ಅಷ್ಟಬಂಧ ಬ್ರಹ್ಮಕಲಶೋತ್ಸವದ ಸನ್ನದ್ದತೆಯಲ್ಲಿ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನ

0

2.5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅಂತಿಮ ಸ್ಪರ್ಶ

ವರದಿ: ಉಮೇಶ್ ಮಿತ್ತಡ್ಕ
ಸಹಕಾರ: ವಸಂತ ಪುಣಚ

ಸುಮಾರು ಐದನೇ ಶತಮಾನಗಳಿಂದ ದೈವ ದೇವರುಗಳ ನೆಲೆವೀಡಾದ ತುಳುನಾಡಿನಲ್ಲಿ ದೇವಿಯ ಆರಾಧನೆ ನಡೆದುಕೊಂಡು ಬಂದಿದೆ. ಇಂತಹ ಪುಣ್ಯ, ಪವಿತ್ರ ತುಳುನಾಡಲ್ಲಿ ನೆಲೆನಿಂತ ಪರಮ ಪಾವನ, ಕಾರಣಿಕ ದೇವಿ ಕ್ಷೇತ್ರಗಳಲ್ಲಿ ಪುಣಚ ಶ್ರೀ ಕ್ಷೇತ್ರದ ಶ್ರೀ ಮಹಿಷಮರ್ದಿನಿ ದೇವಿ ಕ್ಷೇತ್ರವೂ ಒಂದಾಗಿದೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಭಕ್ತವೃಂದ ದೇವಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಸುವ ಸರ್ವ ಸನ್ನದ್ದತೆಯಲ್ಲಿ ತೊಡಗಿದೆ.

ಹೀಗೆ ಬನ್ನಿ ಶ್ರೀ ಕ್ಷೇತ್ರಕ್ಕೆ: ಪುತ್ತೂರು-ಪರಿಯಾಲ್ತಡ್ಕ-ವಿಟ್ಲ ರಸ್ತೆಯಲ್ಲಿ ಪುಣಚ ಗರಡಿಯಿಂದ ಅರ್ಧ ಕಿ.ಮೀ. ದೂರದಲ್ಲಿ ಶ್ರೀ ಮಹಿಷಮರ್ದಿನಿ ದೇವಳವಿದೆ. ವಿಶಾಲ ಹಸಿರು ತೋಟಗಳ ಮಧ್ಯೆ ಶ್ರೀ ಮಹಿಷಮರ್ದಿನಿ ಕಂಗೊಳಿಸುತ್ತಿದ್ದಾಳೆ. ತನ್ನ ವಿಶಿಷ್ಠ, ವಿಶೇಷ ಕಾರಣಿಕದಿಂದ ಇಡೀ ಜಿಲ್ಲೆಯಲ್ಲೇ ಗುರುತಿಸಲ್ಪಡುವ ಶ್ರೀ ದೇವಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಕಲ ಭಕ್ತಕೋಟಿಗೆ ಸ್ವಾಗತ ಎಂಬಂತೆ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿಗಳು ಭಾರೀ ಸಿದ್ದತೆಯಲ್ಲಿ ತೊಡಗಿದೆ.

