ಸದಸ್ಯರಾದ ಕೃಷಿಕರಿಗೆ ಮಾರಾಟ ಖರೀದಿಯಲ್ಲಿ ಗ್ರಾಹಕರ ನೆಲೆಯಲ್ಲಿ ರಕ್ಷಣೆ
ಸುಸಜ್ಜಿತ ಆಸ್ಪತ್ರೆಯಂತೆ ಒಂದೇ ಸೂರಿನಡಿಯಲ್ಲಿ ಕೃಷಿಕರಿಗೆ ಎಲ್ಲಾ ಸೇವೆಗಳು ದೊರಕುವ ಯೋಜನೆ
ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಸುದ್ದಿ ಕೃಷಿ ಕೇಂದ್ರ ಕೆಲಸ ಪ್ರಾರಂಭಿಸಿದೆ. ಪತ್ರಿಕೆ, ಚಾನೆಲ್ಗಳಲ್ಲಿ ಕೃಷಿಕರ ಸಾಧನೆಗಳ, ಉತ್ಪನ್ನಗಳ ಪರಿಚಯ ಬರುತ್ತಿದೆ. ಕೃಷಿಕರ ಮನೆಬಾಗಿಲಿಗೆ ಎಲ್ಲಾ ಮಾಹಿತಿಯನ್ನು ಸೇವೆಯನ್ನು ಒದಗಿಸುವ, ಅವರಿಗೆ ಎಲ್ಲ ಮಾಹಿತಿ ದೊರಕುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅದರ ಭಾಗವಾಗಿ ಸುಸಜ್ಜಿತ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗದ ವೈದ್ಯಕೀಯ ತಜ್ಞರು ದೊರಕಿ ಎಲ್ಲಾ ಸೇವೆಗಳು ಲಭ್ಯವಾಗುವುದರಿಂದ ಆರೋಗ್ಯ ರಕ್ಷಣೆ ಸುಗಮವಾಗುವಂತೆ ಕೃಷಿಕರಿಗೂ ಒಂದೇ ಸೂರಿನಡಿಯಲ್ಲಿ ಎಲ್ಲಾ ತಜ್ಞರು ಮಾಹಿತಿ, ತರಬೇತಿ, ಸೇವೆಗಳು ದೊರಕುವಂತೆ ಮಾಡುವ ಯೋಜನೆಗೆ ಕೈಹಾಕಿದ್ದೇವೆ. ಅಲ್ಲಿಯೇ ಅವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಮಾರಾಟ ಮಾಡುವ ಸೇವೆಗಳನ್ನು ಪಡೆಯುವ, ನೇರವಾಗಿ ಗ್ರಾಹಕರನ್ನು ತಲುಪಿ ಉತ್ತಮ ದರ ಪಡೆಯುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ.
ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ರಕ್ಷಣೆ ನೀಡುವ ಘೋಷಣೆಯ ಅಂಗವಾಗಿ ಕೃಷಿಕರನ್ನು ಸುದ್ದಿ ಕೇಂದ್ರದ ಸದಸ್ಯರನ್ನಾಗಿಸಿ ಅವರು ಖರೀದಿಸುವ, ಪಡೆಯುವ ಯಾವುದೇ ಸೇವೆಗೆ ಗ್ರಾಹಕರ ನೆಲೆಯಲ್ಲಿ ಅನ್ಯಾಯವಾಗದಂತೆ ರಕ್ಷಣೆ ನೀಡುವ ಕೆಲಸವನ್ನು ಮಾಡಲಿದ್ದೇವೆ.
ಗ್ರಾಮ ಗ್ರಾಮಗಳಲ್ಲಿ ಈ ಯೋಜನೆ ಕೃಷಿಕರಿಗೆ ತಲುಪಲು ಅಲ್ಲಿಯ ಕೃಷಿ ಕೇಂದ್ರಗಳ, ಸೊಸೈಟಿಗಳ, ಪಂಚಾಯತ್ಗಳ ಸಹಕಾರ ಪಡೆಯಲು ಉದ್ಧೇಶಿಸಿದ್ದೇವೆ. ಆ ಮೂಲಕ ಕೃಷಿಕರಿಗೆ ಉಚಿತ ಮಾಹಿತಿ, ತರಬೇತಿ, ಮಾರುಕಟ್ಟೆ ವ್ಯವಸ್ಥೆಗಳನ್ನು ಅಲ್ಲಲ್ಲಿಯೇ ರೂಪಿಸುವ ವ್ಯವಸ್ಥೆ ಮಾಡಬೇಕೆಂದಿದ್ದೇವೆ. ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತೆ ಮಾಡುವ ಗ್ರಾಹಕರ ನೆಲೆಯಲ್ಲಿ ಕೃಷಿಕರಿಗೆ ರಕ್ಷಣೆ ನೀಡುವ ಕೆಲಸ ನಡೆಯಲಿದೆ. ಅದಕ್ಕಾಗಿ ಪ್ರತಿ ಗ್ರಾಮದಲ್ಲಿ ಪ್ರತಿನಿಧಿಗಳನ್ನು, ಕೃಷಿ ಸೇವಾ ಕೇಂದ್ರಗಳನ್ನು ತೆರೆಯಬೇಕೆಂದಿದ್ದೇವೆ. ಜನರು ಮುಂದೆ ಬಂದು ಈ ಯೋಜನೆಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.