ಪುತ್ತೂರು: ಸಂಪತ್ತನ್ನು ಅಲ್ಲಾಹನು ಎಲ್ಲರಿಗೂ ನೀಡದೆ ಕೆಲವರಿಗೆ ಮಾತ್ರ ಕರುಣಿಸಿದ್ದಾನೆ, ಸಂಪತ್ತು ಕೊಡುವುದು, ಬಡತನವನ್ನು ನೀಡುವುದು ಇವೆರಡೂ ಅಲ್ಲಾಹನ ಇಚ್ಚೆಯಾಗಿದೆ. ಸಂಪತ್ತು ಕೂಡಿಡುವ ಬದಲು ಅದನ್ನು ದಾನ ಮಾಡಬೇಕೆಂಬುದು ಇಸ್ಲಾಂನ ಆದೇಶವಾಗಿದೆ. ಭಕ್ತಿಯಿಂದ ನೀಡಿದ ದಾನವು ನಮ್ಮನ್ನು ವಿಪತ್ತುಗಳಿಂದ ಸಂರಕ್ಷಿಸುತ್ತದೆ ಎಂದು ಹಾಫಿಳ್ ಇ ಪಿ ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಹೇಳಿದರು.
ಅವರು ಖಿಳ್‌ರಿಯಾ ಮಸೀದಿ ಡಿಂಬ್ರಿ ಇದರ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಏಕದಿನ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಕೊಯಿಲತ್ತಡ್ಕ ಎಬ್ರಾಡ್ ಗ್ರೌಂಡ್‌ನಲ್ಲಿ ಕಾರ್ಯಕ್ರಮ ನಡೆಯಿತು. ಅಲ್ಲಾಹನ ಭವನ ಮತ್ತು ಮದ್ರಸ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಸಹಾಯ ಮಾಡುವವರಾಗಬೇಕು. ಮರಣಾನಂತರ ನಮಗೆ ಬಾಕಿಯಾಗುವ ಏಕೈಕ ಸೊತ್ತು ದಾನವಾಗಿದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಏನನ್ನೂ ನಿರೀಕ್ಷೆ ಮಾಡಲಾಗದ ಕಾಲವಾಗಿದೆ. ದಾನಿಗಳನ್ನು ಅಲ್ಲಾಹನು ಎಂದಿಗೂ ಕೈ ಬಿಡುವುದಿಲ್ಲ ಎಂಬುದಕ್ಕೆ ಅನೇಕ ದೃಷ್ಟಾಂತಗಳು ಇದ್ದು ಹಠಾತ್ತನೆ ಸಂಭವಿಸುವ ಮರಣಗಳಿಂದ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು. ಮರಣದ ಬಳಿಕ ನಾವು ಸಂತೋಷದಿಂದ ಇರಬೇಕಾದಲ್ಲಿ ಜೀವಿತದ ಅವಧಿಯಲ್ಲಿ ನಾವು ಸಜ್ಜನರಾಗಿರಬೇಕು ಎಂದು ಹೇಳಿದ ಅವರು ಸಜ್ಜನರ ಸಾವಿಗೆ ಆಕಾಶ, ಭೂಮಿ, ಸೇರಿದಂತೆ ಅಲ್ಲಾಹನ ಭವನಗಳು ಕಣ್ಣೀರು ಹಾಕುತ್ತದೆ ಎಂದು ಹೇಳಿದರು.