ಇತಿಹಾಸ : ಸುಮಾರು ಒಂದು ಸಹಸ್ರ ವರ್ಷಗಳ ದೀರ್ಘ ಇತಿಹಾಸ ಈ ದೇವಾಲಯಕ್ಕಿದೆ. ವಿಟ್ಲ ಸೀಮೆಯ ವಿಟ್ಲ ಅರಸರ ಆಡಳಿತಕ್ಕೆ ಒಳಪಟ್ಟ 16 ದೇವಸ್ಥಾನಗಳಲ್ಲಿ ಇದೂ ಒಂದು ಆಗಿರುವುದರಿಂದ ಇಂದಿಗೂ ಈ ದೇವಸ್ಥಾನದಲ್ಲಿ ವಿಟ್ಲ ಅರಸರಿಗೆ ವಿಶೇಷ ಗೌರವ ಸ್ಥಾನಮಾನವಿದೆ. ಒಂದು ಕಾಲದಲ್ಲಿ ಸಾಕಷ್ಟು ಭೂಮಿಯನ್ನು ಹೊಂದಿದ್ದ ಈ ದೇವಳವು ಕಾಲ ಕ್ರಮೇಣ ಭೂಮಸೂದೆ ಕಾನೂನಿನಿಂದಾಗಿ ಎಲ್ಲಾ ಭೂಮಿಯನ್ನು ಕಳೆದುಕೊಳ್ಳುವಂತಾಯಿತು. ಕೇವಲ ಮುಳಿ ಹುಲ್ಲಿನ ಮಾಡು ಹಾಗೂ ಸುತ್ತು ಪೌಳಿಗಳು ಇದ್ದ ಶ್ರೀ ದೇವಳ ಇದೀಗ ಸಂಪೂರ್ಣ ಅಭಿವೃದ್ಧಿ ಹೊಂದಿದೆ.

ದೇವಿ ದೇವಾಲಯ : ಇಲ್ಲಿರುವ ಮಹಿಷ ಮರ್ದಿನಿಯ ವಿಗ್ರಹ ಸುಮಾರು ಕ್ರಿ.ಶ. 900ರ ಕಾಲದ್ದೆಂದು ಸಂಶೋಧಕ ಗುರುರಾಜ ಭಟ್ ಅಭಿಪ್ರಾಯಪಡುತ್ತಾರೆ. ದ್ವಿಬಾಹು ಹೊಂದಿದ್ದು ಮಹಿಷಾಸುರನನ್ನು ವದಿಸುವ ಶೈಲಿಯಲ್ಲಿದೆ. ಗರ್ಭಗುಡಿಯ ಎದುರುಗಡೆ ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡ ಮುಖ ಮಂಟಪವಿದೆ. ಗಣಪತಿ ಗುಡಿ, ಶಾಸ್ತಾವು ಗುಡಿ, ಬಲಭಾಗದಲ್ಲಿ ಪಾಷಾಣಮೂರ್ತಿ ದೈವಸ್ಥಾನವಿದೆ. ವ್ಯಾಘ್ರ ಚಾಮುಂಡಿ ನೆತ್ತರ್ ಕಣ್ಣ ದೈವಗಳು ದೇವಿಯ ರಕ್ಷಣೆಗಾಗಿ ಇಲ್ಲಿ ನಿಂತಿವೆ. ದೇವಳದ ಎಡಭಾಗದಲ್ಲಿ ನಾಗ ಬ್ರಹ್ಮರ ನಾಗಬನವಿದೆ. ಎದುರುಗದ್ದೆಯಲ್ಲಿ ಬೆಡಿ ಉತ್ಸವ ದಂದು ದೇವಿ ಕುಳಿತುಕೊಳ್ಳಲಿರುವ ಬೆಡಿಕಟ್ಟೆ ಅಲ್ಲದೆ ಈಶಾನ್ಯ ಭಾಗದಲ್ಲಿ ವಸಂತ ಮಂಟಪವಿರುವುದು ಇಲ್ಲಿನ ವೈಶಿಷ್ಠ್ಯವಾಗಿದೆ.

