ಪುತ್ತೂರು: ಹಲ್ಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಅಬ್ದುಲ್ ರಜಾಕ್ ಮತ್ತು ಸಫೀಯಾ ಎಂಬವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
2022ರ ಫೆಬ್ರವರಿ 14ರಂದು ಮೊಟ್ಟೆತ್ತಡ್ಕ ನಿವಾಸಿ ಕುರೆ ಹನೀಫ್, ಶಾಹಿರ್, ಅಬ್ದುಲ್ ರಜಾಕ್ ಮತ್ತು ಸಫಿಯಾರವರು ನೆರೆಮನೆಯ ಸೆಲೆಸ್ತಿನ್ರವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ಧಗಳಿಂದ ಬೈದು, ಸೆಲೆಸ್ತಿನ್ರವರ ಮನೆಯ ಸಿಮೆಂಟಿನ ಶೀಟ್ ಹಾಗೂ ಟಾಯ್ಲೆಟಿನ ಸಿಮೆಂಟ್ ಶೀಟ್ಗೆ ಹೊಡೆದು ಹುಡಿ ಮಾಡಿದ್ದಾರೆ ಎಂದು ಕೇಸು ದಾಖಲಾಗಿತ್ತು. ಸೆಲೆಸ್ತಿನ್ರವರು ನೀಡಿದ್ದ ದೂರಿನಂತೆ ಕುರೆ ಹನೀಫ್, ಶಾಹಿರ್, ಅಬ್ದುಲ್ ರಜಾಕ್ ಮತ್ತು ಸಫಿಯಾರವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 447, 448, 323, 354, 504, 506 ಜೊತೆಗೆ 34 ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿತ್ತು.
ನಂತರ ಕುರೆ ಹನೀಫ್ ಮತ್ತು ಶಾಹಿರ್ ಅವರನ್ನು ಪೊಲೀಸರು ಬಂಧಿಸಿ ಪ್ರಧಾನ ವ್ಯವಹಾರಿಕ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಂತರ ನ್ಯಾಯಾಲಯದಿಂದ ಅವರು ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಇತರ ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ಸಫಿಯಾರವರು ಖ್ಯಾತ ವಕೀಲ ಮಹೇಶ್ ಕಜೆಯವರ ಮುಖಾಂತರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ರುಡಾಲ್ಫ್ ಪಿರೇರಾರವರು ಆರೋಪಿಗಳಿಗೆ ಶರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.