ಅಪಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಮುರಳೀಕೃಷ್ಣ ಭಟ್ ರವರ ಅಂತ್ಯಕ್ರಿಯೆ
ನೂರಾರು ಕಾರ್ಯಕರ್ತರು, ಪಕ್ಷದ ಪ್ರಮುಖರಿಂದ ಅಂತಿಮ ದರ್ಶನ

0

ಬೆಟ್ಟಂಪಾಡಿ: ಫೆ. 15 ರಂದು ರಾತ್ರಿ ಸಂಟ್ಯಾರ್ ಬಳಕ್ಕದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಗ್ರಾ.ಪಂ. ಸದಸ್ಯ, ವಿಶ್ವಹಿಂದು ಪರಿಷತ್ ಬಜರಂಗದಳ ನಿಡ್ಪಳ್ಳಿ ಮಾಜಿ ಅಧ್ಯಕ್ಷ ಮುರಳೀಕೃಷ್ಣ ಭಟ್ ಮುಂಡೂರು ರವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಫೆ. 15 ರಂದು ಮುಂಡೂರಿನಲ್ಲಿ ನಡೆಯಿತು.


ಬೆಳಿಗ್ಗೆ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದ್ವಾರದ ಬಳಿಯಿಂದ ನೂರಾರು ವಾಹನಗಳ ಮೂಲಕ ಮೆರವಣಿಗೆಯಲ್ಲಿ ಪಾರ್ಥೀವ ಶರೀರವನ್ನು ಸಾಗಿಸಲಾಯಿತು. ನಿಡ್ಪಳ್ಳಿ ವಿಜಯನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಮುಂಡೂರು ಅವರ ಸ್ವಗೃಹಕ್ಕೆ ಕರೆದೊಯ್ಯಲಾಯಿತು.


ಸಕ್ರಿಯ ಕಾರ್ಯಕರ್ತ:

ಮೃತ ಮುರಳೀಕೃಷ್ಣರವರು ಸ್ಥಳೀಯವಾಗಿ ಹಿಂದು ಸಂಘಟನೆಗಳಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದರು. ವಿಶ್ವಹಿಂದು ಪರಿಷತ್ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಬಜರಂಗದಳ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದರು. ಯಾವುದೇ ಕಾರ್ಯಕ್ರಮಗಳಿಗೂ ಯುವಕರನ್ನು ಸಂಘಟಿಸುವಲ್ಲಿ ಸಂಘಟನಾ ಚತುರರಾಗಿದ್ದರು. ಎಳೆಯ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಆ ಭಾಗದಲ್ಲಿ ಆರ್‌ಎಸ್‌ಎಸ್ ಶಾಖೆ ನಡೆಸುತ್ತಿದ್ದರು. ಧಾರ್ಮಿಕವಾಗಿ ನಿಡ್ಪಳ್ಳಿ ಶ್ರೀ ಪೂಮಾಣಿ ದೈವದ ಪಾತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


ಉತ್ತಮ ಭವಿಷ್ಯ ಹೊಂದಿದ್ದರು:

ಗ್ರಾ.ಪಂ. ಸದಸ್ಯರಾಗಿ ತನ್ನ ವಾರ್ಡ್ ನಲ್ಲಿ ಅನೇಕ ರಸ್ತೆ, ನೀರು ಇನ್ನಿತರ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಅನುದಾನ ತರಿಸಿ ಸಾರ್ವಜನಿಕರ ಮುಕ್ತಕಂಠದ ಶ್ಲಾಘನೆಗೆ ಒಳಗಾಗಿ ಉತ್ತಮ ಭವಿಷ್ಯ ಹೊಂದಿದ್ದರು. ಜನರ ಬೇಡಿಕೆ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡುತ್ತಿದ್ದ ಜನಪ್ರತಿನಿಧಿ ಎನಿಸಿಕೊಂಡಿದ್ದರು. ‘ಸಮಾಜ ಸೇವೆಯಲ್ಲಿ ಇನ್ನು ಇಂತಹ ವ್ಯಕ್ತಿ ನಮಗೆ ಸಿಗ್ಲಿಕ್ಕಿಲ್ಲ’ ಅನ್ನೋ ಮಾತು ನೆರೆದವರಿಂದ ಕೇಳಿ ಬರುತ್ತಿತ್ತು. ಕೂಟೇಲು – ಗೋಳಿತಡಿ ರಸ್ತೆಯಲ್ಲಿ ಚಿಕ್ಕೋಡಿ ಎಂಬಲ್ಲಿ ತಡೆಗೋಡೆ ಅಭಿವೃದ್ದಿ ಬಗ್ಗೆ ವಿಶೇಷ ಕನಸು ಕಂಡಿದ್ದರು. ಈ ಬಗ್ಗೆ ಇತ್ತೀಚೆಗೆ ಇಂಜಿನಿಯರ್ ರನ್ನು ಬರಿಸಿ ಎಸ್ಟಿಮೇಟ್ ರಚಿಸಿ ಮುಂದಡಿಯಿಟ್ಟಿದ್ದರು. ತನ್ನ ವಾರ್ಡ್ ಊರಿನ ಅಭಿವೃದ್ಧಿಗಾಗಿ ಪ್ರತಿಫಲ ಅಪೇಕ್ಷೆಯಿಲ್ಲದೇ ಪ್ರಾಮಾಣಿಕ ಪ್ರಯತ್ನದ ಕೆಲಸ ಮಾಡಿದ್ದರು. ಬಡವರಿಗೆ ಸರಕಾರಿ ಸವಲತ್ತು ಸಿಗುವಂತೆ ಮಾಡುತ್ತಿದ್ದರು. ವಿವಾದಾತ್ಮಕ ರಸ್ತೆಗಳನ್ನು ಶಾಸಕರ ಮುಖಾಂತರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನ ನಡೆಸಿ ಸಫಲರಾಗುತ್ತಿದ್ದರು. ಇವರು ಸದಸ್ಯರಾದ ಬಳಿಕ ವಾರ್ಡ್ ನ ಅನೇಕ ಕಡೆ ಇದ್ದ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಶಾಸಕರೊಂದಿಗೆ ನೇರ ಸಂಪರ್ಕ ಹೊಂದಿ ಟೆಂಡರ್ ತರಿಸಿ ಪೂರ್ಣ ಪ್ರಮಾಣದ ಕಾಮಗಾರಿ ನಡೆಯುವಂತೆ ಮುತುವರ್ಜಿ ವಹಿಸುತ್ತಿದ್ದರು. ಯಾವ ಸಮಯದಲ್ಲಿ ಯಾರೇ ಕರೆ ಮಾಡಿದರೂ ತಕ್ಷಣ ಸ್ಪಂದಿಸಿ ಬರುತ್ತಿದ್ದರು ಎನ್ನುತ್ತಾರೆ ಸ್ಥಳೀಯ ನಾಗರಿಕರು.


ಶ್ರಮಜೀವಿಯಾಗಿದ್ದರು:

ತಂದೆ ತಾಯಿ ಇಲ್ಲದೇ ಇದ್ದರೂ ಪ್ರತಿದಿನ ಸಹೋದರನ ಜೊತೆಗೂಡಿ ಮನೆಯ ಕೆಲಸ ಮಾಡಿ, ಹೈನುಗಾರಿಕೆ ನಡೆಸಿ ಬಳಿಕ ಸಮಾಜ ಸೇವೆಗೆ ಸೈ.. ಪಂ. ಸದಸ್ಯನಾದರೂ ಸಿಬಂದಿಗಳ ಜೊತೆ ತಾನೇ ಸ್ವತಃ ಪೈಪ್ ಲೈನ್ ದುರಸ್ತಿಗೆ ಸಹಕರಿಸುತ್ತಿದ್ದರು.


ಸಹಾಯ ಹಸ್ತ :

ಮಕ್ಕಳಿಗೆ ಪುಸ್ತಕ ವಿತರಣೆ, ಅನಾರೋಗ್ಯ ಪೀಡಿತರಾದವರಿಗೆ ಹಣವನ್ನು ಸಂಗ್ರಹಿಸಿ ಕೊಡುವಲ್ಲಿ ಮುಂದಾಳತ್ವ ವಹಿಸುತ್ತಿದ್ದರು.
ಯುವಕರ ಕಣ್ಮಣಿ: ಇವರು ರಾಜಕೀಯದಲ್ಲಿ ಮುಂದೆ ಬಂದ ಬಳಿಕ ಯುವಕರನ್ನು ಸಂಘಟಿಸಿ, ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು. ಪಕ್ಷದಲ್ಲಿಯೂ ನಾಯಕರುಗಳ ಶಹಬ್ಬಾಸ್ ಗಿರಿಗೆ ಒಳಗಾಗಿದ್ದರು. ಮುಂಡೂರು ದೇವಸ್ಥಾನ ಜೀರ್ಣೋದ್ದಾರ ಕಾರ್ಯದಲ್ಲಿಯೂ ಇವರ ನೇತೃತ್ವದಲ್ಲಿ ಅನೇಕ ಶ್ರಮದಾನಗಳು ನಡೆದು ಕೆಲವು ಹಂತದ ಪ್ರಕ್ರಿಯೆಗಳು ನಡೆದಿವೆ ಎನ್ನಲಾಗಿದೆ. ಎಲ್ಲರೊಡನೆ ಮಾತನಾಡಿದ್ದರು


ಮುರಳೀಕೃಷ್ಣರವರು ಫೆ. ೧೪ ರಂದು ದೈನಂದಿನ ವ್ಯವಹಾರಗಳನ್ನು ನಡೆಸುವವರೊಂದಿಗೆ ಹೆಚ್ಚು ಸಮಯ ಕಾಲ ಕುಶಲೋಪರಿ ಮಾತನಾಡಿದ್ದರು. ರಸ್ತೆ ಕಾಂಕ್ರೀಟ್ ಆದಲ್ಲಿನ ಸ್ಥಳೀಯರು ಸಂಜೆ ಕರೆ ಮಾಡಿದಾಗ ‘ನೀವು ನೀರು ಹಾಕುತ್ತಿರಿ. ನಾನು ಈಗ ಬರುತ್ತೇನೆ’ ಎಂದ ಮುರಳೀ ಭಟ್ ರವರು ಬಾರದ ಲೋಕಕ್ಕೆ ಪ್ರಯಾಣಿಸಿದ್ದರು.


