ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: 118 ವರ್ಷಗಳ ಇತಿಹಾಸವಿರುವ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ತನ್ನ ಸಮಾಜಮುಖಿ ಕಾರ್ಯಗಳಿಂದಲೇ ಗುರುತಿಸಿಕೊಂಡಿದ್ದು ಸಮಾಜದಲ್ಲಿ ಅನೇಕರ ಬಾಳಿನಲ್ಲಿ ಆಶಾಕಿರಣವಾಗಿ ಮೂಡಿ ಬಂದಿದೆ. ಅದರಂತೆ ನಾವೂ ಕೂಡ ಸಮಾಜದಲ್ಲಿನ ಅಶಕ್ತರ, ದೀನ ದಲಿತರ ಬಾಳಿನಲ್ಲಿ ನೆರವಾಗುತ್ತಾ ಅವರ ಮೊಗದಲ್ಲಿ ಹಾಗೂ ಹೃದಯದಲ್ಲಿ ಸಂತೋಷ, ಸಂತೃಪ್ತಿ ಕಾಣುವ ಗುಣ ನಮ್ಮದಾಗಲಿ ಎಂದು ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ರವರು ಹೇಳಿದರು.
ಬಪ್ಪಳಿಗೆ-ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್ನಲ್ಲಿ ಫೆ.14 ರಂದು ಸಂಜೆ ಜರಗಿದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಮಾರಂಭದಲ್ಲಿ ಅವರು ಕ್ಲಬ್ನ ಸಮಾಜಮುಖಿ ಚಟುವಟಿಕೆಗಳನ್ನು ಹಸ್ತಾಂತರಿಸಿ ಮಾತನಾಡಿದರು. ಸಮಾಜದಲ್ಲಿ ಪ್ರತಿಯೋರ್ವ ವ್ಯಕ್ತಿ ಪ್ರಾಮುಖ್ಯನೇ. ರೋಟರಿ ಮೂಲ ಆಶಯ ಗೆಳೆತನ, ಬಾಂಧವ್ಯ, ಒಡನಾಟ, ಸಹಕಾರ, ಸಹಭಾಗಿತ್ವ, ಸತ್ಕರ್ಯ ಆಗಿದೆ. ಈ ನಿಟ್ಟಿನಲ್ಲಿ ಪ್ರಾಯದಲ್ಲಿ ಹಿರಿಯರಾಗಿದ್ದು ಇಂದಿಗೂ ಅವರುಗಳ ವೃತ್ತಿಯನ್ನು ನಿರ್ವಹಿಸುವವರನ್ನು ಗುರುತಿಸಿ ಸನ್ಮಾನಿಸಿ ರೋಟರಿ ಆಶಯವನ್ನು ಉನ್ನತೀಕರಿಸಿದ್ದೀರಿ. ನಾವು ಮಾಡಿದ ದಾನ, ಧರ್ಮ, ಮತ್ತೊಬ್ಬರ ಹೃದಯದಲ್ಲಿ ಬಿತ್ತಿದ ನಗು ಮಾತ್ರ ನಮ್ಮಲ್ಲಿನ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ನಾವು ಮಾಡುವ ಸಮಾಜಮುಖಿ ಕಾರ್ಯಗಳು ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದರು.
