ಕಡಬ: ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸಿ, ಅದಕ್ಕೆ ಕಾನೂನುಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದನ್ನು ತಕ್ಷಣ ಕಡಿತಗೊಳಿಸಬೇಕು, ತಪ್ಪಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ, ಶಿರಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ಕೆ.ಪೌಲೋಸ್ ಹೇಳಿದರು.
ಅವರು ಫೆ. 18 ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಕಳೆದ ತಿಂಗಳು ಮೆಸ್ಕಾಂಗೆ ಅರ್ಜಿ ಹಾಗೂ ಇಂಡೆಮ್ನಿಟಿ ಬಾಂಡನ್ನು ನೀಡಿದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಹೇಳಿದರು. ಇಲ್ಲಿ ಹುಕ್ರಪ್ಪ ಗೌಡ ಹಾಗೂ ಎಚ್.ಜಿ. ಕುಮಾರ್ ಎಂಬವರು ವ್ಯಾಪಾರ ಮಾಡುತ್ತಿದ್ದರು. ಅವರು ಹತ್ತು ವರ್ಷಗಳ ಹಿಂದೆ ವ್ಯಾಪಾರ ಬಿಟ್ಟು ಬೇರೆ ಊರಿಗೆ ತೆರಳಿದ ಬಳಿಕ ಈ ಅಕ್ರಮ ಕಟ್ಟಡವನ್ನು ಖರೀದಿಸಿರುವ ಅಭಿಲಾಷ್ ಹಾಗೂ ಅವರ ತಂದೆ ಜೆ.ಜೋಸೆಫ್‌ರವರು ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಮಾತ್ರವಲ್ಲದೆ ಹುಕ್ರಪ್ಪ ಹಾಗೂ ಎಸ್.ಜಿ.ಕುಮರ್ ಅವರ ಹೆಸರಿನಲ್ಲಿರುವ ವಿದ್ಯುತ್ ಸಂಪರ್ಕವನ್ನು ತಮ್ಮ ಹೆಸರಿಗೆ ಮಾಡಿಕೊಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದು ಹುಕ್ರಪ್ಪ ಹಾಗೂ ಎಚ್.ಜಿ. ಕುಮಾರ್ ಅವರ ನಕಲಿ ಸಹಿ ಮಾಡಿ ಪಂಚಾಯಿತಿಗೆ ಹಾಗೂ ಮೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸಿರುತ್ತಾರೆ. ಆದುದರಿಂದ ಅಭಿಲಾಷ್ ಹಾಗೂ ಜೋಸೆಫ್ ಅವರ ವಿರುದ್ಧ ಮೆಸ್ಕಾಂ ಹಾಗೂ ಪೋಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ ಎಂ.ಕೆ.ಪೌಲೋಸ್‌ರವರು ತಕ್ಷಣ ಅಕ್ರಮ ವಿದ್ಯತ್ ಸಂಪರ್ಕ ಕಡಿತಗೊಳಿಸದಿದ್ದರೆ ಮೆಸ್ಕಾಂ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಜೀಶ್ ಜಿ ಮಾಣಿ ಉಪಸ್ಥಿತರಿದ್ದರು.
ಈ ಬಗ್ಗೆ ಕಡಬ ಮೆಸ್ಕಾಂ ಎ.ಇ.ಇ ಸಜಿ ಕುಮಾರ್ ಅವರು ಪ್ರತಿಕ್ರಿಯೆ ನೀಡಿ, ನಾವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅಥವಾ ಇನ್ನಾವುದೇ ಕೆಲಸಗಳು ಫಲಾನುಭವಿ ಅಪೇಕ್ಷಿಸಿದರೆ ಮಾತ್ರ ಮಾಡಬಹುದು. ಈ ಪ್ರಕರಣದ ಹೊರಗಿನ ವ್ಯಕ್ತಿಗಳು ಯಾವುದೇ ಒತ್ತಡ ಹಾಕಿದರೆ ವಿದ್ಯುತ್ ಸಂಫರ್ಕ ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.