ವರುಷ ಪೂರೈಸಿದ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಉಚಿತ ವೈದ್ಯಕೀಯ ಶಿಬಿರ

0

12 ಪ್ರತ್ಯೇಕ ವಿಭಾಗಗಳಲ್ಲಿ ತಪಾಸಣೆ, ಊಚಿತ ಔಷಧಿ ವಿತರಣೆ, ಧನ್ವಂತರಿ ಹವನ, ಆರೋಗ್ಯ ಮಾಹಿತಿ-ಶಿಬಿರದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

ಪುತ್ತೂರು:ಭಕ್ತರ ಅನುಕೂಲತೆಗಳಿಗೆ ತಕ್ಕಂತೆ ಪ್ರತಿ ತಿಂಗಳು ವಿಶೇಷ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚಿತಾ ವೈದ್ಯಕೀಯ ಶಿಬಿರವು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವರ್ಷದ ವೈದ್ಯಕೀಯ ಶಿಬಿರದ ವಾರ್ಷಿಕೋತ್ಸವ ಸಂಪ್ಯ ಆರೋಗ್ಯ ಮೇಳ' ಇನ್ನಷ್ಟು ವಿಶಿಷ್ಠ ಶೈಲಿಯಲ್ಲಿ ನಡೆಯಲಿದೆ. ವರ್ಷದ ಶಿಬಿರದಲ್ಲಿ 12 ಪ್ರತ್ಯೇಕ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಲೋಕ ಕಲ್ಯಾಣಾರ್ಥವಾಗಿಧನ್ವಂತರಿ ಹವನಗಳನ್ನು ಮಾ.5ರಂದು ನಡೆಸಲಾಗುವುದು ಎಂದು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.


ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಆರೋಗ್ಯ ರಕ್ಷಾ ಸಮಿತಿ ಇದರ ಆಶ್ರಯದಲ್ಲಿ ಸಂಪ್ಯ ನವಚೇತನ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಯೋಗದಲ್ಲಿ ನಡೆಯುವ ಶಿಬಿರವು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಹವನ ನಡೆಸಲಾಗುವುದು. ಶಿಬಿರವು 12 ತಿಂಗಳು ಪೂರೈಸಿದ್ದು 12 ಪ್ರತ್ಯೇಕ ವಿಭಾಗಗಳಲ್ಲಿ ತಪಾಸಣೆ ನಡೆಸುವುದು, 12 ತಿಂಗಳ ವೈದ್ಯಕೀಯ ಶಿಬಿರದಲ್ಲಿ ಸಹಕರಿಸಿದ ವೈದ್ಯರಿಗೆ, ವಿಶೇಷ ದೇಣಿಗೆ ನೀಡಿ ಸಹಕರಿಸಿದ ಮಹನೀಯರಿಗೆ ಕಾರ್ಯಕ್ರಮದಲ್ಲಿ ಗುರುತಿಸಿ, ಗೌರವಿಸುವುದಾಗಿ ತೀರ್ಮಾಣಿಸಲಾಗಿದೆ.


12 ಶಿಬಿರದ ಪ್ರಾರಂಭದಲ್ಲಿ ಪ್ರಾತಃಕಾಲ ಧನ್ವಂತರಿ ಹವನ, ನೊಂದಣಿ, 12ನೇ ಶಿಬಿರದ ಉದ್ಘಾಟನೆ, ಉದ್ಘಾಟನೆಯ ಬಳಿಕ ವಿವಿಧ ವಿಭಾಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಆರೋಗ್ಯ ಮಾಹಿತಿ ವಿಶೇಷ ಉಪನ್ಯಾಸ ನಡೆಯಲಿದ್ದು ನರ ಮಾನಸಿಕ ತಜ್ಞ ಡಾ.ಗಣೇಶ್ ಪ್ರಸಾದ್ ಮುದ್ರಾಜೆಯವರಿಂದ `ಮಾನಸಿಕ ಆರೋಗ್ಯದ ಪ್ರಾಮುಖ್ಯತೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹಾಗೂ ಪುತ್ತೂರಿನ ಹಿರಿಯ ತಜ್ಞ ವೈದ್ಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗುವುದು, ಮಧ್ಯಾಹ್ನ ನಡೆಯುವ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ಆಶೀರ್ವಚನ ನೀಡಲಾಗುವುದು ಎಂದು ತೀರ್ಮಾನಿಸಲಾಯಿತು. ಶಿಬಿರ ಯಶಸ್ಸಿಗೆ ಉಪ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


