ಕೌಕ್ರಾಡಿ: ತಾತ್ಕಾಲಿಕ ಶೆಡ್‌ಗೆ ಬೆಂಕಿ ಹಚ್ಚಿ ಧ್ವಂಸ, ಜೀವಬೆದರಿಕೆ ಆರೋಪ-ಕೇಸು ದಾಖಲು

0

ನೆಲ್ಯಾಡಿ: ತಾತ್ಕಾಲಿಕ ಶೆಡ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವುದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಹೊಸಮಜಲು ನಿವಾಸಿ ಯೂಸುಫ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿಯಾಗಿರುವ ಯೂಸುಫ್ (39ವ.) ಎಂಬವರು ಪೊಲೀಸರಿಗೆ ದೂರು ನೀಡಿದವರು. ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ತಂದೆ ಕಾಲದಿಂದ ಅನುಭವಿಸಿಕೊಂಡು ಸ್ವಾಧೀನವಿದ್ದ ಜಮೀನಿನಲ್ಲಿ ಯೂಸುಫ್, ಅವರ ತಮ್ಮ ಹಾರೀಸ್ ಮತ್ತು ಅಣ್ಣಂದಿರು ಸೇರಿ 3 ತಿಂಗಳ ಹಿಂದೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಹಾರೀಸ್ ಎಂಬವರು ಆ ಶೆಡ್‌ನಲ್ಲಿ ವಾಸ್ತವ್ಯವಿದ್ದರು. ‌

ಹೀಗಿರುವಾಗ ಮಾ.2ರಂದು ಸಂಜೆ ಈ ಶೆಡ್ ಅನ್ನು ಧ್ವಂಸ ಮಾಡುವ ಉದ್ದೇಶದಿಂದ ಸಿದ್ದೀಕ್, ಅಬ್ದುಲ್ ಗಪೂರ್, ಸನಾವುದ್ದೀನ್, ಇಲ್ಯಾಸ್ ಪಡುಬೆಟ್ಟು, ರಫೀಕ್ ಯಾನೆ ಪುತ್ತ, ಶಾಂತಿಬೆಟ್ಟು ಅಬ್ದುಲ್ಲಾ ಎಂಬವರು ಮಾರಕಾಯುಧಗಳೊಂದಿಗೆ ಬಂದು ಶೆಡ್‌ನಲ್ಲಿದ್ದ ಹಾರೀಸ್‌ರನ್ನು ಹೊರ ಎಳೆದು ಹಾಕಿ ಕಬ್ಬಿಣದ ರಾಡ್‌ನಿಂದ ಹೊಡೆದು ಗಾಯಗೊಳಿಸಿದ್ದಾರೆ. ಈ ವೇಳೆ ಬಿಡಿಸಲು ಬಂದ ಯೂಸುಫ್‌ರನ್ನು ಹಿಡಿದು ಸನಾವುದ್ದೀನ್, ಅಬ್ದುಲ್ ಗಪೂರ್ ಹಾಗೂ ಸಿದ್ದೀಕ್‌ರವರು ರಾಡ್‌ನಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ಇನ್ನೋರ್ವ ಆರೋಪಿ ರಫಿಕ್ ಯಾನೆ ಪುತ್ತ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಜೀವ ಸಹಿತ ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿ, ಅವರು ತಂದಿದ್ದ ಪೆಟ್ರೋಲ್ ಅನ್ನು ಶೆಡ್‌ಗೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯೂಸುಫ್‌ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 143,147,148,324,504,506,436 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here