ಪುತ್ತೂರು: ಪುರುಷರಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹೋಳಿಗೆ ಮತ್ತು ಇತರ ಸಿಹಿತಿಂಡಿ ತಯಾರಿಕಾ ಸಂಸ್ಥೆಯಾಗಿರುವ ಉದಯಭಾಗ್ಯ ಹೋಮ್ ಇಂಡಸ್ಟ್ರೀಸ್ ಇದರ ಸಹಸಂಸ್ಥೆ `ಹೋಳಿಗೆ ಮನೆ ಮತ್ತು ಚಾಟ್ಸ್’ ಎ.6ರಂದು ಪುರುಷರಕಟ್ಟೆ ಸಿದ್ದಣ್ಣ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ಸಂಸ್ಥೆಯ ಪಾಲುದಾರರಾದ ಎ ನವೀನ್ ಪ್ರಭು, ಅನಿಲ್ ಪ್ರಭು ಹಾಗೂ ದೇವಿಪ್ರಸಾದ್ ಅವರ ತಾಯಿ ಹೇಮಾವತಿ ಅವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.
ಶ್ರದ್ಧೆ, ಶ್ರಮ ಇದ್ದಾಗ ವ್ಯವಹಾರ ಯಶಸ್ಸು-ಶ್ರೀನಿವಾಸ್ ಎಚ್.ಬಿ
ಸರ್ವೆ ಎಸ್ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು, ಬೊಳ್ವಾರು ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದ ಸಂಸ್ಥಾಪಕರೂ ಆಗಿರುವ ಶ್ರೀನಿವಾಸ್ ಎಚ್.ಬಿ ಮಾತನಾಡಿ ನಾವು ಮಾಡುವ ವ್ಯವಹಾರದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಶ್ರಮ ಇದ್ದಾಗ ಅಂತಹ ಸಂಸ್ಥೆ ಯಶಸ್ಸು ಸಾಧಿಸುತ್ತದೆ. ನನ್ನ ಹಿರಿಯ ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವುದು ನನಗೆ ಸಂತೋಷ ತಂದಿದೆ. ಇಲ್ಲಿ ಶುಭಾರಂಭಗೊಂಡಿರುವ ಹೋಳಿಗೆ ಮನೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಪಾಲುದಾರರ ಪೈಕಿ ಅನಿಲ್ ಪ್ರಭು ಹಾಗೂ ದೇವಿಪ್ರಸಾದ್ ಅವರು ಶ್ರೀನಿವಾಸ್ ಎಚ್.ಬಿ ಅವರ ಹಿರಿಯ ವಿದ್ಯಾರ್ಥಿಗಳಾಗಿದ್ದು ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಎಚ್.ಬಿ ಅವರು ಎ ನವೀನ್ ಪ್ರಭು, ಅನಿಲ್ ಪ್ರಭು ಹಾಗೂ ದೇವಿಪ್ರಸಾದ್ ಅವರನ್ನು ತಮ್ಮ ವೈಯಕ್ತಿಕ ನೆಲೆಯಲ್ಲಿ ಶಾಲು ಹೊದಿಸಿ, ಹೂ ನೀಡಿ ಅಭಿನಂದಿಸಿ ಗೌರವಿಸಿದರು. ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಹಿರಿಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಿದ ಶ್ರೀನಿವಾಸ್ ಎಚ್.ಬಿ ಅವರ ನಡೆ ಪ್ರಶಂಸೆಗೆ ಪಾತ್ರವಾಯಿತು.
