ಪುತ್ತೂರು: ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪ್ರತಿನಿಧಿಸಲ್ಪಡುವ ಮಂಗಳೂರು ವಿವಿ ಮಹಿಳಾ ಕ್ರಿಕೆಟ್ ತಂಡಕ್ಕೆ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಳೆದ 12 ದಿನಗಳ ತರಬೇತಿ ಶಿಬಿರವು ಜ.29 ರಂದು ಸಮಾಪ್ತಿ ಕಂಡಿದೆ. ಅಂತರ್ ವಿ.ವಿ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಿ.ವಿ ತಂಡ ಚೆನ್ನೈ ಯೂನಿವರ್ಸಿಟಿ ತಂಡದೊಂದಿಗೆ ಮೈಸೂರಿನಲ್ಲಿ ಆಡಬೇಕಿದೆ.
ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಸಮಾರೋಪ ಕಾರ್ಯದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಹಾಗೂ `ಬಿಗ್ ಹಿಟ್ಟರ್’ ಎಂದೇ ಹೆಸರು ಗಳಿಸಿರುವ ಹಿರಿಯ ಕ್ರಿಕೆಟ್ ಆಟಗಾರ ನರಸಿಂಹ ಪ್ರಸಾದ್ರವರು ಮಾತನಾಡಿ, ಮಹಿಳಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಯಾಸ್ ಪಿಂಟೋ ಹಾಗೂ ನಾನು ಬಾಲ್ಯದಿಂದಲೂ ಒಟ್ಟಿಗೆ ಕ್ರಿಕೆಟ್ ಆಡಿ ಬೆಳೆದವರು. ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಮುಂದಿನ ದಿನಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಚೆನ್ನಾಗಿ ಆಡಿ ವಿವಿ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಮಾತನಾಡಿ, ಇತ್ತೀಚೆಗೆ ರಾಜ್ಯ ಮಟ್ಟದ ಮಹಿಳಾ ವಾಲಿಬಾಲ್ ತಂಡದ ತರಬೇತಿ ಕೂಡ ಫಿಲೋಮಿನಾ ಕ್ರೀಡಾಂಗಣದಲ್ಲಿ ಜರಗಿತ್ತು. ಕ್ರಿಕೆಟ್ ಎಂಬುದು ದೈಹಿಕ ಹಾಗೂ ಮಾನಸಿಕ ದೃಢತೆಯ ಆಟವಾಗಿದೆ. ಆಟಗಾರ್ತಿಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ದೃಢತೆಯನ್ನು ಹೊಂದಿ ಕ್ರೀಡೆಯಲ್ಲಿ ಜಯಶಾಲಿಗಳಾಗಿ ಎಂದರು.
ಪುತ್ತೂರು ಯೂನಿಯನ್ ಕ್ರಿಕೆಟರ್ಸ್ನ ಕಾರ್ಯದರ್ಶಿ ವಿಶ್ವನಾಥ ನಾಯಕ್ ಮಾತನಾಡಿ, ಯೂನಿಯನ್ ಕ್ರಿಕೆಟರ್ಸ್ ಕೆಎಸ್ಸಿಎಯೊಂದಿಗೆ ಸಂಯೋಜಿತಗೊಂಡಿದೆ. ಕಳೆದ ಎಂಟು ವರ್ಷದಿಂದ ಪುತ್ತೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣವಾಗಬೇಕು ಎನ್ನುವ ಕನಸು ಕಂದಾಯ ಇಲಾಖೆಯು ಈಗಾಗಲೇ ಜಾಗವೊಂದು ಗುರುತು ಮಾಡಿಕೊಳ್ಳುವ ಮೂಲಕ ನನಸು ಆಗುತ್ತಿದೆ. 15 ವರ್ಷದ ಹಿಂದೆ ಇದೇ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ನ ಮಾಜಿ ನಾಯಕಿ ಮಿಥಾಲಿರಾಜ್ ಹಾಗೂ ವೇಗದ ಬೌಲರ್ ಜೂಲನ್ ಗೋಸ್ವಾಮಿರವರು ಆಡಿದ್ದಾರೆ. ಆಟಗಾರ್ತಿಯರಿಗೆ ತಾಳ್ಮೆ ಬಹಳ ಮುಖ್ಯ ಜೊತೆಗೆ ಮಾನಸಿಕ ಸ್ಥಿರತೆ ಕೂಡ ಎಂದರು.