ನೊಂದವರ ಬಾಳಿಗೆ ಬೆಳಕಾಗುತ್ತಾ ಕ್ಲಬ್ ಮುಂದುವರೆದಿದೆ-ಎ.ಜೆ ರೈ:
ಕ್ಲಬ್ನ ಸದಸ್ಯ ಸನತ್ ರೈ ಸಂಪಾದಕತ್ವದ ಬುಲೆಟಿನ್ ರೋಟರಿ ಸೆಂಟ್ರಲ್ ನ್ಯೂಸ್ ಅನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್ ದಾಸ್ ರೈಯವರು ಅನಾವರಣಗೊಳಿಸಿ ಮಾತನಾಡಿ, ಕ್ಲಬ್ ಅಧ್ಯಕ್ಷ ರಫೀಕ್ ದರ್ಬೆರವರು ನಗರಸಭೆ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಸಹಾಯಹಸ್ತ ನೀಡಲು ಸಾಧ್ಯವಾಗಿದೆ. ನೊಂದವರ ಬಾಳಿಗೆ ಬೆಳಕಾಗುತ್ತಾ ಕ್ಲಬ್ ಮುಂದುವರೆದಿದ್ದು ಜಿಲ್ಲೆಯಲ್ಲಿಯೇ ಉತ್ತಮ ಕ್ಲಬ್ ಎಂಬ ಹೆಸರು ಪಡೆಯಲು ಉತ್ತಮ ಪ್ರಯತ್ನ ಅಂತೂ ಆಗುತ್ತಿದೆ ಎನ್ನುವುದಕ್ಕೆ ಕ್ಲಬ್ನ ಸಮಾಜಮುಖಿ ವಿವಿಧ ಯೋಜನೆಗಳು ಆಗಿದೆ ಎಂದರು.
ಕ್ಲಬ್ನಲ್ಲಿ ಹೊಂದಾಣಿಕೆ, ಬಾಂಧವ್ಯ, ಸ್ನೇಹ ಬೆಸೆಯುವ ಕೌಟುಂಬಿಕ ವಾತಾವರಣವಿದೆ-ಡಾ|ಹರ್ಷಕುಮಾರ್ ರೈ:
ರೋಟರಿ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾತನಾಡಿ, ಕ್ಲಬ್ ಘನತೆ, ಗೌರವ ಕಾಪಾಡಿಕೊಳ್ಳುವುದು ಮಾತ್ರವಲ್ಲ, ಅದನ್ನ ಗಟ್ಟಿಗೊಳಿಸುವುದು ಮುಖ್ಯ. ರೋಟರಿ ಸೆಂಟ್ರಲ್ ಮಾನವೀಯ ಮೌಲ್ಯಗಳ ಸಾಮಾಜಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ರೋಟರಿ ಸೆಂಟ್ರಲ್ನಲ್ಲಿ ಹೊಂದಾಣಿಕೆ, ಬಾಂಧವ್ಯ, ಸ್ನೇಹ ಬೆಸೆಯುವ ಕೌಟುಂಬಿಕ ವಾತಾವರಣವಿದೆ ಎಂದರು.
ರೋಟರಿಯಲ್ಲಿ ಎಲ್ಲರೂ ಸಮಾನರೇ-ಮೊಹಮದ್ ರಫೀಕ್ ದರ್ಬೆ:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಮಾತನಾಡಿ, ರೋಟರಿ ಸೆಂಟ್ರಲ್ನ ನಾಲ್ಕನೇ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದು ತುಂಬಾ ಸಂತೋಷ ನೀಡಿದೆ. ಅಧ್ಯಕ್ಷನಾಗಿ ಆಯ್ಕೆಯಾಗಿ ಅಲ್ಲಿಂದ ಇಲ್ಲಿಯವರೆಗೆ ಕ್ಲಬ್ ಹಮ್ಮಿಕೊಂಡ ಸಮಾಜಮುಖಿ ಚಟುವಟಿಕೆಗಳಲ್ಲಿ ಹಿರಿಯರಾದ ಕೆ.ಆರ್ ಶೆಣೈ, ರಾಮಕೃಷ್ಣರವರು ಸೇರಿದಂತೆ ಕ್ಲಬ್ ಸದಸ್ಯರು, ಇತರ ಕ್ಲಬ್ ಸದಸ್ಯರು ನನಗೆ ಬಹಳ ಪ್ರೋತ್ಸಾಹ ನೀಡಿದ್ದು ಅವರಿಗೆ ಎಂದಿಗೂ ನಾನು ಚಿರಋಣಿಯಾಗಿದ್ದೇನೆ. ಕ್ಲಬ್ ಅಧ್ಯಕ್ಷರಾದವರೇ ಎಲ್ಲಾ ಖರ್ಚು ಹಾಕಬಾರದು. ಇಲ್ಲಿ ಎಲ್ಲರೂ ಸಮಾನರೇ. ಎಲ್ಲರೂ ಒಟ್ಟಿಗೆ ಸೇರಿ ಕೈಜೋಡಿಸಿದಾಗ ಕ್ಲಬ್ ಯಶಸ್ವಿಯತ್ತ ಸಾಗಬಲ್ಲುದು. ರೋಟರಿ ಮಿತ್ರರಾದ ನಾವು ಒಂದೇ ಮನೆಯ ಸದಸ್ಯರಂತೆ ಸಾಗಬೇಕು ಎಂದರು.