ಉದ್ಯಮ ಬೆಳೆದಂತೆ ಗ್ರಾಮದ ಅಭಿವೃದ್ಧಿ-ರವಿಚಂದ್ರ
ನರಿಮೊಗರು ಗ್ರಾ.ಪಂ ಪಿಡಿಓ ರವಿಚಂದ್ರ ಮಾತನಾಡಿ ಇತ್ತೀಚಿನ ವರ್ಷದಲ್ಲಿ ಪುರುಷರಕಟ್ಟೆ ಪೇಟೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಇಲ್ಲಿ ಉದ್ಯಮಗಳು ಹೆಚ್ಚಾದಂತೆ ಗ್ರಾಮದ ಅಭಿವೃದ್ಧಿಯೂ ಆಗುತ್ತದೆ. ಇಲ್ಲಿ ಶುಭಾರಂಭಗೊಂಡ ಹೋಳಿಗೆ ಮನೆ ಮತ್ತು ಚಾಟ್ಸ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ವೆರೈಟಿ ಹೋಳಿಗೆಗಳನ್ನು ಪರಿಚಯಿಸಲಿರುವ ಹೋಳಿಗೆ ಮನೆ:
ಹೋಳಿಗೆ ಮನೆ, ಚಾಟ್ಸ್ನ ಪಾಲುದಾರ ಎ ನವೀನ್ ಪ್ರಭು ಮಾತನಾಡಿ ನಮ್ಮ ಹೋಳಿಗೆ ಮನೆಯಲ್ಲಿ ವಿವಿಧ ಬಗೆಯ ಹೋಳಿಗೆಗಳು, ಚಾಟ್ಸ್ಗಳು ಲಭ್ಯವಿರಲಿದೆ. ಕಡ್ಲೆ ಬೇಳೆ ಹೋಳಿಗೆ, ಕಾಯಿ ಹೋಳಿಗೆಯ ಜೊತೆಗೆ ನಾವು ಹೊಸದಾಗಿ ಪೈನಾಪಲ್, ಕ್ಯಾರೆಟ್, ಚಿಕ್ಕು, ಖರ್ಜೂರ ಮುಂತಾದವುಗಳ ಹೋಳಿಗೆಯನ್ನು ಗ್ರಾಹಕರಿಗೆ ಪರಿಚಯಿಸಲಿದ್ದೇವೆ. ಅಲ್ಲದೇ ಹಲಸಿನ ಸೀಸನ್ ಸಮಯದಲ್ಲಿ ಹಲಸಿನ ಹೋಳಿಗೆಯನ್ನು ಮಾಡಲಿದ್ದೇವೆ. ಈಗ ಪಾಯಸದಲ್ಲಿ ಮಾತ್ರ ಜನರು ಹೆಚ್ಚಾಗಿ ಹೋಳಿಗೆ ತಿನ್ನುವುದನ್ನು ನಾವು ಗಮನಿಸುತ್ತಿದ್ದು ರಸಾಯನ, ಹಾಲು ಸೇರಿದಂತೆ ವೆರೈಟಿಯಾಗಿ ಯಾವುದರಿಂದೆಲ್ಲಾ ಹೋಳಿಗೆ ತಿನ್ನಬಹುದು ಎನ್ನುವುದನ್ನು ತೋರಿಸುವ ಉದ್ದೇಶ ನಮಗಿದೆ. ನಮ್ಮ ಸಂಸ್ಥೆಯಲ್ಲಿ ಎಲ್ಲವೂ ಯೂಸ್ ಎಂಡ್ ಥ್ರೋ, ಶುಚಿತ್ವಕ್ಕೆ ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಗ್ರಾಹಕರು ನಮ್ಮ ಸಂಸ್ಥೆಗೆ ಬರಬೇಕು. ವೆರೈಟಿ ಹೋಳಿಗೆ ಐಟಂಗಳನ್ನು ನೋಡಿ ಅದರ ರುಚಿಯನ್ನು ಸವಿಯಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.
ಉದಯಭಾಗ್ಯ ಕಾಂಪ್ಲೆಕ್ಸ್ನ ಮಾಲಕರಾದ ಸುರೇಶ್ ಪ್ರಭು, ರಮೇಶ್ ಶಗ್ರಿತ್ತಾಯ, ಕಲಾವಿದರಾದ ಚಂದ್ರಶೇಖರ ಹೆಗ್ಡೆ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪ್ರಾಪ್ತಿ, ತೃಪ್ತಿ, ಹಾಗೂ ಅದಿತಿ ಪ್ರಾರ್ಥಿಸಿದರು. ಪಾಲುದಾರರಾದ ಎ ನವೀನ್ ಪ್ರಭು, ಅನಿಲ್ ಪ್ರಭು ದೇವಿಪ್ರಸಾದ್ ಹಾಗೂ ನವ್ಯ, ಚೈತ್ರ, ಪ್ರತಿಮಾ, ಸಿಬ್ಬಂದಿ ನಿವೇದಿತಾ ಕೀರ್ತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಕೃಷ್ಣರಾಜ್ ಸುಳ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.