ವಿಟ್ಲ : ಬಂಟ್ವಾಳ ತಾಲೂಕಿನ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಪಾಲಕರಿಗೆ ನೆಕ್ಸ್ಟ್ ಎಜುಕೇಶನ್ ತಂತ್ರಜ್ಞಾನದ ಮಾಹಿತಿ ಕಾರ್ಯಾಗಾರ ನಡೆಯಿತು. ಶಾಲಾ ಅಧ್ಯಕ್ಷರಾದ ಪ್ರಹ್ಲಾದ್ ಜೆ ಶೆಟ್ಟಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪರಿಸರದ ಮಕ್ಕಳಿಗೆ ವ್ಯವಸ್ಥಿತವಾದ ಶಿಕ್ಷಣವು ಸಿಗಬೇಕೆನ್ನುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕೇಂದ್ರ ಪಠ್ಯಕ್ರಮವನ್ನು ಅಳವಡಿಸಲು ನಾವು ಮುಂದಾಗಿದ್ದೇವೆ. ಅದಕ್ಕಾಗಿ ಹೆತ್ತವರಿಗೆ ನೆಕ್ಸ್ಟ್ ಎಜುಕೇಶನ್ ತಂತ್ರಜ್ಞಾನ ಹಾಗೂ ಪಠ್ಯಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.
ಶಾಲಾ ಆಡಳಿತ ಅಧಿಕಾರಿ ರವೀಂದ್ರ ಡಿ. ರವರು ಮಾತನಾಡಿ ಮಕ್ಕಳ ಶೈಕ್ಷಣಿಕ ಬದುಕು ಬದಲಾಗಬೇಕಾದರೆ ಹೆತ್ತವರ ಮನಸ್ಥಿತಿ ಬದಲಾಗಬೇಕು. ದಿನನಿತ್ಯದ ಬಳಕೆಯಲ್ಲಿ ತಾಂತ್ರಿಕತೆಯನ್ನು ಉಪಯೋಗಿಸುವ ಈ ಕಾಲದಲ್ಲಿ ಮಕ್ಕಳ ಶಿಕ್ಷಣದಲ್ಲೂ ಇದನ್ನು ಉಪಯೋಗಿಸಬೇಕು ಎಂದು ಮನಗಂಡು ಕಡಿಮೆ ಶುಲ್ಕದಲ್ಲಿ ಸುಸಜ್ಜಿತವಾದ ಶಾಲಾ ನೂತನ ಕಟ್ಟಡದಲ್ಲಿ ಸಿಬಿಎಸ್ಇ ಪಠ್ಯಕ್ರಮದಲ್ಲಿ ನೆಕ್ಸ್ಟ್ ಎಜುಕೇಶನ್ ತಂತ್ರಜ್ಞಾನವನ್ನು ಆಡಳಿತ ಮಂಡಳಿಯು ಒದಗಿಸುತ್ತಿದೆ ಎಂದರು.
ನೆಕ್ಸ್ಟ್ ಎಜುಕೇಶನ್ ನ ತರಬೇತುದಾರರಾದ ಅರ್ಚನಾ ಮಧುಸೂದನ್ ರವರು ವಿವಿಧ ಚಟುವಟಿಕೆಗಳೊಂದಿಗೆ ಸುದೀರ್ಘವಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಯತಿರಾಜ ಕೆ. ಎನ್, ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ, ಸದಸ್ಯರಾದ ಸುಭಾಷಿಣಿ ಎ ಶೆಟ್ಟಿ ,ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ. ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ವಿಜಯಲಕ್ಷ್ಮಿ ವಿ. ಶೆಟ್ಟಿ ಸ್ವಾಗತಿಸಿ, ಸಹ ಶಿಕ್ಷಕಿ ರಶ್ಮಿ ಫೆರ್ನಾಂಡಿಸ್ ರವರು ವಂದಿಸಿದರು. ಶಾಲಾ ಶಿಕ್ಷಕಿಯರು ಪ್ರಾರ್ಥಿಸಿದರು. ಜಯಶ್ರೀ ಆಚಾರ್ಯ ಹಾಗೂ ಸುಪ್ರಿಯಾ ಡಿ. ಕಾರ್ಯಕ್ರಮ ನಿರೂಪಿಸಿದರು.