ನೂತನ ಸದಸ್ಯರ ಸೇರ್ಪಡೆ:
ಕ್ಲಬ್ಗೆ ನೂತನ ಸದಸ್ಯರಾದ ನ್ಯಾಯವಾದಿ ಹಾಗೂ ನೋಟರಿ ಸಾಯಿರಾ ಕೆ.ಝುಬೈರ್, ಸುಮಾರು 62 ಬಾರಿ ರಕ್ತದಾನ ಮಾಡಿ ರಕ್ತದಾನಿ ಎನಿಸಿಕೊಂಡಿರುವ ಕೃಷಿಕ ಮಹೇಶ್ಚಂದ್ರ ಸಾಲಿಯಾನ್, ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಚಿತ್ರಗಾರ ಹಾಗೂ ಅಧ್ಯಾಪಕ ಜಗನ್ನಾಥ್ ರೈ ಅರಿಯಡ್ಕ, ಪುತ್ತೂರಿನ ಅರಣ್ಯ ಇಲಾಖೆಯ ಡೆಪ್ಯೂಟಿ ಅರಣ್ಯಾಧಿಕಾರಿ ಕುಮಾರಸ್ವಾಮಿರವರುಗಳನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹಾಗೂ ಅವರ ಪತ್ನಿ ವೀಣಾ ಕಾರಂತ್ರವರು ರೋಟರಿ ಪಿನ್ ತೊಡಿಸಿ, ಪ್ರಮಾಣಪತ್ರ ನೀಡಿ, ಪ್ರತಿಜ್ಞಾವಿಧಿ ಬೋಧಿಸಿ ಕ್ಲಬ್ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಅಶ್ರಫ್ ಮುಕ್ವೆ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಸಹಾಯಧನ:
ಯೂತ್ ಸರ್ವಿಸ್ ವತಿಯಿಂದ ಕ್ಲಬ್ ಸದಸ್ಯ ದಿ.ಶ್ರೀಧರ್ ಕೋಡಿಜಾಲು ಸ್ಮಾರಕ ಧತ್ತಿನಿಧಿಯಿಂದ ಆರ್ಥಿಕವಾಗಿ ಹಿಂದುಳಿದ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಿತಿನ್(9ನೇ), ಭವಿತ್ ಎಂ.ಕೆ(10ನೇ), ಸಿಂಚನಾ(10ನೇ)ರವರಿಗೆ ಸಹಾಯಧನದ ಚೆಕ್ ಅನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಲಬ್ನ ಮಹತ್ವಾಕಾಂಕ್ಷಿ ಯೋಜನೆಯಾದ ಅರಿವು ಯೋಜನೆಯಲ್ಲಿ ಸಂಭಾವನೆರಹಿತವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುವ ವಂ|ಸ್ಟ್ಯಾನಿ ಪಿಂಟೋ, ಜೇಸಿ ಪಶುಪತಿ ಶರ್ಮ, ಜೇಸಿ ಸ್ವಾತಿ ಜೆ.ರೈ, ಕ್ಯಾಪ್ಟನ್ ಮಹೇಶ್ ರೈ, ಡಾ.ಶ್ರೀಲತಾರವರುಗಳನ್ನು ಉಲ್ಲೇಖಿಸಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪಿ.ಎಚ್.ಎಫ್ ಗೌರವ:
ಅಂತರ್ರಾಷ್ಟ್ರೀಯ ಸರ್ವಿಸ್ ವಿಭಾಗದಿಂದ ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಸದಸ್ಯೆ ಅವರ ಪತ್ನಿ ಅಮಿತಾ ಶೆಟ್ಟಿಯವರ ಪುತ್ರ ಆರ್ಕಿಟೆಕ್ಟ್ ಅಭಿಜ್ಞ ಪ್ರಹಾಸ್ ಶೆಟ್ಟಿಯವರು ಪಿ.ಎಚ್.ಎಫ್ ಪದವಿಗೆ ಭಾಜನರಾಗಿದ್ದು ಇದೀಗ ಸಂತೋಷ್ ಶೆಟ್ಟಿಯವರ ಫ್ಯಾಮಿಲಿ ಪಿ.ಎಚ್.ಎಫ್ ಫ್ಯಾಮಿಲಿಯಾಗಿ ಅಪ್-ಗ್ರೇಡ್ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪಿ.ಎಚ್.ಎಫ್ ಪದವಿ ಪಡೆದ ಅಭಿಜ್ಞಾ ಶೆಟ್ಟಿಯವರ ಅನುಪಸ್ಥಿತಿಯಲ್ಲಿ ಅವರ ತಾಯಿ ಅಮಿತಾ ಶೆಟ್ಟಿಯವರಿಗೆ ಡಿಜಿ ಪ್ರಕಾಶ್ ಕಾರಂತ್ರವರು ಪಿ.ಎಚ್.ಎಫ್ ಪದವಿಯ ಪ್ರಮಾಣಪತ್ರ ನೀಡಿ ಗೌರವಿಸಿದರು. ಮುಂದಿನ ಏಪ್ರಿಲ್ ತಿಂಗಳೊಳಗೆ ತನ್ನನ್ನೂ ಸೇರಿಸಿಕೊಂಡು ಐವರು ಸದಸ್ಯರನ್ನು ಪಿ.ಎಚ್.ಎಫ್ ಪದವಿಗೆ ಭಾಜನರಾಗಲಿದ್ದೇವೆ ಎಂದು ಹೇಳಿ ಈವರೆಗೆ ಅಂತರ್ರಾಷ್ಟ್ರೀಯ ರೋಟರಿಗೆ ಟಿ.ಆರ್.ಎಫ್ ದೇಣಿಗೆ ನೀಡಿದ ಚೆಕ್ ಅನ್ನು ಡಿಜಿರವರಿಗೆ ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ಶಿವರಾಂ ಎಂ.ಎಸ್ರವರು ಹಸ್ತಾಂತರಿಸಿದರು.
ಕ್ಲಬ್ ಚಾರ್ಟರ್ ಸದಸ್ಯರಿಗೆ ಗೌರವ:
ರೋಟರಿ ಸೆಂಟ್ರಲ್ ಕ್ಲಬ್ಗೆ ಚಾರ್ಟರ್ ಸ್ಥಾನಮಾನ ದೊರಕಿದ ಸಂದರ್ಭದಲ್ಲಿ ಸದಸ್ಯರಾಗಿದ್ದ ಸಂತೋಷ್ ಶೆಟ್ಟಿ, ಮೊಹಮದ್ ರಫೀಕ್, ಸನತ್ ರೈ, ಅಶೋಕ್ ನಾಯಿಕ್, ರಮೇಶ್ ರೈ ಬೋಳೋಡಿ, ಜಯಪ್ರಕಾಶ್ ಎ.ಎಲ್, ಜಯಪ್ರಕಾಶ್ ಅಮೈ, ವಿಷ್ಣು ಭಟ್, ಶಿವರಾಮ ಎಂ.ಎಸ್, ಭಾರತಿ ಎಸ್ ರೈ, ಕವನ್ ನಾಯ್ಕ್, ಯತೀಶ್ ಸುವರ್ಣ, ಸುಧೀರ್ ಶೆಟ್ಟಿ ನೆಹರುನಗರ, ರಮೇಶ್ ರೈ ಡಿಂಬ್ರಿ, ತ್ವೇಜ್ ಎಸ್.ಪಿ, ಪ್ರದೀಪ್ ಬೊಳ್ವಾರು, ವಸಂತ್ ಬಿ, ಸತ್ಯಶಂಕರ್ ಭಟ್, ಪ್ರಮೋದ್ ಕೆ.