- ಎಲ್ಲೆಂದರಲ್ಲಿ ಕಸ ಹಾಕಿದವರಿಗೆ ದಂಡ – ಡಾ.ದೀಪಕ್ ರೈ
ನಿಡ್ಪಳ್ಳಿ : ಗ್ರಾಮವನ್ನು ಸ್ವಚ್ಚವಾಗಿರಿಸುವ ನಿಟ್ಟಿನಲ್ಲಿ ಗ್ರಾಮ ನೈರ್ಮಲ್ಯ ಸಮಿತಿ ರಚಿಸಿ ಆ ಮುಖಾಂತರ ಕಾರ್ಯಪ್ರವೃತರಾಗಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು. ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರನ್ನು ಕಂಡು ಹಿಡಿದು ಅವರ ಮೇಲೆ ದಂಡ ವಿಧಿಸಬಹುದು ಎಂದು ತಾಲೂಕು ಅರೋಗ್ಯಾಧಿಕಾರಿ ಡಾ.ದೀಪಕ್ ರೈ ಹೇಳಿದರು.
ಅವರು ಗ್ರಾಮಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ , ಸ್ವಚ್ಚ ಭಾರತ್ ಮಿಷನ್ ವತಿಯಿಂದ ತಾಲೂಕು ಪಂಚಾಯತ್, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಎ.7 ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಬಯಲು ಕಸ ಮುಕ್ತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಸ್ತೆ ಬದಿ ಮಾತ್ರವಲ್ಲ ಇಡೀ ಗ್ರಾಮ ಸ್ವಚ್ಚವಾಗಿಡಲು ನಾವು ಕಾರ್ಯಕ್ರಮ ಹಮ್ಮಿ ಕೊಳ್ಳಬೇಕು.ಕಸ ಹಾಕುವವರನ್ನು ಹಿಡಿದು ಅವರಿಗೆ ದಂಡ ವಿಧಿಸುವ ಮೂಲಕ ಕಡಿವಾಣ ಹಾಕುವುದು. ವಾಹನದಲ್ಲಿ ಬಂದು ರಸ್ತೆ ಬದಿ ಕಸ ಎಸೆದು ಹೋದರೆ ಅವರ ವಿರುದ್ದ ಕಂಪ್ಲೆಂಟ್ ನೀಡಿದರೆ ಅವರ ಲೈಸನ್ಸ್ ರದ್ದು ಮಾಡುವ ಕಾನೂನು ಇದೆ.ಆದುದರಿಂದ ಗ್ರಾಮಸ್ಥರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಕರಪತ್ರ ಮಾಡಿ ಮನೆ ಮನೆಗೆ ಹಂಚುವುದು.ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಎಚ್ಚರಿಕೆ ಫಲಕ ಅಳವಡಿಸುವುದು, ಕಸ ಹಾಕುವವರನ್ನು ಕಂಡು ಹಿಡಿದು ಅವರಿಗೆ ದಂಡ ವಿಧಿಸುವುದು ಸೇರಿದಂತೆ ಜನರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದ ಅವರು ಇರುವ ನೀತಿ ನಿಯಮಗಳ ಬಗ್ಗೆ ತಿಳಿಸಿದರು.ಪಂಚಾಯತ್ ಅಧ್ಯಕ್ಷೆ ಗೀತಾ.ಡಿ ಮಾತನಾಡಿ ಸ್ವಚ್ಚತೆ ಬಗ್ಗೆ ಎಲ್ಲರಿಗೂ ಪ್ರಜ್ಞೆ ಇರಬೇಕು.ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡುವಾಗ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಎಲ್ಲರಿಗೂ ತಿಳುವಳಿಕೆ ನೀಡುವ ಮೂಲಕ ನಿಡ್ಪಳ್ಳಿ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿ ಮಾಡಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಪ್ರಯತ್ನಿಸುವ ಎಂದು ಹೇಳಿದರು.
ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಂದ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸದಸ್ಯರಾದ ಬಾಲಚಂದ್ರ ಕೆ,ಅವಿನಾಶ್ ರೈ, ನಂದಿನಿ ಆರ್.ರೈ, ಗ್ರೆಟಾ ಡಿ” ಸೋಜಾ, ಕಿರಿಯ ಆರೋಗ್ಯ ಸಹಾಯಕಿಯರಾದ ಎ.ವಿ.ಕುಸುಮಾವತಿ,ಚಲುವಾದಿ ಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಗೀತಾ,ದಿವ್ಯಾ.ಸಿ.ಎಚ್, ಸುಮತಿ.ಎ, ಸಂಜೀವಿನಿ ಸಂಘದ ಪುಸ್ತಕ ಬರಹಗಾರ್ತಿ ಭವ್ಯಾ.ಸಿ.ಎಚ್ ಮೊದಲಾದವರು ಪಾಲ್ಗೊಂಡರು. ಸಿಬ್ಬಂದಿಗಳಾದ ರೇವತಿ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು. ನಂತರ ರಸ್ತೆ ಬದಿ ಕಸ ಹೆಕ್ಕುವ ಮೂಲಕ ಸ್ವಚ್ಚತೆ ಮಾಡಲಾಯಿತು.