- ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ಸಬಳೀಕರಣ ಆಗಬೇಕು-ಸುಜಾತ
ಉಪ್ಪಿನಂಗಡಿ: ಮಹಿಳೆಯರಾದ ನಾವುಗಳು ತಾಯಿ, ಅತ್ತೆ, ಸೊಸೆ, ಅಕ್ಕ, ತಂಗಿ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದೇವೆ, ಹೀಗಾಗಿ ನಮ್ಮ ಚಿಂತನೆ ಮಾಡಲು ಸಮಯ ಸಿಗುವುದೇ ಇಲ್ಲ, ನಾವುಗಳು ಪೂರ್ಣ ಪ್ರಮಾಣದಲ್ಲಿ ಸಬಲೀಕರಣ ಆಗಬೇಕು, ಈ ನಿಟ್ಟಿನಲ್ಲಿ ಚಿಂತಿತರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ್ಪಿನಂಗಡಿ ವಲಯ ಮೇಲ್ವಿಚಾರಕಿ ಸುಜಾತ ಹೇಳಿದರು.
ಅವರು ಮಾ. ೨೩ರಂದು ಉಪ್ಪಿನಂಗಡಿಯಲ್ಲಿ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ದಿನಾಚರಣೆಯ ಮೂಲಕ ಮಹಿಳೆಯರಿಗೆ ಇರುವಂತಹ ಕಾನೂನನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಮಹಿಳೆಯರು ಕೌಶಲ್ಯತೆಯಿಂದ ಇರಬೇಕು, ಆಗ ಮಾತ್ರ ಇಂತಹ ಕಾರ್‍ಯಕ್ರಮಗಳಿಗೆ ಅರ್ಥ ಬರುವಂತದ್ದು ಎಂದು ಅವರು ಹೇಳಿದರು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಬಹಳಷ್ಟು ಅವಕಾಶಗಳಿವೆ. ಅದನ್ನು ಜವಾಬ್ದಾರಿಯಿಂದ ಸಮರ್ಪಕವಾಗಿ ನಿರ್ವಹಿಸಿದರೆ ಎತ್ತರದ ಸ್ಥಾನಕ್ಕೆ ಏರಲು ಸಾಧ್ಯ ಎಂದ ಅವರು ಪ್ರತಿಯೋರ್ವ ಮಹಿಳೆಯೂ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ನಿವೃತ್ತ ಶಿಕ್ಷಕಿ ದುರ್ಗಾಮಣಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಮಹಿಳೆಯರಿಗೆ ಇರುವ ಜವಾಬ್ದಾರಿಯನ್ನು ತಿಳಿಸಿದರು. ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆರೋಗ್ಯ ಸಹಾಯಕಿ ಗಾಯತ್ರಿ, ಸಂಜೀವಿನಿ ಯೋಜನೆಯ ಮೇಲ್ವಿಚಾರಕಿ ನಳಿನಾಕ್ಷಿ ಉಪಸ್ಥಿತರಿದ್ದರು.
ಸನ್ಮಾನ;
ಸಮಾರಂಭದಲ್ಲಿ ಉಪ್ಪಿನಂಗಡಿ ವನಿತಾ ಸಮಾಜದ ಸದಸ್ಯೆಯಾಗಿದ್ದುಕೊಂಡು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಉಪ್ಪಿನಂಗಡಿಯ ಜಯಲಕ್ಷ್ಮಿ ನರಸಿಂಹ ನಾಯಕ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಸಣ್ಣಣ್ಣ ಯಾ ಸಂಜೀವ ಮಡಿವಾಳ, ಜಯಂತಿ, ಶೋಭಾ, ಉಷಾ ನಾಯಕ್, ನೆಬಿಸ, ರುಕ್ಮಿಣಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ್‍ಯದರ್ಶಿ ದಿನೇಶ್ ಎಂ. ವಂದಿಸಿದರು.
ಲಂಚ, ಭ್ರಷ್ಠಾಚಾರದ ವಿರುದ್ಧದ ಸುದ್ದಿ ಜನಾಂದೋಲನದ ಫಲಕ ಸ್ವೀಕಾರ, ಘೋಷಣೆ
ಮಹಿಳಾ ಗ್ರಾಮ ಸಭೆಯಲ್ಲಿ ಲಂಚ, ಭ್ರಷ್ಠಾಚಾರ ವಿರುದ್ಧದ ಸುದ್ದಿ ಜನಾಂದೋಲನ ಬೆಂಬಲಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಫಲಕ ಸ್ವೀಕರಿಸಿದರು. ಬಳಿಕ ಲಂಚ, ಭ್ರಷ್ಠಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಘೋಷಣೆ ಕೂಗಲಾಯಿತು. ಸುದ್ದಿ ಸಂಸ್ಥೆಯ ಸಂತೋಷ್ ಶಾಂತಿನಗರ, ಗಣೇಶ್ ಕಲ್ಲರ್ಪೆ, ಸಿದ್ದಿಕ್ ನೀರಾಜೆ, ದೀಪಕ್ ಉಬಾರ್, ಮೋಹನ್ ಶೆಟ್ಟಿ, ಫಾರೂಕ್ ಮುಕ್ವೆ ಉಪಸ್ಥಿತರಿದ್ದರು.