ಕೆ, ನೋಯಲ್ ಡಿ’ಸೋಜ, ನವೀನ್ಚಂದ್ರ ನಾಯ್ಕ್, ಲಾವಣ್ಯ ನಾಯ್ಕ್, ಶಾಂತಕುಮಾರ್, ಶಮ್ಸುದ್ದೀನ್, ಪುರುಷೋತ್ತಮ್ ಶೆಟ್ಟಿ, ರಾಜೇಶ್ ಬೆಜ್ಜಂಗಳ, ಚಂದ್ರಹಾಸ ರೈ, ಅಶ್ರಫ್ ಪಿ.ಎಂ, ಅವಿನಾಶ್ ಆರ್, ಇಂದೀವರ್ ಭಟ್, ಜಯಪ್ರಕಾಶ್ ನಾಯ್ಕ್, ಅಮಿತಾ ಶೆಟ್ಟಿಯವರಿಗೆ ಡಿಜಿ ಪ್ರಕಾಶ್ ಕಾರಂತ್ರವರು ಹೂ ನೀಡಿ ಅಭಿನಂದಿಸಿದರು.
ಸನ್ಮಾನ/ಅಭಿನಂದನೆ:
ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ರವರನ್ನು ಕ್ಲಬ್ ವತಿಯಿಂದ ಪೇಟ ತೊಡಿಸಿ ಸನ್ಮಾನಿಸಲಾಯಿತು. ಕ್ಲಬ್ ಆತಿಥ್ಯದಲ್ಲಿ ಇತ್ತೀಚೆಗೆ ನಗರಸಭೆ ಸಭಾಂಗಣದಲ್ಲಿ 158 ಫಲಾನುಭವಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಿ, 114 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲು ನೆರವಾದ ಸ್ಟಾರ್ ಒಪ್ಟಿಕಲ್ಸ್ನ ತಬ್ಸೀರ್ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಆನೆಟ್ ತನ್ವಿ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ನವೀನ್ಚಂದ್ರ ನಾಯ್ಕ್ರವರು ಆಗಮಿಸಿದ ವಿವಿಧ ಕ್ಲಬ್ಗಳ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು, ರೋಟರಿಯ ವಲಯ, ಜಿಲ್ಲಾ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ವೊಕೇಶನಲ್ ಸರ್ವಿಸ್ ನಿರ್ದೇಶಕ ಡಾ|ರಾಜೇಶ್ ಬೆಜ್ಜಂಗಳರವರು ಜಿಲ್ಲಾ ಗವರ್ನರ್ರವರ ಪರಿಚಯ ಮಾಡಿದರು. ಕ್ಲಬ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ಅಮಿತಾ ಶೆಟ್ಟಿ, ರಮೇಶ್ ರೈ ಬೋಳೋಡಿರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಹಾಸ ರೈ ವರದಿ ಮಂಡಿಸಿ, ವಂದಿಸಿದರು. ಕ್ಲಬ್ ಕೋಶಾಧಿಕಾರಿ ಡಾ|ರಾಮಚಂದ್ರ ಎ.ಎಲ್ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ನಾಗರಿಕರಿಗೆ ಸನ್ಮಾನ..