12 ಪ್ರತ್ಯೇಕ ವಿಭಾಗಗಳಲ್ಲಿ ಉಚಿತ ಚಿಕಿತ್ಸೆ, ಉಚಿತ ಔಷಧಿ:


12ನೇ ತಿಂಗಳ ಶಿಬಿರದಲ್ಲಿ 12 ಪ್ರತ್ಯೇಕ ವಿಭಾಗಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು ಜನರಲ್ ಮೆಡಿಸಿನ್(ಸಾಮಾನ್ಯ ವೈದ್ಯಕೀಯ ತಪಾಸಣೆ), ಹೃದ್ರೋಗ ಮತ್ತು ಶ್ವಾಸಕೋಶ ಚಿಕಿತ್ಸೆ, ಶಸ್ತ್ರ ಚಿಕಿತ್ಸಾ ವೈದ್ಯರಿಂದ ತಪಾಸಣೆ, ಮಕ್ಕಳ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಗಂಟಲು, ಮೂಗು ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ ಹಾಗೂ ಹೋಮಿಯೋಪತಿ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು. ಅಲ್ಲದೆ ಇದರ ಜೊತೆಯಲ್ಲಿ ಇಸಿಜಿ, ಮಧುಮೇಹ ರಕ್ತ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಶ್ವಾಸಕೋಶ ಪರೀಕ್ಷೆ, ಅಲುಬು ಸಾಂದ್ರತೆಯ ಪರೀಕ್ಷೆ ಹಾಗೂ ರೋಗಿಗಳ ಆವಶ್ಯಕತೆಗಳಿಗೆ ಅನುಗುಣವಾಗಿ ಒಂದು ವಾರಗಳ ಅವಧಿಯ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ನಿರ್ಧರಿಸಿದರು.


ಚಿಕಿತ್ಸೆ ನೀಡುವ ವೈದ್ಯರು, ಸಹಕರಿಸುವ ಆಸ್ಪತ್ರೆ, ಲ್ಯಾಬ್:


ಶಿಬಿರದಲ್ಲಿ ಪುತ್ತೂರು ತಜ್ಞ ವೈದ್ಯರುಗಳು, ಸುಳ್ಯ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ತಜ್ಞ ವೈದ್ಯರುಗಳು ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ನೀಡಲಿದ್ದಾರೆ.ಮಹಾವೀರ ಆಸ್ಪತ್ರೆ ಬೊಳುವಾರು, ಸುಳ್ಯ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಧನ್ವಂತರಿ ಲ್ಯಾಬೋರೇಟರಿ ದರ್ಬೆ, ಐಡಿಯಲ್ ಲ್ಯಾಬೋರೇಟರಿ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಹಲವು ಔಷಧಿ ಕಂಪನಿಗಳು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಶಿಬಿರದಲ್ಲಿ ಸಹಕರಿಸಲಿದ್ದಾರೆ.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, 12 ಪ್ರತ್ಯೇಕ ವೈದ್ಯಕೀಯ ತಪಾಸಣೆಗಳು, ತಪಾಸಣೆ ನಡೆಸಲಿರುವ ವೈದ್ಯರು ಹಾಗೂ ಸಹಕರಿಸಲಿರುವ ವಿವಿಧ ಆಸ್ಪತ್ರೆಗಳು ಹಾಗೂ ಸಂಘ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.


ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಮಾತನಾಡಿ, ಶಿಬಿರದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಸಂಪ್ಯ ನವಚೇತನಾ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೈಥಿಲಿ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here