ನಿಡ್ಪಳ್ಳಿ: ಸರ್ವಋತು ರಸ್ತೆ ನಿರ್ಮಾಣದ ಮೂಲಕ ಕೂಟೇಲು ಚಿಕ್ಕೋಡಿ ಗೋಳಿತ್ತಡಿ ಭಾಗದ ಜನರ ಬಹುಕಾಲದ ಕನಸು ನನಸು

0

ನಿಡ್ಪಳ್ಳಿ; ಕೂಟೇಲಿನಿಂದ ಚಿಕ್ಕೋಡಿ ಮೂಲಕ ಗೋಳಿತ್ತಡಿ ಕಟ್ಟತ್ತಾರು ಹೋಗುವ ಒಳದಾರಿಯನ್ನು ರಸ್ತೆಯನ್ನಾಗಿ ನಿರ್ಮಿಸುವ ಮೂಲಕ ಈ ಭಾಗದ ಬಹುಕಾಲದ ಕನಸು ನನಸಾಗಿದೆ.
ಕೂಟೇಲು ಕಿಂಡಿ ಅಣೆಕಟ್ಟಿನಿಂದ ಮುಂದೆ ತೋಡಿನ ಬದಿ ಸುಮಾರು ನೂರು ಮೀಟರ್ ಉದ್ದ ಕೇವಲ ಕಾಲುದಾರಿ ಮೂಲಕ ನಡೆದು ಕೊಂಡು ಚಿಕ್ಕೋಡಿ ರಸ್ತೆಯನ್ನು ತಲುಪಬೇಕಿತ್ತು. ಆ ದಾರಿ ಮಾತ್ರ ಸ್ಥಳೀಯರ ವರ್ಗ ಜಾಗವಾಗಿದ್ದು ದಾರಿ ಬದಿಯಲ್ಲಿ ಫಲ ಬರುವ ತೆಂಗಿನ ಮರ ಇತ್ತು. ಅದನ್ನು ತೆಗೆದು ದಾರಿಯನ್ನು ಹತ್ತು ಅಡಿ ಅಗಲ ಮಾಡಿ 4 ಚಕ್ರದ ವಾಹನ ಹೋಗುವ ಹಾಗೆ ನಿರ್ಮಿಸಲಾಯಿತು.ಇದರಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆ ಒಂದು ಈಡೇರಿದಂತಾಗಿದೆ.
ರಸ್ತೆಗೆ ಜಾಗ ಬಿಟ್ಟ ಉದಾರಿಗಳು; ದಾರಿ ಬದಿಯಲ್ಲಿ ಮೋನಪ್ಪ ಪೂಜಾರಿ, ಶೇಷಪ್ಪ ಪೂಜಾರಿ, ಸಂಜೀವ ಪೂಜಾರಿ, ಸುಂದರ ಪೂಜಾರಿ ಇವರಿಗೆ ಸೇರಿದ ತೆಂಗಿನ ಮರ ಇತ್ತು. ತೆಂಗಿನ ಮರ ತೆಗೆದರೆ ಮಾತ್ರ ರಸ್ತೆಯಾಗಿ ಮಾಡಲು ಸಾಧ್ಯ ಎಂದು ವಾರಿಸುದಾರರಲ್ಲಿ ಮಾತನಾಡಿ ಮನವರಿಕೆ ಮಾಡಿದಾಗ ಅವರು ಒಪ್ಪಿಗೆ ಸೂಚಿಸಿದರು. ಸ್ಥಳೀಯರಿಂದ ಧನ ಸಂಗ್ರಹಿಸಿ  ಅವರಿಗೆ  ಧನ ಸಹಾಯ ನೀಡಿ ತೆಂಗಿನ ಮರ ಕಡಿಯಲಾಯಿತು.ಅಲ್ಲದೆ ಜನಾರ್ದನ ಗೌಡರವರೂ ರಸ್ತೆ ಅಗಲಕ್ಕೆ ತನ್ನ ಜಾಗವನ್ನು ಸ್ವಲ್ಪ ಬಿಟ್ಟು ಕೊಟ್ಟಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಶ್ರಮ ಪಟ್ಟವರು ಇವರು: ಅದೆಷ್ಟೋ ವರ್ಷಗಳಿಂದ ಅಭಿವೃದ್ಧಿ ಕಾಣದ ಚಿಕ್ಕೋಡಿ ಗೋಳಿತ್ತಡಿ ಭಾಗ ಅಭಿವೃದ್ಧಿ ಆಗ ಬೇಕಾದರೆ ಇಲ್ಲಿಗೆ ರಸ್ತೆ ನಿರ್ಮಾಣ ಆಗಬೇಕು ಎಂದು ಮನಗಂಡ ಇಲ್ಲಿಯ ಕೆಲವರು ಪ್ರಯತ್ನಿಸಿ ರಸ್ತೆ ನಿರ್ಮಾಣ ಮಾಡಿದರು. ಕೆಲವು ವರ್ಷಗಳ ಹಿಂದೆಯೇ ಇಲ್ಲಿಯ ಜನಪ್ರತಿನಿಧಿಗಳಲ್ಲಿ ಮನವಿ ಸಲ್ಲಿಸಿದರೂ ಅದಕ್ಕೆ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ಇಲ್ಲಿಯ ಸ್ಥಳೀಯರಾದ ರಘುರಾಮ ಆಳ್ವ ಗೋಳಿತ್ತಡಿ, ಸತೀಶ್ ರೈ ಹೊಸಮನೆ, ಚಂದ್ರಶೇಖರ ಪ್ರಭು ಗೋಳಿತ್ತಡಿ ಇವರು ಸ್ಥಳೀಯ ಪಂಚಾಯತ್ ಸದಸ್ಯರಾದ ಮುರಳೀಕೃಷ್ಣ ಮುಂಡೂರು ಇವರ ಸಹಕಾರದೊಂದಿಗೆ ಪ್ರಯತ್ನಿಸಿದ ಫಲವಾಗಿ ಸರ್ವಋತು ರಸ್ತೆಯಾಗಿ ನಿರ್ಮಾಣವಾಗಿ ಈ ಭಾಗದ ಜನರ  ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಇನ್ನು ಇದರ ಅಭಿವೃದ್ಧಿಗೆ ಶಾಸಕರ ಮತ್ತು ಜಿಲ್ಲಾ ಪಂಚಾಯತ್ ಇಲಾಖೆಯ ಅನುದಾನಕ್ಕೆ ಇಲ್ಲಿಯ ಸ್ಥಳೀಯರು ಕಾಯುತ್ತಿದ್ದಾರೆ. 
ಶಾಸಕರ ಅನುದಾನದಲ್ಲಿ ರಸ್ತೆಯ ಅಭಿವೃದ್ಧಿಗೆ ಪೂರಕವಾಗಿ ಸೇತುವೆ ನಿರ್ಮಾಣ: ಚಿಕ್ಕೋಡಿ ಎಂಬಲ್ಲಿ ಶಿಥಿಲಗೊಂಡಿದ್ದ ಸಣ್ಣ ಸೇತುವೆಯನ್ನು ತೆಗೆದು ಶಾಸಕ ಸಂಜೀವ ಮಠಂದೂರುರವರ 30 ಲಕ್ಷ ಅನುದಾನದಲ್ಲಿ 10 ಅಡಿ ಅಗಲದ ಸೇತುವೆ ನಿರ್ಮಾಣವಾಗಿರುವುದು ರಸ್ತೆಯ ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಿದೆ. ರಸ್ತೆಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಬೇಕಾಗಿದ್ದು ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಲಿ ಎಂಬುದು ಇಲ್ಲಿಯ ಜನರ ಆಶಯ.

LEAVE A REPLY

Please enter your comment!
Please enter your name here