ಹುತ್ತದಲ್ಲಿದ್ದ ಶ್ರೀ ಮಹಿಷಮರ್ದಿನಿ: ಇಲ್ಲಿರುವ ಶ್ರೀ ಮಹಿಷಮರ್ದಿನಿ ದೇವಿ ಸಿಕ್ಕಿದ್ದು ಓರ್ವ ದಲಿತ ಮಹಿಳೆಗೆ ಅನ್ನೋದು ವಿಶೇಷ. ದೇವಾಲಯದ ಎದುರಿನ ಗುಡ್ಡದಲ್ಲಿ ಆಕೆ ಸೊಪ್ಪು ಕಡಿಯುತ್ತಿದ್ದ ವೇಳೆ ಕತ್ತಿ ಹುತ್ತವೊಂದಕ್ಕೆ ತಾಗಿ ಬಿತ್ತು. ಆ ಕೂಡಲೇ ಹುತ್ತದಿಂದ ಚಿಮ್ಮಿದ್ದು ರಕ್ತ. ಗಾಬರಿಗೊಂಡ ಮಹಿಳೆ ಏನೆಂದು ನೋಡಿದರೆ ಹುತ್ತದಲ್ಲಿದ್ದ ಶ್ರೀ ಮಹಿಷಮರ್ದಿನಿ ದೇವಿಯ ವಿಗ್ರಹದ ಹಣೆಯ ಭಾಗಕ್ಕೆ ಕತ್ತಿ ತಾಗಿ ಹೋಗಿತ್ತು. ಈ ವಿಷಯವನ್ನು ತಿಳಿದ ಊರ ಜನತೆ ಈ ವಿಗ್ರಹವನ್ನು ವಿಟ್ಲ ಅರಸರ ವಶಕ್ಕೆ ಒಪ್ಪಿಸಿ ಬಿಟ್ಟರು. ಇದೇ ಆಧಾರದ ಮೇಲೆ ಇಲ್ಲಿ ಶ್ರೀ ದೇಗುಲವನ್ನು ನಿರ್ಮಿಸಿದರು ಎಂಬ ಪ್ರತೀತಿ ಇದೆ. ಈ ಕಥೆಯೂ ನಿಜ ಹೌದು ಎನ್ನುವುದಕ್ಕೆ ಈಗಲೂ ಇಲ್ಲಿರುವ ಶ್ರೀ ಮಹಿಷ ಮರ್ದಿನಿಯ ವಿಗ್ರಹದ ಹಣೆಯ ಭಾಗದಲ್ಲಿ ಕತ್ತಿಯಿಂದ ಉಂಟಾದ ಗಾಯದ ಗುರುತಿದೆ. ದೇವಿ ಸಿಕ್ಕ ಗುಡ್ಡ “ದೇವರ ಗುಡ್ಡ”ವಾಗಿ ಒಂದು ಆಕರ್ಷಕ ಮಂಟಪ ಕೂಡ ಇಲ್ಲಿ ನಿರ್ಮಾಣಗೊಂಡಿದೆ.

ಎಮ್ಮೆ ಕೋಣಗಳಿಲ್ಲದ ಗ್ರಾಮ: ಮಹಿಷ ಮರ್ದಿನಿಯ ಕಾರಣಿಕ ಪ್ರತೀಕವಾಗಿ ಇಲ್ಲೊಂದು ವಿಶೇಷತೆ ನಡೆದಿದೆ. ಈ ದೇವಾಲಯದ ಆಸು ಪಾಸಿನಲ್ಲಿ ಎಮ್ಮೆ, ಕೋಣಗಳನ್ನು ಸಾಕುವುದು ಸಾಧ್ಯವಿಲ್ಲ. ಗದ್ದೆ ಉಳುವ ಪದ್ಧತಿಯೂ ಇಲ್ಲ. ಇದಕ್ಕೊಂದು ಕಾರಣವಿದೆ. ಇಲ್ಲಿಯ ಮಹಿಷ ಮರ್ದಿನಿಯ ವಿಗ್ರಹ ಮಹಿಷ ನನ್ನು ವಧಿಸುವ ಶೈಲಿಯಲ್ಲಿದೆ. ಮಹಿಷನ ವಾಹನ ಕೋಣ. ಹಿಂದೊಮ್ಮೆ ಉಳುಮೆಗೆಂದು ಗದ್ದೆಯಲ್ಲಿ ನಿಲ್ಲಿಸಿದ್ದ ಕೋಣಗಳು ಮಾಯವಾಗಿ ಅಲ್ಲೆರಡು ಕಲ್ಲುಗಳು ಉದ್ಭವವಾಗಿದ್ದವು. ಉಳುಮೆಯ ಕೋಣಗಳೇ ಕಲ್ಲಾಗಿ ಹೋದವು ಎಂಬ ದಂತ ಕಥೆ ಇದೆ. ಈಗಲೂ ಆ ಕಲ್ಲುಗಳು ಗೋಚರಿಸುತ್ತಿವೆ.