ಕ್ಲಬ್ನ ವೃತ್ತಿ ಸೇವಾ ವಿಭಾಗದಿಂದ ಈರ್ವರು ಹಿರಿಯ ನಾಗರಿಕರ ಪೈಕಿ ಓರ್ವರಾದ ಸುಮಾರು 86 ವರ್ಷದವರಾಗಿದ್ದು ಈಗಲೂ ಟೈಲರ್ ಕಾಯಕವನ್ನು ಮಾಡುತ್ತಿರುವ ಆರ್ಯಾಪು ಗ್ರಾಮದ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಪಿ.ಹುಸೈನ್ ಟೈಲರ್ ಹಾಗೂ 66 ವರ್ಷ ಪ್ರಾಯದವರಾಗಿದ್ದು ಈಗಲೂ ಅಡಿಕೆ ಮರ ಏರಿ ಅಡಿಕೆ ಕೀಳುವ ಕಾಯಕವನ್ನು ನಿರ್ವಹಿಸುತ್ತಿರುವ ಕನ್ಯಾನ ಸಮೀಪದ ಪರಮೇಶ್ವರ ನಾಯ್ಕರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ವೃತ್ತಿ ಸೇವಾ ವಿಭಾಗದ ನಿರ್ದೇಶಕ ಪುರುಷೋತ್ತಮ್ ಶೆಟ್ಟಿರವರು ಸನ್ಮಾನಿತರನ್ನು ಪರಿಚಯಿಸಿದರು.
ಚಾರ್ಟರ್ ನೈಟ್ ಸಂಭ್ರಮ…
ರೋಟರಿ ಕ್ಲಬ್ ಹುಟ್ಟಿಕೊಂಡ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕ್ಲಬ್ ಚಾರ್ಟರ್ ನೈಟ್ ಸಂಭ್ರಮ. ಆಚರಿಸುವುದು ವಾಡಿಕೆ. ಅದರಂತೆ 2019ರಲ್ಲಿ ಹುಟ್ಟಿಕೊಂಡ ರೋಟರಿ ಸೆಂಟ್ರಲ್ಗೆ 2023, ಫೆಬ್ರವರಿ 12 ರಂದು ಚಾರ್ಟರ್ ಸಂಭ್ರಮವಾಗಿದೆ. ಈ ಸಂಭ್ರಮಾಚರಣೆಯ ಅಂಗವಾಗಿ ಕ್ಲಬ್ ಚಾರ್ಟರ್ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಎಲ್ಲಾ ಚಾರ್ಟರ್ ಸದಸ್ಯರ ಪರವಾಗಿ ಸಿಹಿಯ ಪ್ರತೀಕವಾದ ಕೇಕ್ ಕತ್ತರಿಸಿ, ಕೇಕ್ ಅನ್ನು ಡಿಜಿ ಪ್ರಕಾಶ್ ಕಾರಂತ್ರವರಿಗೆ ತಿನ್ನಿಸಿ ಸಂಭ್ರಮವನ್ನು ಆಚರಿಸಲಾಯಿತು.
ಬಿಸ್ಕತ್ತು ಲೋಟ ಚಹಾ..
ಬಹುತೇಕ ಕಾರ್ಯಕ್ರಮಗಳಲ್ಲಿ ಉಪಹಾರದ ಸಂದರ್ಭದಲ್ಲಿ ಚಹಾ, ಕಾಫಿ, ಮಾಲ್ಟ್ ಸವಿಯಲು ಪೇಪರ್ ಗ್ಲಾಸ್ ಅಥವಾ ಸ್ಟೀಲ್ ಗ್ಲಾಸ್ ಬಳಸುವುದು ವಾಡಿಕೆ. ಇದರಲ್ಲಿ ಪೇಪರ್ ಗ್ಲಾಸ್ ತ್ಯಾಜ್ಯವಾಗಿ ಬಿಸಾಡುವಂತಹುದು ಹಾಗೂ ಸ್ಟೀಲ್ ಗ್ಲಾಸ್ ತೊಳೆದಿಡಬೇಕಾದ ಪರಿಸ್ಥಿತಿ. ಆದರೆ ಇಲ್ಲಿ ಇವೆರಡಕ್ಕೂ ತಿಲಾಂಜಲಿ ಇಟ್ಟು ಬಂದಂತಹ ಅತಿಥಿಗಳಿಗೆ ‘ಚಹಾ ಕುಡಿಯಿರಿ, ಲೋಟ ತಿನ್ನಿ’ ಪರಿಕಲ್ಪನೆಯಲ್ಲಿ ಬಿಸ್ಕತ್ನಿಂದ ತಯಾರಿಸಲಾದ ಲೋಟದಲ್ಲಿ ಚಹಾ ನೀಡಲಾಗಿತ್ತು. ಪ್ಲಾಸ್ಟಿಕ್ ಅಥವಾ ಪೇಪರ್ ಲೋಟದಲ್ಲಿ ಚಹಾ ಕುಡಿದರೆ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯಾಗುತ್ತದೆ. ಈ ನಿಟ್ಟಿನಲ್ಲಿ ಬಿಸ್ಕತ್ತು ಲೋಟದಲ್ಲಿ ಚಹಾ ನೀಡಿದ್ದು ಆಗಮಿಸಿದ ಅತಿಥಿಗಳಿಗೆ ಆಹ್ಲಾದಕರವಾಗಿ ಪರಿಣಮಿಸಿತ್ತು.