ವಿವಿ ಮಹಿಳಾ ತಂಡದ ಕೋಚ್ ಹಾಗೂ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
18 ಮಂದಿ ಆಟಗಾರ್ತಿಯರು…
ಮಂಗಳೂರು ವಿವಿಗೊಳಪಟ್ಟ ಕಾಲೇಜುಗಳ ಪ್ರತಿಭಾನ್ವಿತ 16 ಮಹಿಳಾ ಕ್ರಿಕೆಟ್ ಆಟಗಾರ್ತಿಯರನ್ನು ಮಂಗಳೂರು ವಿವಿ ತಂಡಕ್ಕೆ ಆರಿಸಲಾಗಿದ್ದು, ಬ್ರಹ್ಮಾವರ್ ಎಸ್ಎಂಎಸ್ ಕಾಲೇಜಿನ ನಿಖಿತಾ(ಬಿಕಾಂ), ವರ್ಷಿತಾ ಶೆಟ್ಟಿ(ಎಂಕಾಂ), ಲಕ್ಷ್ಮೀ ಬೀರಪ್ಪ ಮಗಿ(ಬಿಎ), ಸ್ವರ್ಣಗೌರಿ(ಬಿಕಾಂ), ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನ ತಪಸ್ವಿ ಆರ್.ವಚ್ಛನಿ(ಬಿಎ), ಪ್ರೀತಿ ಶೆಟ್ಟಿ(ಬಿಕಾಂ), ಮಂಗಳೂರು ಯೂನಿವರ್ಸಿಟಿ ಕಾಲೇಜಿನ ಕೀರ್ತನಾ(ಬಿಎಸ್ಸಿ) ಹಾಗೂ ವರ್ಷಾ(ಬಿಕಾಂ), ಮಂಗಳೂರು ಆಗ್ನೇಸ್ ಕಾಲೇಜಿನ ಪ್ರಕೃತಿ ಶೆಟ್ಟಿ(ಬಿಕಾಂ), ಕೊಣಾಜೆ ಯೂನಿವರ್ಸಿಟಿ ಕ್ಯಾಂಪಸ್ನ ಹರಿಣಿ(ಬಿಪಿಎಡ್), ಜೊಮೊಲ್ ಕೆ.ವೈ(ಬಿಪಿಎಡ್), ಕಾವ್ಯ ಕೆ(ಬಿಪಿಎಡ್), ಅನನ್ಯ ಸುಪ್ರಿಯ ಸಿ(ಬಿಪಿಎಡ್), ಶರಣ್ಯ ಜೆ.ಕೆ(ಬಿಪಿಎಡ್), ನವ್ಯ ಸಿ.ಆಯಿಲ್(ಬಿಎಸ್ಸಿ), ಉಡುಪಿ ತ್ರೀಶಾ ಕಾಲೇಜಿನ ಹೆಝೆಲ್ ಲೂವಿಸ್ ರೊಸಾರಿಯೋ(ಬಿಕಾಂ) ತಂಡದಲ್ಲಿದ್ದಾರೆ. ವರ್ಷಿತಾ ಶೆಟ್ಟಿ ನಾಯಕಿಯಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ. ತಂಡದ ಮ್ಯಾನೇಜರ್ ಆಗಿ ದೈಹಿಕ ಶಿಕ್ಷಣ ನಿರ್ದೇಶಕಿ ವಸುಧಾ ಎಸ್, ಮುಖ್ಯ ತರಬೇತುದಾರರಾಗಿ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಫಿಲೋಮಿನಾ ಕ್ಯಾಂಪಸ್ಸಿಗೆ ಆಗಮಿಸುವಾಗ ಒಬ್ಬಂಟಿಯಾಗಿರುವ ನಾವು ಇದೀಗ ಒಂದು ಫ್ಯಾಮಿಲಿಯಾಗಿದ್ದೇವೆ. ಬೆಳಿಗ್ಗೆ ಹಾಗೂ ಸಂಜೆ ಪ್ರ್ಯಾಕ್ಟೀಸ್ ಸೆಷನ್ ಇದ್ದು, ನಾವೆಲ್ಲಾ ಉತ್ಸುಕದಿಂದ ಪಾಲ್ಗೊಂಡಿದ್ದೇವೆ. ಕಾಲೇಜು ನಮಗೆ ಉತ್ತಮ ಸೌಕರ್ಯಗಳನ್ನು ನೀಡಿರುವುದರ ಜೊತೆಗೆ ಉತ್ತಮ ಕ್ರೀಡಾಂಗಣದಲ್ಲಿ ನಾವು ಆಭ್ಯಾಸ ಮಾಡಿಕೊಂಡಿದ್ದೇವೆ ಎಂಬ ಹೆಮ್ಮೆಯಿದೆ ನಮಗೆ. ಕೋಚ್ ಆಗಿರುವ ಎಲ್ಯಾಸ್ ಪಿಂಟೋ ಸರ್ ನಮಗೆ ಉತ್ತಮ ಮಾರ್ಗದರ್ಶನ ನೀಡಿದ್ದು ಉತ್ತಮವಾಗಿ ಆಡುತ್ತೇವೆ ಎಂಬ ಭರವಸೆ ನಮ್ಮದಾಗಿದೆ.
-ತಪಸ್ವಿ ಆರ್.ವಚ್ಛನಿ, ಆಟಗಾರ್ತಿ