ಡಿಂಬ್ರಿ ಇಬ್ರಾಹಿಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕುಂಬ್ರ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವು ಪ್ರವಾದಿ ಸ್ನೇಹಿಗಳಾಗಬೇಕು. ನಮ್ಮ ಮಸೀದಿಯಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್‌ಗಳಲ್ಲಿ ಭಾಗಿಯಾಗುವ ಮನೋಭಾವ ನಮ್ಮಲ್ಲಿರಬೇಕು. ಭಕ್ತಿಯನ್ನು ಇನ್ನೊಬ್ಬರು ಹೇಳಿಕೊಡಲು ಸಾಧ್ಯವಿಲ್ಲ ಅದು ತನ್ನಿಂತಾನೇ ನಮ್ಮ ಹೃದಯದಲ್ಲಿ ಉದಯಿಸುವ ಒಂದು ಕ್ರಿಯೆಯಾಗಿದೆ. ನಾವು ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರವಾದಿಯನ್ನು, ಅಚರ ಚರ್ಯೆಯನ್ನು ಪ್ರೀತಿಸುವ ನೈಜ ಮುಸಲ್ಮಾನನಾಗಿ ಬಾಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಸಾಲ್ಮರ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ, ಪಮ್ಮಲೆ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಹಾಜಿ ಬಡಗನ್ನೂರು, ಯೂಸುಫ್ ಮುಸ್ಲಿಯಾರ್ ಬೆದ್ರಗುರಿ, ಕುಂಬ್ರ ಬದ್ರಿಯಾ ಜಮಾತ್ ಕಮಿಟಿ ಅದ್ಯಕ್ಷ ಉಸ್ಮಾನ್ ಮುಸ್ಲಿಯಾರ್, ಡಿಂಬ್ರಿ ಸದರ್ ಆಶಿಕ್ ಹಿಸಾಮಿ ಮಾಡಾವು, ಬದ್ರಿಯಾ ನಗರ ಮುಅಲ್ಲಿಂ ಸಿದ್ದಿಕ್ ಸಅದಿ ಕೊಡ್ಲಿಪೇಟೆ, ಉದ್ಯಮಿ ಇಕ್ಬಾಲ್ ಕೋಲ್ಪೆ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಅಬ್ದುಲ್ ಹಮೀದ್ ಹಾಜಿ ಫ್ಯಾಮಿಲಿ ಮಾಡಾವು, ಉದ್ಯಮಿ ದಾವೂದ್ ಬಪ್ಪಳಿಗೆ, ಅಬ್ದುಲ್ಲ ಹಾಜಿ ಡಿಂಬ್ರಿ, ಯೂಸುಫ್ ಪುತ್ತೂರು ಟ್ರೇಡರ‍್ಸ್, ಮುಸ್ಥಫಾ ಗ್ರಾನೈಟ್ ಕುಂಬ್ರ, ಅಬ್ದುಲ್ ಖಾದರ್ ಹಾಜಿ ಮೇರ್ಲ, ಕೆಯ್ಯೂರು ಗ್ರಾಪಂ ಸದಸ್ಯ ಮುಹಮ್ಮದ್ ಹನೀಫ್ ಪಿ ಕೆ ಮಹಮ್ಮದ್ ಕೂಡುರಸ್ತೆ, ಅರಬಿ ಹಾಜಿ ಡಿಂಬ್ರಿ, ಅಬೂಬಕ್ಕರ್ ಸಾರೆಪುಣಿ, ಅಬೂಬಕ್ಕರ್ ಡಿಂಬ್ರಿ, ಆದಂಕುಂಞಿ ಡಿಂಬ್ರಿ, ಮಹಮ್ಮದ್ ಮಗಿರೆ ಡಿಂಬ್ರಿ ಮೊದಲಾದವರು ಉಪಸ್ಥಿತರಿದ್ದರು.
ಪೆರಿಯಡ್ಕ ಜುಮಾ ಮಸೀದಿ ಖತೀಬ್ ಅಬ್ದುಲ್‌ರಹಿಮಾನ್ ಫೈಝಿ ಸ್ವಾಗತಿಸಿ, ಸ್ವಾಗತ ಸಮಿತಿ ಚೆಯರ್‌ಮೆನ್ ಯೂಸುಫ್ ಅರ್ಷದಿ ವಂದಿಸಿದರು. ಡಿಂಬ್ರಿ ಮಸೀದಿ ಅಧ್ಯಕ್ಷ ನಿಝಾರ್ ಡಿಂಬ್ರಿ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಮುಸ್ಲಿಯಾರ್ ಡಿಂಬ್ರಿ ಸಹಕರಿಸಿದರು.