ಐತ್ತೂರು ಗ್ರಾ.ಪಂ ಪಿಡಿಓ ಅವರಿಗೆ ಮಾನಸಿಕ ಕಿರುಕುಳ ಆರೋಪ – ಮೇಲಧಿಕಾರಿಗಳಿಗೆ ದೂರು ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯ

0

ಪುತ್ತೂರು: ಗ್ರಾ.ಪಂ ವ್ಯಾಪ್ತಿಗೆ ಒಳಪಡದ ವ್ಯಕ್ತಿಯೋರ್ವರು ಯೂ ಟ್ಯೂಬ್ ವರದಿಗಾರ ಎಂದು ಹೇಳಿಕೊಂಡು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯರ ಹತ್ತಿರದಿಂದ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಮತ್ತು ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿರುವುದಕ್ಕೆ ನಮ್ಮ ಗ್ರಾ.ಪಂ ಪಿಡಿಓ ಸುಜಾತ ಅವರ ಮೇಲೆ ಕೆಲವರು ಜಿಲ್ಲಾಧಿಕಾರಿಯವರಿಗೆ ದೂರು ನೀಡಿರುವುದು ಖಂಡನೀಯ. ಇದು ರಾಜಕೀಯ ಪ್ರೇರಿತವೇ ಹೊರತು ಇದರಲ್ಲಿ ಸತ್ಯಾಂಶವಿಲ್ಲ, ಮಹಿಳಾ ಅಧಿಕಾರಿಗೆ ಮಾನಸಿಕ ಕಿರುಕುಳ ನೀಡಿ ಅವರ ಕಾರ್ಯಕ್ಷಮತೆಯನ್ನು ಕುಗ್ಗಿಸುವ ಪ್ರಯತ್ನದ ಜೊತೆಗೆ ಅವರನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸಲು ಮಾಡಿರುವ ಪಿತೂರಿ ಇದಾಗಿದೆ ಎಂದು ಐತ್ತೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.ಸಭೆ ಗ್ರಾ.ಪಂ ಪ್ರಭಾರ ಅಧ್ಯಕ್ಷ ರೋಹಿತ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಯೂ ಟ್ಯೂಬ್ ಚಾನೆಲ್ ವರದಿಗಾರ ಎಂದು ಹೇಳಿ ವಿಡಿಯೋ ಚಿತ್ರೀಕರಣ ಮಾಡಿದ ಬಳಿಕ ಅದನ್ನು ಯೂ ಟ್ಯೂಬ್‌ಗೆ ಅಪ್ಲೋಡ್ ಮಾಡಿದ್ದು ಆ ಬಳಿಕ ಪಿಡಿಓ ಸುಜಾತ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪೊಲೀಸರು ವಿಡಿಯೋ ಅಪ್ಲೊಡ್ ಮಾಡಿದ ವ್ಯಕ್ತಿಯನ್ನು ಕರೆಸಿ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಆನೆ ದಾಳಿಯ ಸಂದರ್ಭ ಪಿಡಿಓ ಸುಜಾತ ಅವರನ್ನು ತೇಜೋವಧೆ ಮಾಡಲಾಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಗ್ರಾ.ಪಂ ಮುಖಾಂತರ ಎಲ್ಲ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯುತ್ತಿದ್ದು ಜನರಿಗೆ ಸಕಾಲದಲ್ಲಿ ಸೇವೆ ನೀಡಲಾಗುತ್ತಿದೆ, ಆದರೂ ಗ್ರಾ.ಪಂ ಅಧಿಕಾರಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಸದಸ್ಯರು ಹೇಳಿದರು. ಗ್ರಾ.ಪಂ ಉಪಾಧ್ಯಕ್ಷ ರೋಹಿತ್ ಅವರು ಪ್ರಭಾರ ಅಧ್ಯಕ್ಷರಾಗಿ ಕೆಲವೇ ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದು ಅವರನ್ನು ಕೂಡಾ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡಿತು. ನನಗೆ ಬೆದರಿಕೆ ಕೂಡಾ ಬಂದಿದೆ ಎಂದು ಅಧ್ಯಕ್ಷ ರೋಹಿತ್ ಹೇಳಿದರು. ನಂತರ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮತ್ತು ಜಿ.ಪಂ ಸಿಇಓ ಅವರಿಗೆ ದೂರು ನೀಡಿವುದಾಗಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ನಂತರ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಸದಸ್ಯರಾದ ಈರೇಶ್ ಗೌಡ, ನಾಗೇಶ, ವಿ.ಎಂ ಕುರಿಯನ್, ಮನಮೋಹನ್ ಗೋಳ್ಯಾಡಿ, ವತ್ಸಲಾ ಜೆ, ಉಷಾ, ಶ್ಯಾಮಲ, ಧನಲಕ್ಷ್ಮೀ, ಪ್ರೇಮ, ಜಯಲಕ್ಷ್ಮೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here