ಕ್ಲಬ್ ಕೊಡುಗೆಗಳು…
ಮುಕ್ರಂಪಾಡಿ ಪ್ರಜ್ಞಾ ಆಶ್ರಮಕ್ಕೆ ಸದಸ್ಯ ಪದ್ಮನಾಭ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಅರ್ಧವಾರ್ಷಿಕ ದೇಣಿಗೆಯಾದ ರೂ.30000 ಹಸ್ತಾಂತರ, ವಲಯ ಸೇನಾನಿ ಡಾ|ಹರ್ಷಕುಮಾರ್ ರೈಯವರ ಪ್ರಾಯೋಜಕತ್ವದಲ್ಲಿ ಶಿವರಾಮ ಕಾರಂತರ ಬಾಲವನದಲ್ಲಿ ಸಾರ್ವಜನಿಕರಿಗಾಗಿ ರೂ.35000 ಮೊತ್ತದ ನೀರಿನ ಘಟಕದ ಹಸ್ತಾಂತರ, ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕ್ಲಬ್ ಸದಸ್ಯರಾದ ರಮೇಶ್ ರೈ ಬೋಳೋಡಿ(5), ಪದ್ಮನಾಭ ಶೆಟ್ಟಿ(2), ಜಯಪ್ರಕಾಶ್ ಎ.ಎಲ್, ರಾಕೇಶ್ ಶೆಟ್ಟಿ, ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ(ತಲಾ 1) ಹೀಗೆ ಹತ್ತು ಫ್ಯಾನುಗಳ ಕೊಡುಗೆ ಹಸ್ತಾಂತರ, ರೋಟರಿ ಕಲ್ಚರಲ್ ಇವೆಂಟ್ ಚೇರ್ಮ್ಯಾನ್ ಕೆ.ವಿಶ್ವಾಸ್ ಶೆಣೈ ಹಾಗೂ ದರ್ಬೆ ಸ್ಮಾರ್ಟ್ ಗಿಪ್ಟ್ ಮತ್ತು ಫ್ಯಾನ್ಸಿ ಶಾಪ್ ಮಾಲಕ ವಿನ್ಸೆಂಟ್ ಡಿ’ಸೋಜರವರ ಪ್ರಾಯೋಜಕತ್ವದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ರೋಗಿಗಳಿಗೆ ರೇಷನ್ ಕಿಟ್ ವಿತರಣೆ, ಇತ್ತೀಚೆಗೆ ಅಗಲಿದ ನಿವೃತ್ತ ಉಪನ್ಯಾಸಕರಾದ ಜನಾರ್ದನ ಪಿ.ರವರ ನೆನಪಿಗಾಗಿ ಅವರ ಪತ್ನಿ ಕೊಡಮಾಡಿದ 2000ಲೀಟರಿನ ಟ್ಯಾಂಕ್ ಅನ್ನು ಸಾಲ್ಮರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ರವರು ಭಾಗವಹಿಸಿದರು.