ಪುತ್ತೂರು: ದೇಶದಲ್ಲಿ ವಾಣಿಜ್ಯ, ಕೈಗಾರಿಕೆ, ಕೃಷಿ, ಆರ್ಥಿಕ ಕ್ಷೇತ್ರದಲ್ಲಿ ಎಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪ್ರಜೆಗಳೆಲ್ಲರೂ ತಿಳಿದಿರಬೇಕು. ಬಜೆಟ್, ಆರ್ಥಿಕ ವ್ಯವಸ್ಥೆ ಇವೆಲ್ಲವನ್ನೂ ವಿದ್ಯಾರ್ಥಿಗಳು ತಿಳಿಯುವುದು ನಿಜವಾದ ಶಿಕ್ಷಣ. ಮುಂದೆ ಆರ್ಟಿಫ಼ಿಶಿಯಲ್ ಇಂಟೆಲಿಜೆನ್ಸ್ ಮುಖಾಂತರ ದೇಶ ಕಟ್ಟುವಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಮಹತ್ವಪೂರ್ಣ ಜವಬ್ದಾರಿ ಇದೆ. ಇದಕ್ಕೆಲ್ಲಾ ಮಾಹಿತಿ ಒದಗಿಸುವ ಹೊಣೆಗಾರಿಕೆ ವಾಣಿಜ್ಯ ವಿಭಾಗದ್ದು. ಇದರಿಂದ ಹತ್ತು ವರ್ಷಗಳಲ್ಲಿ ಭಾರತ ಭ್ರಷ್ಟಾಚಾರ ರಹಿತ ರಾಷ್ಟ್ರವಾಗಬಹುದು. ಇಂದು ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳು ಕೂಲಂಕುಶವಾಗಿ ರಾಷ್ಟ್ರೀಯ ಮುಂಗಡ ಪತ್ರವನ್ನು ವಿಶ್ಲೇಷಿಸುವ ಅಭ್ಯಾಸ ಮಾಡಿರುತ್ತೀರಿ ಎಂದು ನಟ್ಟೋಜ ಫೌಂಡೇಶ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪ.ಪೂ ವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಕಾರ್ಯಕ್ರಮ ರಾಷ್ಟ್ರೀಯ ಮುಂಗಡ ಪತ್ರ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಆರ್ಥಿಕ ಕ್ಷೇತ್ರದಲ್ಲಿ ಭಾರತದ ಎಲ್ಲ ಪ್ರಜೆಗಳಿಗೂ ಸರಿಹೊಂದುವ ಬಜೆಟನ್ನು ನಿರ್ಮಲಾ ಸೀತಾರಾಮ್ ಮಂಡಿಸಿದ್ದಾರೆ. ಅಂಬಿಕಾದಲ್ಲಿ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಂದ ಸಂಪನ್ನಗೊಂಡ ಈ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು. ವಿದ್ಯಾರ್ಥಿಗಳಿಗೂ, ಉಪನ್ಯಾಸಕರಿಗೂ ಅಭಿನಂದನೆಗಳು ಎಂದು ಅಂಬಿಕಾ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿಯವರು ಪ್ರೋತ್ಸಾಹದ ನುಡಿಗಳನ್ನಾಡಿದರು. ರಾಷ್ಟ್ರೀಯ ಮುಂಗಡ ಪತ್ರ 2023 ಇದರ ವಿಶ್ಲೇಷಣಾ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ ಸೃಷ್ಟಿ. ಯನ್ ಮತ್ತು ತಂಡ ಪ್ರಥಮ, ಸಮೃದ್ಧಿ.ರೈ.ಎಸ್ ಹಾಗೂ ತಂಡ ದ್ವಿತೀಯ, ಆಯುಷ್ ರಾಮ್ ನೆಟ್ಟಾರ್ ಹಾಗೂ ತಂಡ ತೃತೀಯ ಬಹುಮಾನ ಪಡೆದರು.
ಅಂಬಿಕಾ ಮಹಾ ವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಹಾಗೂ ಅಂಬಿಕಾ ಪ.ಪೂ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂಬಿಕಾ ಮಹಾ ವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನನ್ಯಾ, ಭೌತಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಹಾಗೂ ಸುರೇಶ್.ಶೆಟ್ಟಿಯವರು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅಕ್ಷತಾ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ವಿದ್ಯಾ ಸರಸ್ವತಿ ಸಹಕರಿಸಿದರು. ವಿದ್ಯಾರ್ಥಿನಿ ಶರಣ್ಯ ಪ್ರಾರ್ಥಿಸಿದರು. ಅನನ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸೇವಂತಿ ವಂದಿಸಿದರು.