ಪುಣಚ ಹೆಸರಿನ ವಿಶೇಷತೆ: ‘ಪುಣಚ’ ಎಂಬ ಹೆಸರಿನ ಮೂಲ ಮತ್ತು ದೇವಿ ದೊರಕಿರುವ ಸ್ಥಳಕ್ಕೂ ಸಾಮ್ಯತೆ ಇದೆ ‘ಪುಂಚ’ ಪುಣಚವಾಯಿತು. ತುಳುವಿನಲ್ಲಿ ‘ಪುಂಚ’ ಎಂದರೆ ಹುತ್ತ ಎಂದರ್ಥ. ಇಲ್ಲಿ ಮಹಿಳೆಗೆ ದೇವಿ ಸಿಕ್ಕಿದ್ದು ಕೂಡ ಪುಂಚ (ಹುತ್ತ) ದಲ್ಲಿ ಎನ್ನುವುದನ್ನು ಗಮನಿಸಬೇಕು. ಮೊದಲಿಗೆ ಪುಂಚ ಎಂದಿದ್ದು ಕ್ರಮೇಣ ಈಗ ಪುಣಚ ಆಗಿದೆ ಎಂದು ಪ್ರತೀತಿ.

1973 ರಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡಿದ್ದವು. ಅತೀ ಸಣ್ಣದಾದ ಜಾಗದಲ್ಲಿದ್ದ ದೇಗುಲ ಕಾಲಕ್ರಮೇಣ ಹತ್ತಿರದ ಜಾಗ ಖರೀದಿಸಿ ವಿಸ್ತಾರವಾಗುತ್ತಾ ಬಂತು. ಒಂದು ಕಾಲದಲ್ಲಿ ಇಲ್ಲಿ ವರ್ಷದಲ್ಲಿ ಅನೇಕ ಯಕ್ಷಗಾನ ಮೇಳಗಳಿಂದ ದೇವಳದ ಸಹಾಯಾರ್ಥ ಯಕ್ಷಗಾನ ನಡೆಯುತ್ತಿತ್ತು. ಅಂದಿನ ಅರ್ಚಕರಾದ ವೆಂಕಟ್ರಮಣ ಬನ್ನಿಂತಾಯರ ಮುಂದಾಳತ್ವದಲ್ಲಿ ಪೂಜೆ, ಭಜನೆ ಇತ್ಯಾದಿ ಧಾರ್ಮಿಕ ಕಾರ್ಯಗಳು ನಿರಂತರ ನಡೆಯುತ್ತಿತ್ತು. 1985 ರಲ್ಲಿ ಪ್ರಥಮ ಬ್ರಹ್ಮಕಲಶೋತ್ಸವ ನಡೆದಿತ್ತು. ಈಚೆಗೆ 14 ವರ್ಷಗಳ ಹಿಂದೆ ಅಂದರೆ 2008 ರಲ್ಲಿ ನವೀಕರಣ ಪುನಃಪ್ರತಿಷ್ಟಾಷ್ಟಬಂಧ ಬ್ರಹ್ಮಕಲಶೋತ್ಸವ ವೈಭವದಿಂದ ಜರಗಿತ್ತು. ಆಗ ಹೊಸ ಛಾವಣಿ, ತಾಮ್ರದ ಹೊದಿಕೆ, ಸುತ್ತು ಪೌಳಿ ನಿರ್ಮಾಣಗೊಂಡಿದ್ದವು. 2009 ರಿಂದ ಎಸ್ ಆರ್ ರಂಗಮೂರ್ತಿಯವರು ಆಡಳಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2009 ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಭೇಟಿ ಮಾಡಿ ಸುಮಾರು 2.45 ಕೋಟಿ ರೂ. ವೆಚ್ಚದ ನೂತನ ಸಭಾಭವನ ‘ದೇವಿ ಭವನ’ಕ್ಕೆ ಶಿಲಾನ್ಯಾಸಗೈದಿದ್ದರು. ಸರಕಾರದಿಂದ ವಿಶೇಷ 1.25ಕೋಟಿ ರೂ. ಅನುದಾನ ಬಿಡುಗಡೆಯಾಗಿ 2011 ರಲ್ಲಿ ‘ದೇವಿ ಭವನ’ ಲೋಕಾರ್ಪಣೆಗೊಂಡು ಸುಸಜ್ಜಿತ ಕಲ್ಯಾಣ ಮಂಟಪ ಸದ್ಬಳಕೆಯಾಗುತ್ತಿದೆ.

