ಪುತ್ತೂರು:ಕೆಮ್ಮಿಂಜೆ ಗ್ರಾಮದ ದೈವ ಶ್ರೀಶಿರಾಡಿ ರಾಜನ್ ದೈವಸ್ಥಾನದಲ್ಲಿ ಶಿರಾಡಿ ದೈವ ಹಾಗೂ ಪರಿವಾರ ದೈವಗಳಿಗೆ ಪಂಚವಾರ್ಷಿಕ ನೇಮ ನಡಾವಳಿಯು ಮಾ.11 ಹಾಗೂ 12 ರಂದು ನಡೆಯಲಿದೆ.
ಕೆಮ್ಮಿಂಜೆ ಗ್ರಾಮ ದೇವಸ್ಥಾನ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವರ ಗಣವಾಗಿರುವ ಶ್ರೀ ಶಿರಾಡಿ ಹಾಗೂ ಪರಿವಾರ ದೈವಗಳ ಸಾನಿಧ್ಯಗಳು ಕೆಮ್ಮಿಂಜೆ ದೇವಸ್ಥಾನದ ಅನತಿ ದೂರದಲ್ಲಿರುವ ಬಯಲು ಕೆಮ್ಮಿಂಜೆಯಲ್ಲಿ ಗ್ರಾಮ ಅಭಯದಾತರಾಗಿ ನೆಲೆ ನಿಂತಿದೆ.
ಸುಮಾರು 8 ಶತಮಾನಗಳ ಇತಿಹಾಸವಿರುವ ಶ್ರೀಕ್ಷೇತ್ರದಲ್ಲಿ ಪ್ರಧಾನ ದೈವವಾಗಿ ಶ್ರೀ ಶಿರಾಡಿ ಹಾಗೂ ಪರಿವಾರ ದೈವಗಳಾಗಿ ವರ್ಣರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳು ಆರಾಧನೆಗೊಳಪಡುತ್ತಿದೆ. ಅನಾದಿ ಕಾಲದಿಂದಲೂ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಪಂಚಮಿಯ ದಿನ ದೈವಗಳ ಕಿರುವಾಳು ಭಂಡಾರ ದೇವಸ್ಥಾನಕ್ಕೆ ಆಗಮಿಸಿ ದೇವರ ಭೇಟಿಯಾಗಿ ಷಷ್ಠಿಯ ದಿನ ಹಿಂತಿರುಗುವ ಸಂಪ್ರದಾಯ ನಡೆಯುತ್ತಿದೆ.
ಕ್ಷೇತ್ರದಲ್ಲಿ ಈ ಹಿಂದೆ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನಿರ್ಣಯಿಸಿದಂತೆ ಐದು ವರ್ಷಗಳಿಗೊಮ್ಮೆ ದೈವಗಳ ನೇಮ ನಡಾವಳಿಯು ನೆರವೇರುತ್ತಿದೆ. ದೈವಸ್ಥಾನದಲ್ಲಿ ದೀಪಾವಳಿ, ಪತ್ತನಾಜೆ ಹಾಗೂ ವಾರ್ಷಿಕ ತಂಬಿಲ ಸೇವೆಗಳು ಪ್ರತಿವರ್ಷ ನಡೆಯುತ್ತಿದೆ.
ಈ ವರ್ಷದ ನೇಮ ನಡಾವಳಿಯಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಹೋಮ, ನಾಗತಂಬಿಲ, ಅಶ್ವತ್ಥಪೂಜೆ, ಮಧ್ಯಾಹ್ನ ದೈವಗಳಿಗೆ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ದೈವಗಳ ಭಂಡಾರ ತೆಗೆದು, ಬ್ರಹ್ಮರನೇಮ, ಅನ್ನಸಂತರ್ಪಣೆ, ಕಲ್ಲುರ್ಟಿ, ಪಂಜುರ್ಲಿ, ಶಿರಾಡಿ ಹಾಗೂ ಗುಳಿಗ ದೈವಗಳ ನೇಮ ನಡೆಯಲಿದೆ. ಮಾ.12ರಂದು ಗಡಿ ಸ್ಥಳಕ್ಕೆ ಹೋಗುವುದು ಹಾಗೂ ಗುಳಿಗ ದೈವದ ನೇಮ ನಡೆಯಲಿದೆ ಎಂದು ದೈವಸ್ಥಾನದ ಅಧ್ಯಕ್ಷ ಏಳ್ಮುಡಿ ಪಿ.ಶ್ರೀಧರ ಹೆಗ್ಡೆ, ಕಾರ್ಯದರ್ಶಿ ಗಣೇಶ್ ದೇವಾಡಿಗ, ದೈವಪಾತ್ರಿ ಯೋಗೀಶ್ ದೇವಾಡಿಗ ತಿಳಿಸಿದ್ದಾರೆ.