ಪುತ್ತೂರು: ಶತಮಾನಗಳ ಬಳಿಕ ಆಲಡ್ಕದಲ್ಲಿ ನೆಲೆಯಾಗಿರುವ ಶ್ರೀ ಸದಾಶಿವ ದೇವರಿಗೆ ಪ್ರಥಮ ಜಾತ್ರೋತ್ಸವ ಹಾಗೂ ದೈವಗಳಿಗೆ ನೇಮೋತ್ಸವ ಮಾ.03 ರಂದು ಜರಗಿತು. ಸಂಪೂರ್ಣ ಜೀರ್ಣೋದ್ಧಾರಗೊಂಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪಡೆದ ಬಳಿಕ ಪ್ರಥಮ ಜಾತ್ರೋತ್ಸವ ನಡೆದಿದ್ದು ಊರಪರವೂರ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು.
ಮಾ.03 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಪಂಚವಿಂಶತಿ ಕಲಶಪೂಜೆ ನಡೆದು ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಕ್ಷೇತ್ರದ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದ ಬಳಿಕ ಶ್ರೀ ಕ್ಷೇತ್ರದ ದೈವಗಳಿಗೆ ವೈಭವದ ನೇಮೋತ್ಸವ ನಡೆಯಿತು.
ಕೆಮ್ಮಿಂಜೆ ನಾಗೇಶ್ ತಂತ್ರಿಗಳು ಹಾಗೂ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಶ್ರೀದೇವರ ಎಲ್ಲಾ ಕಾರ್ಯಕ್ರಮಗಳು ಜರಗಿತು. ಶ್ರೀ ಸದಾಶಿವ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಎನ್ ಕೆ ನಕ್ಷತ್ರಿತ್ತಾಯರವರು ಪೂಜಾ ವಿಧಿವಿಧಾನಗಳು ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅರುಣ್ಕುಮಾರ್ ಆಳ್ವ ಬೋಳೋಡಿಗುತ್ತು, ಉತ್ಸವ ಸಮಿತಿ ಅಧ್ಯಕ್ಷರಾದ ರಾಘವ ಗೌಡ ಕೆರೆಮೂಲೆ, ಬ್ರಹ್ಮಕಲಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಜೀಣೋದ್ದಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿ ಸೇರಿದಂತೆ ದೇವಸ್ಥಾನದ ವಿವಿಧ ಸಮಿತಿಯ ಪದಾಧಿಕಾರಿಗಳು, ಶ್ರೀ ಸದಾಶಿವ ಭಜನಾ ಮಂಡಳಿಯ ಸದಸ್ಯರುಗಳು, ಭಕ್ತಾದಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಮನರಂಜಿಸಿದ ತುಳು ನಾಟಕ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.02ರಂದು ರಾತ್ರಿ ‘ಕಲ್ಜಿಗದ ಕಾಳಿ ಮಂತ್ರದೇವತೆ’ ಎಂಬ ತುಳು ನಾಟಕ ನಡೆಯಿತು. ನೂರಾರು ಮಂದಿ ನಾಟಕ ವೀಕ್ಷಿಸಿದರು. ಎರಡೂ ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸುಮಾರು 5000 ಮಂದಿ ಅನ್ನದಾನದಲ್ಲಿ ಭಾಗವಹಿಸಿದರು. ಶತಮಾನಗಳ ಬಳಿಕ ನಡೆದ ಮೊದಲ ಜಾತ್ರೆಯು ಊರಿಗೆ ಹಬ್ಬದ ವಾತಾವರಣವನ್ನು ತಂದಿತ್ತು.
ಶತಮಾನಗಳ ಬಳಿಕ ನಡೆದ ಮೊದಲ ಜಾತ್ರೋತ್ಸವ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಯಸಸ್ವಿಯಾಗಿ ನಡೆದಿದೆ. ಕೆದಂಬಾಡಿ ಹಾಗೂ ಮುಂಡೂರು ಗ್ರಾಮದ ಭಕ್ತರು ಮತ್ತು ಪರವೂರಿನ ಭಕ್ತರ ಸಹಕಾರದಿಂದ ಜಾತ್ರೆ ಮತ್ತು ನೇಮೋತ್ಸವ ಸೇರಿದಂತೆ ದೈವೀ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಶತಮಾನಗಳ ಬಳಿಕ ಜಾತ್ರೋತ್ಸವ ನಡೆದಿದೆ ಎಂಬ ಸಂತೋಷ ಎಲ್ಲಾ ಭಕ್ತರಲ್ಲಿದೆ. ಊರಿಗೆ ಊರೇ ಜಾತ್ರೋತ್ಸವದಲ್ಲಿ ಸೇರಿತ್ತು , ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು . ಶ್ರೀ ಸದಾಶಿವ ದೇವರ ಮೇಲಿನ ಭಕ್ತಿ ಈ ಎಲ್ಲಾ ಕಾರ್ಯಕ್ರಮದ ಮೂಲಕ ಇನ್ನಷ್ಟು ಹೆಚ್ಚಾಗಲಿ, ಮುಂದೆ ಶ್ರೀ ದೇವಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರವನ್ನು ಕೋರುತ್ತಿದ್ದೇನೆ.
ಅರುಣ್ಕುಮಾರ್ ಆಳ್ವ ಬೋಳೋಡಿ ಗುತ್ತು
ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಸರ್ವ ಭಕ್ತರ ಭಕ್ತಿ ಸಮರ್ಪಣೆ ಕಾರ್ಯಚಟುವಟಿಕೆ ಅವಿರತ ಶ್ರಮದ ಫಲವಾಗಿ ಬಹಳಷ್ಟು ವಿಜೃಂಭಣೆಯಿಂದ ಯಶಸ್ವಿಯಾಗಿ ದೈವ ಸಂಕಲ್ಪದಂತೆ “ಪ್ರಥಮ ” ಜಾತ್ರೋತ್ಸವ ನಡೆಯಿತು. ಈ ಎಲ್ಲಾ ಯಶಸ್ಸಿನ ಹಿಂದೆ ದೇವ ದುರ್ಲಭ, ಕರಸೇವಕರು, ಸೇವಾರೂಪದಲ್ಲಿ ನೀಡಿದ ದಾನಿಗಳು , ದೇವಸ್ಥಾನಕ್ಕೆ ಸಂಬಂಧಪಟ್ಟ ಮನೆಯವರು, ಕಾಣಿಕೆ ನೀಡಿದ ಭಕ್ತರಿಗೆ, ತಂತ್ರಿ ವರ್ಗದವರಿಗೆ, ಅರ್ಚಕ ಹಾಗೂ ಅರ್ಚಕ ವೃಂದದವರಿಗೆ, ದೈವಪಾತ್ರಿಗಳು, ನರ್ತಕರು, ಚಾಕ್ರಿಯವರು , ವಿವಿಧ ಸಮಿತಿಯ ಸ್ವಯಂಸೇವಕರು, ಸಂಘ ಸಂಸ್ಥೆಗಳು, ಇವರೆಲ್ಲರ ಸಹಾಯದಿಂದ ಶತಮಾನಗಳ ಬಳಿಕ ನಡೆದ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಿತು.
ರಾಘವ ಗೌಡ ಕೆರೆಮೂಲೆ, ಅಧ್ಯಕ್ಷರು ಉತ್ಸವ ಸಮಿತಿ