12 ವರ್ಷಗಳ ನಂತರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಬೇಕಿತ್ತು. ಆದರೆ ಕೊರೊನಾ ಹೊಡೆತದಿಂದ ಎರಡು ವರ್ಷಗಳ ಕಾಲ ಹಿನ್ನಡೆಯಾಗಿ ಇದೀಗ 14 ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದೆ.

ಬ್ರಹ್ಮಕಲಶೋತ್ಸವದ ಸವಿನೆನಪಿಗೆ ಮತ್ತು ಅಭಿವೃದ್ಧಿಶೀಲ ಪ್ರಕ್ರಿಯೆಗೆ ಒತ್ತು ಕೊಟ್ಟಿರುವ ಸಮಿತಿಯು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಒಂದು ವರ್ಷದ ಹಿಂದೆ ಸಂಕಲ್ಪ ಮಾಡಿ ಅನುಜ್ಞಾ ಕಲಶ ನಡೆಸಲಾಗಿತ್ತು. ಗರ್ಭಗುಡಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಒಳಾಂಗಣದಲ್ಲಿ ತಾಮ್ರದ ಹೊಸ ಹೊದಿಕೆ, ಸುತ್ತು ಪೌಳಿಗೆ ಗ್ರಾನೈಟ್ ಅಳವಡಿಕೆ, ಶಿಲಾಕಂಬಗಳು, ಹಂಚಿನ ಮೇಲ್ಛಾವಣಿ, ಹೊರಾಂಗಣದ ನಾಲ್ಕು ಸುತ್ತುಗಳಲ್ಲಿ ರೂ. 80 ಲಕ್ಷ ವೆಚ್ಚದಲ್ಲಿ ವಿಶಾಲ ಶೀಟ್ ಛಾವಣಿ, ವಸಂತಮಂಟಪ, ದೇವಳದ ಮುಂಭಾಗದಲ್ಲಿರುವ ಹೊಳೆಗೆ ತಡೆಗೋಡೆ ಮತ್ತು ಮುಚ್ಚಿಗೆ ಹಾಕಿ ಅಂಗಣ ವಿಸ್ತಾರ ಮಾಡಲಾಗಿದೆ. ಜಾತ್ರೋತ್ಸವದ ಸಂದರ್ಭದಲ್ಲಿ ಇಕ್ಕಟ್ಟಿನ ಸ್ಥಳ ಕಾಣುತ್ತಿತ್ತು. ಈಗ ದೇವರ ಮುಂಭಾಗದಲ್ಲಿ ಅತೀ ವಿಶಾಲ ಜಾಗ ನಿರ್ಮಾಣವಾಗಿದೆ. ಸುಮಾರು 10 ಸಾವಿರ ಚ.ಅಡಿಯಷ್ಟು ಜಾಗದಲ್ಲಿ ಇಂಟರ್‌ಲಾಕ್ ಅಳವಡಿಕೆ, 75 ಮೀ. ನಷ್ಟು ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ಒಟ್ಟು ಅಂದಾಜು 2.5 ರಿಂದ 2.45 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

