ತಾ|ಸರಕಾರಿ ವಾಹನ ಚಾಲಕರ ಸಂಘದಿಂದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಕೆ.ಎಂ ಭಟ್, ಸೀತಾರಾಮ್‌ರವರಿಗೆ ಬೀಳ್ಕೊಡುಗೆ ಸನ್ಮಾನ

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಳಿಯ ಸಾರಥಿ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಆಶ್ರಯದಲ್ಲಿ ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷರೂ, ಇತ್ತೀಚೆಗೆ ನಿವೃತ್ತರಾದ ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಹಿರಿಯ ವಾಹನ ಚಾಲಕರಾದ ಸೀತಾರಾಮ್ ಸಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ರಾಜ್ಯ ಸಾರಿಗೆ ವ್ಯವಸ್ಥಾಪಕರಾದ ಕೆ.ಎಂ ಭಟ್‌ರವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮವು ಏ.೭ ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಸಂಜೆ ಜರಗಿತು.

 


ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಜ್ಯೋತಿರವರು ಬೀಳ್ಕೊಡುಗೆ ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿ, ತಾನು ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಬಂದ ಬಳಿಕವೇ ಕೆ.ಎಂ ಭಟ್‌ರವರ ಪರಿಚಯವಾಗಿದ್ದು. ಸರಕಾರಿ ಆಸ್ಪತ್ರೆಯಿಂದ ನಡೆಯುವ ಶಿಬಿರಗಳು, ಆಂಬುಲೆನ್ಸ್ ಹಾಗೂ ಸರಕಾರಿ ವಾಹನಗಳ ದಾಖಲೆಗಳ ಬಗ್ಗೆ ನೆನಪು ಮಾಡಿದಾಗ ಥಟ್ಟನೇ ಕೆ.ಎಂ ಭಟ್‌ರವರ ನೆನಪು ಬರುತ್ತದೆ. ಅಷ್ಟೊಂದು ವೃತ್ತಿ ಬದ್ಧತೆ ಕೆ.ಎಂ ಭಟ್‌ರವರದ್ದು. ಸೀತಾರಾಮ್‌ರವರು ತಾನು ಕಲಿಯದಿದ್ದರೂ ತನ್ನ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡಿ ಅವರುಗಳು ಇಂಜಿನಿಯರ್ ಆಗಲು ಕಾರಣ ವೃತ್ತಿ ಸಂದರ್ಭದಲ್ಲಿನ ಅವರ ಪ್ರಾಮಾಣಿಕತೆಯ ಸೇವೆ ಆಗಿದೆ. ಕೋವಿಡ್ ಸಮಯದಲ್ಲಿ ರಜೆಯಲ್ಲಿದ್ದರೂ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ನಿಷ್ಠೆಯನ್ನು ಸೀತಾರಾಮ್‌ರವರು ಮೆರೆದಿದ್ದಾರೆ. ಈರ್ವರ ನಿವೃತ್ತಿ ಬದುಕು ಸುಂದರಮಯವಾಗಿರಲಿ ಎಂದರು.

ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈರವರು ಮಾತನಾಡಿ, ಕೆ.ಮಹಾಲಿಂಗೇಶ್ವರ ಭಟ್‌ರವರ ಪರಿಚಯ ನನಗೆ ೨೫ ವರ್ಷಗಳದ್ದು. ಪುತ್ತೂರಿನ ದೇವಸ್ಥಾನದ ಹೆಸರು ಮಹಾಲಿಂಗೇಶ್ವರ ಹಾಗೆಯೇ ಕೆ.ಎಂ ಭಟ್‌ರವರ ಹೆಸರಿನಲ್ಲೂ ಮಹಾಲಿಂಗೇಶ್ವರ ಇದೆ. ಕೆ.ಎಂ ಭಟ್‌ರವರು ಯಾವುದೇ ದ್ವೇಷ ಕಟ್ಟಿಕೊಳ್ಳದೆ ಕಪ್ಪು ಚುಕ್ಕೆಯಿಲ್ಲದೆ ಸೇವೆಯನ್ನು ನೀಡಿ ಅಜಾತಶತ್ರು ಎನಿಸಿದ್ದಾರೆ. ಜಿಲ್ಲೆಗೆ ಸಿಆರ್‌ಎಸ್ ಫಂಡ್ ಮೂಲಕ ಒಂಭತ್ತು ಆಂಬುಲೆನ್ಸ್‌ನ್ನು ನೀಡಿರುವುದು ಕೆ.ಎಂ ಭಟ್‌ರವರ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ಸೀತಾರಾಮ್‌ರವರು ಮೂಲತಃ ನನ್ನ ಗ್ರಾಮವಾದ ತಿಂಗಳಾಡಿಯವರಾಗಿದ್ದು ಅವರ ಮುಂದಾಳತ್ವದಲ್ಲಿ ಸಾರಥಿ ಭವನದ ಅಭಿವೃದ್ಧಿ ಜೊತೆಗೆ ಸರಕಾರಿ ನೌಕರರ ಸಮುದಾಯ ಭವನದಲ್ಲಿನ ಸನ್ಮಾನ ನಿಜಕ್ಕೂ ಹೆಮ್ಮೆಯೆನಿಸುತ್ತದೆ ಎಂದು ಹೇಳಿ ಈರ್ವರಿಗೂ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು, ಕೆ.ಎಂ ಭಟ್‌ರವರು ಮೃದು ಸ್ವಭಾವದ ವ್ಯಕ್ತಿಯಾಗಿದ್ದು, ಎಲ್ಲಾ ಚಾಲಕರನ್ನು ವಿಶೇಷ ಗೌರವದಿಂದ ನೋಡಿಕೊಳ್ಳುತ್ತಿದ್ದರು. ನಿವೃತ್ತಿ ಅಂಚಿನಲ್ಲಿದ್ದಾಗಲೂ ಕೆ.ಎಂ ಭಟ್‌ರವರು ಜಿಲ್ಲೆಯಲ್ಲಿನ ಸರಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್‌ಗಳನ್ನು ಸಿಗುವಂತೆ ಮಾಡಿರುತ್ತಾರೆ. ಬಡ ಕುಟುಂಬದಲ್ಲಿ ಹುಟ್ಟಿದ ಸೀತಾರಾಂರವರು ಮೊದಲಿಗೆ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌ರವರ ಮೂಕಾಂಬಿಕಾ ಫೈನಾನ್ಸ್‌ನಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಳಿಕ ಸರಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿ ಸರಕಾರಿ ಸೇವೆಗೆ ಸೇರಿಕೊಂಡರು. ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿದ್ದ ಕಮಲಾಕ್ಷರವರ ನಿವೃತ್ತಿ ಬಳಿಕ ಸೀತಾರಾಂರವರು ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸಿದ್ದರು. ನೇರ ನಡೆ-ನುಡಿಯ ವ್ಯಕ್ತಿತ್ವಮ ಕರ್ತವ್ಯದ ಕೆಲವೊಂದು ಸಂದರ್ಭದಲ್ಲಿ ಹೆಚ್ಚುವರಿಯಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿದಿದ್ದಾರೆ ಸೀತಾರಾಂರವರು. ಮುಂದಿನ ದಿನಗಳಲ್ಲಿ ಈರ್ವರ ನಿವೃತ್ತ ಬದುಕು ನೆಮ್ಮದಿಯಾಗಿ ಕೂಡಿರಲಿ ಎಂದು ಹಾರೈಸಿದರು.

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರು ಮಾತನಾಡಿ, ಸರಕಾರಿ ನೌಕರರಿಗೆ ನಿವೃತ್ತಿ ಎಂಬುದು ಅಲಿಖಿತ ನಿಯಮ. ಯಾರಲ್ಲಿ ದೈಹಿಕ ಕ್ಷಮತೆಯಿದೆಯೋ ಅವರಿಗೆ ದೈಹಿಕ ಕ್ಷಮತೆಯಿದ್ದಷ್ಟು ಕರ್ತವ್ಯ ನಿರ್ವಹಿಸಲು ಅನುವು ಮಾಡಿ ಕೊಡಬೇಕು ಎಂಬುದು ನನ್ನ ಅನಿಸಿಕೆಯಾಗಿದೆ. ನಿವೃತ್ತಿಗೊಂಡ ಮೌರಿಸ್ ಮಸ್ಕರೇನ್ಹಸ್ ಹಾಗೂ ನಿವೃತ್ತಿ ಸನ್ಮಾನ ಪಡೆದುಕೊಂಡ ಕೆ.ಎಂ ಭಟ್ ಹಾಗೂ ಸೀತಾರಾಂರವರು ಈಗಲೂ ಪಾದರಸದಂತೆ ಸಕ್ರಿಯರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಸರಕಾರಿ ವಾಹನ ಚಾಲಕರು ನಿವೃತ್ತಿಗೊಳ್ಳುತ್ತಾ ಕಡಿಮೆ ಸಂಖ್ಯೆಯನ್ನು ಕಾಣುತ್ತಿದೆ. ಯಾವುದೇ ಇಲಾಖೆಯಿರಲಿ, ಅಂತಹ ಇಲಾಖೆಯಲ್ಲಿ ಕೆಳಸ್ತರದಲ್ಲಿದ್ದ ಸರಕಾರಿ ನೌಕರರು ನಿವೃತ್ತಿಗೊಂಡಾಗ ಅವರುಗಳನ್ನು ಉತ್ತಮ ರೀತಿಯಲ್ಲಿ ಸತ್ಕರಿಸಿ ಕಳುಹಿಸಬೇಕು ಎಂದು ಹೇಳಿ ನಿವೃತ್ತರಾದ ಈರ್ವರಿಗೂ ಆಯುರಾರೋಗ್ಯ ದೇವರು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಜಿಲ್ಲಾ ಆರೋಗ್ಯ ಇಲಾಖೆಯ ನಿವೃತ್ತ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ಒಂದೇ ವೇದಿಕೆಯಲ್ಲಿ ಕೆ.ಎಂ ಭಟ್ ಹಾಗೂ ಸೀತಾರಾಂರವರ ನಿವೃತ್ತಿ ಸನ್ಮಾನವು ಬಹಳ ಖುಶಿ ತಂದಿದೆ. ಇಲಾಖೆಯಲ್ಲಿನ ಸರಕಾರಿ ವಾಹನಗಳ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಲ್ಲಿ ಕೆ.ಎಂ ಭಟ್‌ರವರು ನಿಸ್ಸೀಮರು. ಕ್ಲಿಷ್ಟಕರ ಸನ್ನಿವೇಶಗಳು ಎದುರಾದಗಲೂ ಕೆ.ಎಂ ಭಟ್‌ರವರು ಅವನ್ನು ಎದುರಿಸುವ ರೀತಿ ಶ್ಲಾಘನೀಯ. ತನ್ನಿಂದ ಯಾರಿಗೂ ನೋವಾಗಬಾರದು, ಉಪಯೋಗವಾಗಲಿ ಎಂಬುದು ಅವರ ಚಿಂತನೆಯಾಗಿದೆ. ನಿವೃತ್ತಿಗೊಂಡ ಈರ್ವರು ಮುಂದಿನ ದಿನಗಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.

ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ರಾಜ್ಯ ಪರಿಷತ್ ಸದಸ್ಯರಾದ ಕೆ.ಕೃಷ್ಣಪ್ಪರವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರಿ ನೌಕರರ ಹುದ್ದೆ ಸೇವಾ ಆಕಾಂಕ್ಷಿಯಾಗಿರುತ್ತದೆ. ಸರಕಾರಿ ನೌಕರರಲ್ಲೂ ಭಾವನೆಗಳಿವೆ, ಆಕಾಂಕ್ಷೆಗಳಿವೆ. ಸರಕಾರಿ ವೃತ್ತಿ ಎಂಬುದು ಅದು ಪುಣ್ಯದ ಕೆಲಸವಾಗಿರುತ್ತದೆ. ತಾಲೂಕು ಸರಕಾರಿ ನೌಕರರ ಸಮುದಾಯ ಭವನದ ಇಷ್ಟೊಂದು ಸುಸಜ್ಜಿತವಾಗಿ ಕಾಣಲು ಸರಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡಿ ಸಹಕರಿಸಿರುವುದಾಗಿದೆ ಎಂದು ಹೇಳಿ ನಿವೃತ್ತಿಗೆ ಶುಭ ಹಾರೈಸಿದರು.

ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ.ಅಜಯ್ ಎಂ.ಬಿ, ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ, ಉಪಾಧ್ಯಕ್ಷ ರಾಮಚಂದ್ರ ಭಟ್, ನಿಕಟಪೂರ್ವ ಕಾರ್ಯದರ್ಶಿ ರಾಮಚಂದ್ರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ಹರಿಣಿ ಗೌಡ ಹಾಗೂ ಮಾ|ಕರಣ್ ಗೌಡ ಪ್ರಾರ್ಥಿಸಿದರು. ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರ ಪುತ್ರಿ ಮನೀಷ ಮಸ್ಕರೇನ್ಹಸ್ ಹಾಗೂ ತಾಲೂಕು ಸರಕಾರಿ ವಾಹನ ಚಾಲಕರ ಸಂಘ ಕೋಶಾಧಿಕಾರಿ ಲೀಲಯ್ಯರವರ ಪುತ್ರಿ ದಿವ್ಯಶ್ರೀರವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ತಾಲೂಕು ಸರಕಾರಿ ವಾಹನ ಚಾಲಕರ ಸಂಘ ಅಧ್ಯಕ್ಷರಾದ ಗಿರಿಧರ್ ಗೌಡ ಎಸ್ ಸ್ವಾಗತಿಸಿ, ಕೋಶಾಧಿಕಾರಿ ಲೀಲಯ್ಯ ವಂದಿಸಿದರು. ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಸತೀಶ್, ಸುದರ್ಶನ್, ರವೀಂದ್ರ ಬೆಳ್ಳಾರೆ, ಸುಳ್ಯ ತಾಲೂಕಿನ ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಪುಟ್ಟಣ್ಣ ಗೌಡ, ಯೋಗೀಶ್ ಸುಳ್ಯ, ನಾರಾಯಣ ಹೆಗ್ಡೆರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅಧ್ಯಕ್ಷರಾದ ಗಿರಿಧರ್ ಗೌಡ ಎಸ್ ಸ್ವಾಗತಿಸಿ, ಕೋಶಾಧಿಕಾರಿ ಲೀಲಯ್ಯ ತಾಲೂಕು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಸೇವೆಯಲ್ಲಿ ಆತ್ಮತೃಪ್ತಿಯಿದೆ
ಓದಿದ್ದು ಕಡಿಮೆ. ಆದರೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಅವರು ಸಮಾಜದಲ್ಲಿ ಉನ್ನತ ಹಂತಕ್ಕೇರಬೇಕು ಎನ್ನುವ ಆಸೆಗೆ ಶ್ರೀ ಮಹಾಲಿಂಗೇಶ್ವರ ದೇವರು ಆಶೀರ್ವದಿಸಿದ್ದಾರೆ. ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌ರವರು ನನಗೆ ಸರಕಾರಿ ಉದ್ಯೋಗ ಕೊಡಿಸುವಲ್ಲಿ ಕಾರಣೀಭೂತರಾಗಿದ್ದಾರೆ. ಹಾಗೆಯೇ ನಾನು ಕೂಡ ಸುಮಾರು ೨೦ ಜನರಿಗೆ ಹಿರಿಯ ಅಧಿಕಾರಿಗಳಲ್ಲಿ ಮಾತನಾಡಿ ಕೆಲಸ ಮಾಡಿ ಕೊಟ್ಟಿದ್ದೇನೆ ಎನ್ನುವ ಆತ್ಮತೃಪ್ತಿಯಿದೆ ನನಗೆ. ನಿವೃತ್ತಿಯ ಈ ಸಂದರ್ಭದಲ್ಲಿ ತನ್ನನ್ನು ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವೆ. ಸೀತಾರಾಂ ಸಿ, ಹಿರಿಯ ವಾಹನ ಚಾಲಕರು, ಪುತ್ತೂರು ಸಾರ್ವಜನಿಕ ಆಸ್ಪತ್ರೆ

ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾಗ ತಾನು ೨೦ ಮಂದಿ ಡಿಎಚ್‌ಒರವರಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಮೂರು ಬಾರಿ ಪ್ರಮೋಷನ್ ಬಂದರೂ ಮನೆಯಲ್ಲಿನ ಪರಿಸ್ಥಿತಿ ನೋಡಿ ಪ್ರಮೋಷನ್ ಅನ್ನು ತೆಗೆದುಕೊಂಡಿಲ್ಲ. ನಾಲ್ಕನೇ ಬಾರಿ ಬಂದಾಗ ತನ್ನ ತಂದೆಯವರ ನಿರ್ದೇಶನದಂತೆ ಪ್ರಮೋಷನ್ ತೆಗೆದುಕೊಂಡಿದ್ದೆ. ಸರಕಾರಿ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವವರು ವಾಹನಗಳ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇದೀಗ ತಾನು ಆತ್ಮತೃಪ್ತಿಯಿಂದಲೇ ಕರ್ತವ್ಯದಿಂದ ನಿರ್ಗಮಿಸುತ್ತಿದ್ದೇನೆ. ಎಲ್ಲರಿಗೂ ನನ್ನ ಕೃತಜ್ಞತೆಗಳು.
ಕೆ.ಎಂ ಭಟ್, ನಿವೃತ್ತ ರಾಜ್ಯ ಸಾರಿಗೆ ವ್ಯವಸ್ಥಾಪಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

LEAVE A REPLY

Please enter your comment!
Please enter your name here