ಪುತ್ತೂರು: ಕಿರುತೆರೆಯ ಸ್ಟಾರ್ ನಿರ್ದೇಶಕ ಹಯವದನ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ದೊಡ್ಡ ಪರದೆಯ “ಎಲ್ಲೋ ಜೋಗಪ್ಪ ನಿನ್ನರಮನೆ” ಚಲನಚಿತ್ರಕ್ಕೆ ನಾಯಕಿಯಾಗಿ ಪುತ್ತೂರಿನ ಪ್ರತಿಷ್ಠಿತ ಬೆಳ್ಳಿಪ್ಪಾಡಿ ತರವಾಡಿನ ಕಲಾವಿದರ ಕುಟುಂಬದ ಕುಡಿ ವೆನ್ಯ ರೈ ಆಯ್ಕೆಯಾಗಿದ್ದಾರೆ. ಯಕ್ಷಗಾನ, ನಾಟಕ, ಧಾರವಾಹಿ ಮತ್ತು ತುಳು, ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೇತನ್ ರೈ ಮಾಣಿ ಅವರ ಪುತ್ರಿಯಾಗಿರುವ ವೆನ್ಯ ರೈ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪುತ್ತೂರಿನ ಈ ಚಂದುಳ್ಳಿ ಚೆಲುವೆ ನಟಿಸಲಿದ್ದಾರೆ.ನಿಜ ಜೀವನದಲ್ಲೂ ತನ್ನ ಮಾತಿನ ಮೂಲಕ ಎಲ್ಲರನ್ನೂ ಆಕರ್ಷಿಸುವ ವೆನ್ಯ ರೈ ಈ ಪಾತ್ರಕ್ಕೆ ಸೂಕ್ತವಾಗಿ ಹೊಂದುತ್ತಾರೆ ಎನ್ನುವ ನಿರ್ದೇಶಕ ಹಯವದನ , ಚಿತ್ರದಲ್ಲಿ ವೆನ್ಯ ರೈ ಉತ್ತರ ಭಾರತದ ಕಾಲೇಜು ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸಲಿದ್ದು , ಇದೊಂದು ಪ್ರವಾಸ ಕಥನದ ಸಿನೆಮಾವಾಗಿದೆ ಪಾತ್ರಗಳು ಕಲಾವಿದರಿಗೆ ಚಾಲೆಂಜಿಂಗ್ ಆಗಿದೆ ಎಂದು ಹೇಳಿದ್ದಾರೆ.
ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುವ ಈ ಚಿತ್ರ ಶೀಘ್ರದಲ್ಲೆ ಸೆಟ್ಟೆರಲಿದೆ. ತುಳು ಕನ್ನಡ, ತಮಿಳು, ತೆಲುಗು, ಹಿಂದಿ, ಭೋಜುಪುರಿ, ಚಿತ್ರರಂಗಕ್ಕೆ ಕೊಡುಗೆ ನೀಡಿದ ತುಳುನಾಡಿನ ಕಲಾವಿದರ ಸಾಲಿಗೆ ವೆನ್ಯ ರೈ ಕೂಡ ಸೇರ್ಪಡೆಯಾಗಲಿ ಎನ್ನುವುದು ನಮ್ಮೆಲ್ಲರ ಆಶಯ.
ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ವೆನ್ಯ ರೈ ಗೆ ತಂದೆ ಚೇತನ್ ರೈ ಅಭಿನಯದಲ್ಲಿ ಮೊದಲ ಗುರು. ಈ ನಡುವೆ ಮಲಾರ್ ಬೀಡು ಪುಷ್ಪರಾಜ್ ಶೆಟ್ಟಿ ಅವರ “ಆರಾಟ” ಚಿತ್ರದಲ್ಲೂ ವೆನ್ಯ ರೈ ನಾಯಕಿಯಾಗಿ ನಟಿಸಲಿದ್ದಾರೆ.