80 ಲಕ್ಷ ರೂ. ವೆಚ್ಚದಲ್ಲಿ ಅನ್ನಪೂರ್ಣ ಅನ್ನಛತ್ರ: ದೇವಳದ ಇತರ ಕಾರ್ಯಕ್ರಮಗಳ ದಿನ ಅನ್ನದಾನಕ್ಕಾಗಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಅನ್ನಛತ್ರ ನಿರ್ಮಾಣ ಕಾರ್ಯಕ್ಕೆ ಇಳಿಯಲಾಗಿತ್ತು. ದೇವಿಯ ಅನುಗ್ರಹ ಎಂಬಂತೆ ಬ್ರಹ್ಮಕಲಶೋತ್ಸವದ ವೇಳೆಗೆ ಅನ್ನಛತ್ರದ ಕಾರ್ಯವೂ ಪೂರ್ಣಗೊಂಡು ದೇವಿಗೆ ಅರ್ಪಣೆಯಾಗಲು ಸಿದ್ದವಾಗಿದೆ.

ಜಾಗ ಖರೀದಿ: ದೇವಳದ ಮುಂಭಾಗದಲ್ಲಿ ವಿಶಾಲ ಸ್ಥಳಾವಕಾಶಕ್ಕಾಗಿ ಸ್ಥಳೀಯ ವ್ಯಕ್ತಿಯೋರ್ವರಿಂದ ಜಮೀನು ಖರೀದಿಸಿ ವಾಹನ ಪಾರ್ಕಿಂಗ್ ಮತ್ತಿತರ ವ್ಯವಸ್ಥೆಗಾಗಿ ಜಾಗ ವಿಸ್ತರಿಸಲಾಗಿದೆ.

ನಿರಂತರ ಶ್ರಮಸೇವೆ: ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡ ಮೇಲೆ ಇಲ್ಲಿ ಊರ ಪರವೂರ ಭಕ್ತಾಭಿಮಾನಿಗಳಿಂದ ನಿರಂತರ ಶ್ರಮಸೇವೆ ನಡೆಯುತ್ತಿದೆ. ಹೊರ ಗ್ರಾಮದ ವಿವಿಧ ಸಂಘ ಸಂಸ್ಥೆಯವರೂ ಶ್ರಮದಾನದಲ್ಲಿ ಭಾಗವಹಿಸುತ್ತಿದ್ದಾರೆ.

ಒಂದೇ ದಿನ 1500 ಮನೆಗಳಿಗೆ ಆಮಂತ್ರಣ ಪತ್ರ ವಿತರಣೆ: ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರವನ್ನು ಗ್ರಾಮದಲ್ಲಿ ವಿತರಣೆ ಮಾಡಿರುವುದು ಬಹಳ ವಿಶೇಷವಾಗಿದೆ. ಸುಮಾರು 1500 ಮನೆಗಳನ್ನು ಒಂದೇ ದಿನದಲ್ಲಿ ಸಂಪರ್ಕಿಸಿ ಆಮಂತ್ರಣ ಪತ್ರ ನೀಡಲಾಗಿದೆ.

