿ ಸಿಟಿ ಬಸ್ ಸೌಲಭ್ಯ ಇಲ್ಲದೇ ಇದ್ದರೂ ಕನಿಷ್ಠ ದರದಲ್ಲಿ ಪ್ರಯಾಣಿಕರಿಗೆ ಸಂಚಾರ ಸೌಲಭ್ಯವನ್ನು ಒದಗಿಸುತ್ತಿದ್ದಾರೆ. ರಾತ್ರಿಯ ವೇಳೆಯೂ ಉತ್ತಮ ಸೇವೆ ನೀಡುತ್ತಿದ್ದಾರೆ. ಆಟೋದಲ್ಲಿ ಬಿಟ್ಟು ಹೋದ ಬೆಲೆ ಬಾಳುವ ವಸ್ತುಗಳನ್ನು ಅದರ ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ರಿಕ್ಷಾ ಚಾಲಕರು ಎಂದ ಅವರು ಆರ್ಥಿಕ ಸುಧಾರಣೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಠಿಯಿಂದ ಪ್ರತಿಯೊಬ್ಬರೂ ಇಲೆಕ್ಟ್ರಿಕ್ ರಿಕ್ಷಾಗಳನ್ನು ಖರೀದಿಸಬೇಕು ಎಂದರು.

ಮನವಿ ಪತ್ರ ಬಿಡುಗಡೆ ಮಾಡಿದ ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿ ಮಾತನಾಡಿ, ಗಡಿ ಭಾಗದಲ್ಲಿ ಸೈನಿಕರು ಸಲ್ಲಿಸುವ ಸೇವೆಯಂತೆ ಆಟೋ ಚಾಲಕರು ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುವ ಮೂಲಕ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಸೇವೆ ನೀಡುವ ಮೂಲಕ ಸೇವೆಯ ಜೊತೆಗೆ ತಮ್ಮ ಕಾಯಕವನ್ನು ನಡೆಸಿ ಮಾದರಿಯಾಗಿದ್ದಾರೆ ಎಂದರು.

ಸಂಘದ ಕ್ಷೇಮ ನಿಧಿಗೆ ರೂ.25000 ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ ಕಿಶೋರ್, ದಾನಿಗಳ ಮೂಲಕ ಧನ ಸಂಗ್ರಹಿಸಿ ಸಂಘದ ಕ್ಷೇಮ ನಿಧಿಯನ್ನು ಒಂದು ಕೋಟಿ ರೂಪಾಯಿಗೆ ಏರಿಕೆ ಮಾಡುವಂತೆ ಸಲಹೆ ನೀಡಿದರು.

ಬಿಎಂಎಸ್ ಆಟೋ ರಿಕ್ಷಾ ಚಾಲಕ-ಮ್ಹಾಲಕರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ಸುಧಾಕರ್ ಮಾತನಾಡಿ, ಬಿಎಂಎಸ್ ಸಂಘದ ಸಾಧನೆಯನ್ನು ಯುವ ಚಾಲಕರಿಗೆ ತಿಳಿಸುವ ನಿಟ್ಟಿನಲ್ಲಿ ಸಂಘದ ಸಾಧನೆಯನ್ನು ಒಳಗೊಂಡ ಪುಸ್ತಕವನ್ನು ಹೊರತರಬೇಕು ಎಂದರು.
ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಾತನಾಡಿ, ಸಂಘಟನೆಯ ಮಹತ್ವ, ಸೇವಾ ಕಾರ್ಯಗಳು ಹಾಗೂ ಸಂಘಟನೆಯಿಂದ ಸದಸ್ಯರಿಗೆ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಪ್ರಿಯ ನಾಯಕ್ ಮಾತನಾಡಿ, ಆಟೋ ಚಾಲಕರಾಗಿದ್ದ ತನ್ನ ತಂದೆಯ ಸೇವೆಯನ್ನು ಗುರುತಿಸಿ ತನ್ನನ್ನು ಸನ್ಮಾನಿಸಿ ಗೌರವಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜೇಶ್ ಕೆ. ಮರೀಲ್ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಸದಸ್ಯರಿಗೆ ತುರ್ತು ಸಂದರ್ಭದಲ್ಲಿ ನೆರವು ನೀಡಲು ಕ್ಷೇಮ ನಿಧಿಯನ್ನು ಸ್ಥಾಪಿಸಲಾಗಿದೆ ಎಂದ ಅವರು ಸಂಘಟನೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರು.

ಮಹಾಪೋಷಕರು, ಮಾಜಿ ಅಧ್ಯಕ್ಷರಾದ ಜಿ.ಹುಸೈಸ್, ವಿವಿಧ ಘಟಕಗಳ ಅಧ್ಯಕ್ಷರಾದ ಪುರುಷರಕಟ್ಟೆಯ ಮಾದಪ್ಪ ನಾಕ್, ಮುಂಡೂರಿನ ನವೀನ್, ಕುರಿಯದ ಅಬ್ದುಲ್ ರಜಾಕ್, ಉಪ್ಪಿನಂಗಡಿಯ ಹರೀಶ್, ದಾರಂದಕುಕ್ಕುನ ಬಾಬು ಗೌಡ, ಕಾಣಿಯೂರಿನ ಆನಂದ ಪೂಜಾರಿ, ಸುಳ್ಯಪದವು ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಸದಸ್ಯರುಗಳಿಗೆ ಆಟೋ ಸಾರಥಿ ಬಿರುದು, ಸನ್ಮಾನ: ಹಿರಿಯ ಸದಸ್ಯರಾದ ರಾಮಚಂದ್ರ, ಮಹಾಲಿಂಗ ಮಣಿಯಾಣಿ, ಅಬ್ದುಲ್ಲಾ ಪುರುಷರಕಟ್ಟೆ, ಹಸೈನಾರ್ ಕುರಿಯ, ಶೇಖರ ನಾಕ್ ರವರಿಗೆ ಆಟೋ ಸಾರಥಿ ಬಿರುದು ನೀಡಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಪ್ರಿಯ ನಾಯಕ್‌ರವರನ್ನು ಸನ್ಮಾನಿಸಲಾಯಿತು. ಸಂಘದಿಂದ ನಡೆಸಲಾದ ಲಕ್ಕಿಡಿಪ್ ಕೂಪನ್‌ನ್ನು ಅತೀ ಹೆಚ್ಚು ಮಾರಾಟ ಮಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ, ಜನಾರ್ದನ ಪೂಜಾರಿ, ರಾಘವೇಂದ್ರ ರೈ, ರಾಮಕುಂಜ ಘಟಕ ಹಾಗೂ ಮುಂಡೂರು ಘಟಕಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಕ್ಷೇಮ ನಿಧಿಗೆ ಚಾಲನೆ:

ದಾನಿಗಳಿಂದ ಸಂಗ್ರಹಿಸಲಾದ ಬಿ.ಎಂ.ಎಸ್ ಕ್ಷೇಮ ನಿಧಿಗೆ ಚಾಲನೆ ನೀಡಲಾಗಿದ್ದು ಇದರ ಮೊತ್ತದ ಚೆಕ್‌ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಮನವಿ ಪತ್ರ ಬಿಡುಗಡೆ: ಸಂಘದ ಸದಸ್ಯರ ಕ್ಷೇಮ ನಿಧಿಗೆ ದೇಣಿಗೆ ಸಂಗ್ರಹಣೆಗೆ ಮನವಿ ಪತ್ರವನ್ನು ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿ ಬಿಡುಗಡೆ ಮಾಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಪ್ರಿಯ ನಾಯಕ್ ಪ್ರಾರ್ಥಿಸಿದರು. ವಿಕ್ರಂ ಪರ್ಲಡ್ಕ ವರದಿ ವಾಚಿಸಿದರು. ಸದಸ್ಯ ರವಿ ನೆಹರು ನಗರ ಲೆಕ್ಕಪತ್ರ ಮಂಡಿಸಿದರು. ಸದಸ್ಯರಾದ ಮಹಾಲಿಂಗ ಪಾಟಾಳಿ, ಚಂದ್ರಶೇಖರ ಕುಲಾಲ್, ಗಣೇಶ್ ನಾಯಕ್ ಪುರುಷರ ಕಟ್ಟೆ, ನಝೀರ್ ಮರೀಲ್, ಸುಂದರ ನಾಯ್ಕ ಪುರುಷರಕಟ್ಟೆ, ಮಾಜಿ ಅಧ್ಯಕ್ಷರಾದ ಬಿ.ಕೆ ದೇವಪ್ಪ ಗೌಡ, ರಾಘವೇಂದ್ರ ರೈ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸತೀಶ್ ಪ್ರಭು ಮಣಿಯ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಪ್ರಭು ಮಣಿಯ ಸ್ವಾಗತಿಸಿ, ವಂದಿಸಿದರು. ಅಗಲಿದ ಸದಸ್ಯರಿಗೆ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಶೇಷವಾಗಿ ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಉಪಸ್ಥಿತರಿದ್ದ ಸದಸ್ಯರ ಹೆಸರು ಹಾಕಿ ಚೀಟಿ ಎತ್ತುವ ಮೂಲಕ ವಿಜೇತ 20 ಮಂದಿ ಸದಸ್ಯರಿಗೆ ಕುಕ್ಕರ್ ಬಹುಮಾನ ನೀಡಲಾಯಿತು.

ಲಂಚ ರಹಿತ ಜಿಲ್ಲೆಯಾಗಲು ಬಿಎಂಎಸ್ ಹೋರಾಟ ನಡೆಸಬೇಕು
ಸರ್ವೆಯರ್ ತಪ್ಪು ಮಾಡಿ ಜಾಗ ಯಾರ್‍ಯಾರ ಹೆಸರಿಗೆ ಬರೆಯುತ್ತಾರೆ. ತಪ್ಪಿ ಔಷದಿ ನೀಡಿದರೆ ವೈದ್ಯರಿಗೆ ಶಿಕ್ಷೆ ಆಗುವಂತೆ ಸರ್ವೆಯರ್ ಕಂದಾಯ ಇಲಾಖೆಯವರಿಗೆ ಆಗಬೇಕು. ಆ ತಪ್ಪಿಗೆ ಅವರೆ ಕಾರಣ. ದೂರದ ಹಳ್ಳಿಯಿಂದ ಬರುವ ಬಡವರಿಗೆ ತೊಂದರೆ ಉಂಟಾಗುತ್ತದೆ. ಲಂಚ ರಹಿತವಾದ ದೇಶ ನಮ್ಮದಾಗಬೇಕು. ದ.ಕ ಉಡುಪಿ ಲಂಚ ರಹಿತವಾದ ಜಿಲ್ಲೆಯಾಗಬೇಕು. ಇದಕ್ಕಾಗಿ ಬಲಿಷ್ಠ ಸಂಘಟನೆಯಾಗಿರುವ ಬಿಎಂಎಸ್ ಹೋರಾಟ ನಡೆಸಬೇಕು ಎಂದು ಡಾ.ಎಂ.ಕೆ ಪ್ರಸಾದ್ ಹೇಳಿದರು.

LEAVE A REPLY

Please enter your comment!
Please enter your name here