ಹಲವು ಗಣ್ಯರ ಭೇಟಿ:

ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರ. ಕಾರ್ಯದರ್ಶಿ ನಿತೀಶ್ ಶಾಂತಿವನ, ನಗರ ಅಧ್ಯಕ್ಷ ಪಿ.ಜಿ. ಜಗನ್ನೀವಾಸ್ ರಾವ್, ಹಿಂದು ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ತಾ.ಪಂ. ಮಾಜಿ ಸದಸ್ಯ ಹರೀಶ್ ಬಿಜತ್ರೆ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ ಹಾಗೂ ನಿರ್ದೇಶಕರುಗಳು, ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನಗಳ ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್. ಆರಿಗ ನಿಡ್ಪಳ್ಳಿ ಗುತ್ತು, ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಪಡುಮಲೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ತಾ.ಪಂ. ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್, ಸದಸ್ಯರುಗಳು, ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಡಿ., ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ಸದಸ್ಯರುಗಳು, ಬಿಜೆಪಿ ಬೆಟ್ಟಂಪಾಡಿ ಶಕ್ತಿ ಕೇಂದ್ರ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಪಾಣಾಜೆ ಶಕ್ತಿ ಕೇಂದ್ರ ಅಧ್ಯಕ್ಷ ಸದಾಶಿವ ರೈ ಸೂರಂಬೈಲು, ಹಿಂದು ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಕಾರ್ಯಕರ್ತರು ಅಂತಿಮ ದರ್ಶನ ಪಡೆದು ಮಧ್ಯಾಹ್ನ ಅಂತ್ಯಕ್ರಿಯೆ ಆಗುವವರೆಗೂ ಹಾಜರಿದ್ದರು.

ಅಧಿವೇಶನದಿಂದ ಆಗಮಿಸಿದ ಶಾಸಕರು

ಶಾಸಕ ಸಂಜೀವ ಮಠಂದೂರುರವರು ಫೆ. ೧೪ ರಂದು ಅಧಿವೇಶನದಲ್ಲಿದ್ದರು. ರಾತ್ರಿ ಕಾರ್ಯಕರ್ತ ಮೃತಪಟ್ಟಿರುವ ವಿಷಯ ತಿಳಿದ ಕೂಡಲೇ ಪುತ್ತೂರಿಗೆ ಆಗಮಿಸಿದರು. ಬೆಳಿಗ್ಗೆ ಪುತ್ತೂರಿನಿಂದ ಮೃತದೇಹವಿದ್ದ ಆಂಬುಲೆನ್ಸ್ ಜೊತೆಗೆ ಬಂದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ಮನೆಯಲ್ಲಿಯೂ ತುಸು ಹೊತ್ತು ಇದ್ದು, ಮನೆಯವರಿಗೆ ಸಾಂತ್ವನ ತಿಳಿಸಿ ವಾಪಾಸ್ ಅಧಿವೇಶನಕ್ಕೆ ಬೆಂಗಳೂರಿಗೆ ತೆರಳಿದರು.

ಪಂಚಾಯತ್‌ನಲ್ಲೂ ಅಭಿವೃದ್ಧಿ ಮತ್ತು ಸಂಘಟನೆಯನ್ನು ಏಕಕಾಲದಲ್ಲಿ ನಡೆಸುತ್ತಿದ್ದ ಯುವಕ. ಇನ್ನೊಂದಷ್ಟು ಸಮಾಜ ಸೇವೆ ಮಾಡುವ ಅವಕಾಶಗಳು ಅವರಿಗಿತ್ತು. ಅವರ ಸಮಾಜ ಸೇವೆಯನ್ನು ಭಾಜಪವೂ ಗೌರವಿಸಿದೆ -ಸಂಜೀವ ಮಠಂದೂರು ಶಾಸಕರು

ಹಿಂದು ಸಮಾಜದ ಆಸ್ತಿಯನ್ನು ಕಳೆದುಕೊಂಡಿದ್ದೆವೆ. ಅವರ ಆಸೆ ಕನಸುಗಳನ್ನು ಈಡೇರಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯ ಮಾಡಲಿದ್ದೆವೆ. -ಮುರಳೀಕೃಷ್ಣ ಹಸಂತಡ್ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು

LEAVE A REPLY

Please enter your comment!
Please enter your name here