ಆಲಂಕಾರು: ಕಡಬ ತಾಲೂಕಿನ ಆಲಂಕಾರು ಗ್ರಾಮದ ನೈಯ್ಯಲ್ಗದಲ್ಲಿ ಪ್ರತಿಷ್ಠಿತ ಕಯ್ಯಪೆ ಕುಟುಂಬದ ವಾರ್ಷಿಕ ದೈವ ದೇವರ ಸೇವಾದಿ ಕಾರ್ಯಕ್ರಮ ನಡೆಯಿತು.
ನಾಗದೇವರ ಆಶ್ಲೇಷ ಬಲಿ, ಆಶ್ಲೇಷ ಪೂಜೆ, ನಾಗತಂಬಿಲ ಸೇವೆಗಳು ಪ್ರಾರಂಭಗೊಂಡು ಮರುದಿನ ಮಹಾಗಣಪತಿ ಪೂಜೆ, ಸತ್ಯನಾರಾಯಣ ಪೂಜೆ, ವೆಂಕಟರಮಣ ದೇವರ ಮುಡಿಪು ಪೂಜೆಯು ಕುಟುಂಬಸ್ಥರ ಕೂಡುವಿಕೆಯೊಂದಿಗೆ ನಡೆಯಿತು.
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ತೋಟಂತಿಲ ರಾಘವೇಂದ್ರ ಭಟ್‌ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸಂಜೆ ಡಾ| ಹರ್ಷಿತ್ ನೈಯ್ಯಲ್ಗರವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ, ರಾತ್ರಿ ಕುಟುಂಬದ ದೈವಗಳಾದ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ನಡೆಯಿತು. ನಂತರ ಕಾಲಾವದಿ ಪರ್ವ ತಂಬಿಲ, ಅಗೇಲು ಸೇವೆಗಳು ನಡೆಯಿತು.
ಕುಟುಂಬದ ಹಿರಿಯರಾದ ಪ್ರೆಜ್ಜ ಎಲ್ಯಣ್ಣ ಪೂಜಾರಿ, ಬಾಲಕೃಷ್ಣ ಪೂಜಾರಿ ಸಹೋದರರು ಪಲಯಮಜಲು, ಬಟ್ಲಡ್ಕ ಸಂಜೀವ ಪೂಜಾರಿ ಸಹೋದರರು, ನೈಯ್ಯಲ್ಗ ಮಾಯಿಲಪ್ಪ ಪೂಜಾರಿ, ಲಿಂಗಪ್ಪ ಪೂಜಾರಿ ಸಹೋದರರು, ವಿರಾಜಪೇಟೆ ಅಮ್ಮತ್ತಿ ಬಾಳಪ್ಪ ಪೂಜಾರಿ, ವಿನೋದ್, ಪೂವಯ್ಯ, ಸುಬ್ಬಪ್ಪ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.
ಸನ್ಮಾನ:
ಕುಟುಂಬದ ಬಟ್ಲಡ್ಕ ಸುಖೇಶ್ ಹಾಗೂ ಶಾಲಿನಿ ದಂಪತಿಯ ಪುತ್ರಿ, ವೇಣೂರು ಸರಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಸಂಪದಾ ಅವರು 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದುಕೊಂಡು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕುಟುಂಬದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿ ಕುಟುಂಬಕ್ಕೆ ಕೀರ್ತಿ ತಂದುಕೊಟ್ಟ ಸಂಪದಾರನ್ನು ಕುಟುಂಬದ ಹಿರಿಯ ಸದಸ್ಯರ ಸಮ್ಮುಖದಲ್ಲಿ ವಿರಾಜಪೇಟೆಯ ಕುಸುಮ ಟೀಚರ್‌ರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಕಯ್ಯಪ್ಪೆ ಕುಟುಂಬದ ನೈಯ್ಯಲ್ಗ ತರವಾಡು ಕುಟುಂಬಸ್ಥರು 1 ಲಕ್ಷ ರೂ. ನಗದನ್ನು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಠೇವಣಿ ಇರಿಸಿ ವಾರ್ಷಿಕವಾಗಿ ಸಿಗುವ ಬಡ್ಡಿಯನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಬಡ ವಿದ್ಯಾರ್ಥಿಗಳಿಗೆ ಸಹಾಯ ನೀಡಲು ಬಳಸಿಕೊಳ್ಳಲಾಗುವುದು ಎಂದು ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ಈ ಸಂದರ್ಭದಲ್ಲಿ ತಿಳಿಸಿದರು.