‘ತಟ್ಟಿ’ಯ ಚಪ್ಪರ: ಬ್ರಹ್ಮಕಲಶೋತ್ಸವದ ವ್ಯವಸ್ಥೆಯಲ್ಲಿ ವಿಶಾಲ ಚಪ್ಪರ ಆಕರ್ಷಣೆಯಾಗಿರಲಿದೆ. ಸುಮಾರು 6000ಚ.ಅಡಿ ವಿಸ್ತೀರ್ಣದಲ್ಲಿ ‘ಮಡಲಿನ ತಟ್ಟಿ’ (ತೆಂಗಿನ ಗರಿ) ಯ ಚಪ್ಪರ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ. ಗ್ರಾಮದ ಪ್ರತೀ ಮನೆಗಳಲ್ಲಿ ತೆಂಗಿನ ಗರಿಯ ತಟ್ಟಿ ತಯಾರಾಗುತ್ತಿವೆ.

ಒಟ್ಟಿನಲ್ಲಿ ಪೇಟೆ ಪಟ್ಟಣದಿಂದ ದೂರದಲ್ಲಿದ್ದರೂ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಪರವೂರಿನ ಭಗದ್ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಒಂದು ವಾರ ಇರುವಾಗಲೇ ಸರ್ವ ಸಿದ್ದತಾ ಪ್ರಕ್ರಿಯೆಗಳು ವೇಗೋತ್ಕರ್ಷಗೊಂಡಿವೆ.

ಬ್ರಹ್ಮಕಲಶೋತ್ಸವ-ಅಭೂತಪೂರ್ವ ಸಿದ್ದತೆ: ಎಸ್.ಆರ್. ರಂಗಮೂರ್ತಿ

ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ನಡೆದಿದೆ. ಒಟ್ಟು 6ದಿನಗಳ ಬ್ರಹ್ಮಕಲಶೋತ್ಸವದ ವಿವಿಧ ಕಾರ್ಯಕ್ರಮಗಳು ಮತ್ತು ಜಾತ್ರೋತ್ಸವಕ್ಕೆ ಸುಮಾರು 35 ಸಾವಿರದಿಂದ 40 ಸಾವಿರ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. ಅದಕ್ಕಾಗಿ ವ್ಯವಸ್ಥೆಗಳ ಜೋಡಣೆಯಾಗುತ್ತಿದೆ. 24 ಉಪಸಮಿತಿಗಳನ್ನು ರಚಿಸಿಕೊಂಡು ವಾರ್ಡ್‌ವಾರು ಮನೆಗಳ ಸಂಪರ್ಕ ನಡೆದಿದೆ. ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಜರಗಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧಿಪತಿಗಳು ಆಶೀರ್ವಚನ ನೀಡಲಿದ್ದಾರೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಸ್ವಾಗತ, ಅಲಂಕಾರ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಜೋಡಣೆಗೆ ಉಪಸಮಿತಿಗಳ ನಿರಂತರ ಸಭೆ ನಡೆಸುತ್ತಿದ್ದೇವೆ’ ಎಂದು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಹೇಳಿದರು.

ಮಾ. 8 ರಿಂದ ಬ್ರಹ್ಮಕಲಶೋತ್ಸವ

ಕ್ಷೇತ್ರದಲ್ಲಿ ಮಾ. 8 ರಿಂದ 13 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಉತ್ಸವಗಳೊಂದಿಗೆ
ಮಾ. 13 ರಂದು ದೇವಿ ದುರ್ಗೆಗೆ ದ್ರವ್ಯ ಕಲಶಾಭಿಷೇಕ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಂಭ್ರಮದ ಸ್ವಾಗತಕ್ಕಾಗಿ ಊರಿಗೆ ಊರೇ ಸಿದ್ದಗೊಳ್ಳುತ್ತಿದೆ. ರಸ್ತೆಗಳಲ್ಲಿ ಸ್ವಾಗತ ದ್ವಾರಗಳು, ಕೇಸರಿ ತೋರಣಗಳು ಬ್ರಹ್ಮಕಲಶೋತ್ಸವದ ಸಡಗರದ ವಾತಾವರಣ ತೋರುತ್ತಿದೆ.

LEAVE A REPLY

Please enter your comment!
Please enter your name here