ಎಲ್ಲಿಯ ತನಕ ಧ್ವನಿ ಎತ್ತುವುದಿಲ್ಲವೋ ಅಲ್ಲಿನ ತನಕ ದೌರ್ಜನ್ಯ ನಿಲ್ಲುವುದಿಲ್ಲ – ಮಕ್ಕಳ ರಕ್ಷಣೆ ಕಾಯ್ದೆ ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ರಮೇಶ್ ಎಮ್

0

  • ಕಾನೂನಿನ ಅರಿವು ಮೂಡಿಸಿ, ಜನರನ್ನು ಜಾಗೃತಿಗೊಳಿಸಿ – ಗಿರೀಶ್ ನಂದನ್ 
  • ವ್ಯಾಜ್ಯಮುಕ್ತ ಸಮಾಜ ಆಗಲು ನಿಮ್ಮ ಸಹಕಾರವಿರಲಿ – ಅರುಣ್ ಕುಮಾರ್

 

ಪುತ್ತೂರು: ನೊಂದ ಮಹಿಳೆ ಅಥವಾ ಮಕ್ಕಳು ಧ್ವನಿ ಎತ್ತುವುದಿಲ್ಲವೋ ಅಲ್ಲಿನ ತನಕ ದೌರ್ಜನ್ಯ ನಿಲ್ಲುವುದಿಲ್ಲ. ಈ ನಿಟ್ಟಿನಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾನೂನು ಸೇವಾ ಸಮಿತಿಯ ಅಡಿಯಲ್ಲಿ ಪ್ಯಾರಲೀಗಲ್ ಸ್ವಯಂ ಸೇವಕರಾಗಿ ಮಹಿಳೆ ಮತ್ತು ಮಕ್ಕಳಿಗೆ ಕಾನೂನು ಅರಿವು ಮೂಡಿಸುವಲ್ಲಿ ಸಹಕಾರಿಯಾಗಿ ಎಂದು ಪ್ರಧಾನ ಹಿರಿಯ ನ್ಯಾಯಾಧೀಶ, ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಮೇಶ್ ಎಮ್ ಅವರು ನುಡಿದರು.

ಮಕ್ಕಳ ನಿರ್ದೆಶನಾಲಯ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾ.23 ರಂದು ನಡೆದ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ರಕ್ಷಣೆ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಲೈಂಗಿಕ ದೌರ್ಜನ್ಯನಿಂದ ನೊಂದ ಮಹಿಳೆ ಅಥವಾ ಮಕ್ಕಳು ಸಹಾಯ ಕೋರಿ ಬಂದಾಗ ವೈದ್ಯಕೀಯ ಪರೀಕ್ಷೆ ಮಾಡಬೇಕು. ಯಾವುದೇ ಸಾಕ್ಷಿಗಳು ನಷ್ಟಮಾಡಿಕೊಳ್ಳಬೇಡಿ. ಅವರು ಪೊಲೀಸ್ ಸ್ಟೇಷನ್‌ಗೂ ಹೋಗಬೇಕಾದ ಅವಶ್ಯಕತೆ ಇಲ್ಲ. ಪೋಕ್ಸೋ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಹೇಗೆ, ಅದಕ್ಕೆ ಯಾವ ಕಾನೂನುಗಳಿವೆ. ಈ ಕುರಿತು ಮಾಹಿತಿ ಪಡೆದುಕೊಂಡು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಹೆಣ್ಣು ಮಕ್ಕಳನ್ನು ಸೇರಿಸಿ ಅವರಿಗೆ ಮಾಹಿತಿ ನೀಡಿ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾನೂನು ಸೇವಾ ಸಮಿತಿಯ ಅಡಿಯಲ್ಲಿನ ಪ್ಯಾರಲೀಗಲ್ ಸ್ವಯಂ ಸೇವಕರಾಗಿ. ನಿಮಗೆ ಕಾನೂನಿನ ಪೂರ್ಣ ಮಾಹಿತಿ ನೀಡುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಮೀಷನರ್ ಡಾ. ಗಿರೀಶ್ ನಂದನ್ ಅವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಹಳಷ್ಟು ಜವಾಬ್ದಾರಿ ಇದೆ. ಬಹಳಷ್ಟು ಸರಕಾರದಿಂದ ಬಂದಿರುವ ಬೇರೆ ಬೇರೆ ಕಾನೂನಿನ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು.

ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಮಾತನಾಡಿ ವ್ಯಾಜ್ಯ ಮುಕ್ತ ಸಮಾಜ ಆಗಲು ನಿಮ್ಮ ಸಹಕಾರವಿರಲಿ ಎಂದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜ ಕುಮಾರ್, ಸೌಭಾಗ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಿನಾಕ್ಷಿ ಬಳಗ ಪ್ರಾರ್ಥಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜ ಕುಮಾರ್ ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಭಾರತಿ.ಜೆ ಕಾರ್ಯಕ್ರಮ ನಿರೂಪಿಸಿದರು. ಶಿಶು ಅಭಿವೃದ್ಧಿಯೋಜನಾಧಿಕಾರಿ ಶ್ರೀಲತಾ ವಂದಿಸಿದರು

LEAVE A REPLY

Please enter your comment!
Please enter your name here