ತಿಂಗಳಾಡಿ: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಎಂ.ಎಸ್.ಡಬ್ಲ್ಯೂ, (ಸ್ನಾತಕೋತ್ತರ ಸಮಾಜಕಾರ್ಯ) ವಿಭಾಗ ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಅಭಿಯಾನ ಕಾರ್ಯಕ್ರಮವು ಕೆದಂಬಾಡಿ ಪಂಚಾಯತ್ ನ ಗ್ರಂಥಾಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿನಿಸಿದ ಎನ್ ಆರ್ ಎಲ್ ಎಂ ತಾಲೂಕು ಪಂಚಾಯತ್ ಮೇಲ್ವಿಚಾರಕಿ ನಳಿನಾಕ್ಷಿ ಮಾತನಾಡಿ “ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಲ್ಲಿ ಎಲ್ಲರೂ ಗಮನಹರಿಸಬೇಕು. ಸರಕಾರ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಬೆಳೆಯಲು ಮತ್ತು ಸಬಲೀಕರಣ ಹೊಂದಲು ಸಹಕರಿಸಬೇಕು. ಮಹಿಳೆಯರಿಗೂ ಪುರುಷರಂತೆ ಎಲ್ಲದರಲ್ಲೂ ಸಮಾನ ಅವಕಾಶ ನೀಡಿ ಅವರನ್ನು ಬೆಂಬಲಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಪುರುಷನೂ ಮಾಡಬೇಕು, ಅವರ ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ಮಹಿಳೆ ಎಂಬ ಪದ ಹೆಚ್ಚಿನ ತೂಕವನ್ನು ನೀಡುತ್ತದೆ. ಜಾಗತಿಕ ಮಟ್ಟದಲ್ಲಿ ಮಹಿಳೆ ರತ್ನವಾಗಿ ಹೊಳೆಯುತ್ತಿದ್ದಾಳೆ. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾಳೆ. ಆಕೆಯನ್ನು ಮುಂದೆ ಕೂಡಾ ಹಿಂಜರಿಯಲು ಬಿಡದೆ ಸಮಾನ ಸ್ಥಾನಮಾನ ಕೊಟ್ಟು ಮುನ್ನಡೆಸಬೇಕು” ಎಂದರು. ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನೂ ಸ್ವೀಕರಿಸಲಾಯಿತು.
ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಅಜಿತ್ .ಜಿ .ಕೆ, ಸದಸ್ಯರಾದ ಜಯಲಕ್ಷ್ಮಿ ಬಲ್ಲಾಳ್, ರೇವತಿ ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್ ನ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಶುಭಾ ರೈ, ಬಿ ಎಸ್ ಡಬ್ಲೂ ವಿದ್ಯಾರ್ಥಿಗಳಾದ ಸರಿತಾ, ಅನೀಷಾ, ಮುಹಮ್ಮದ್ ಆಶಿಫ್, ದಿಶಾ, ತಿಂಗಳಾಡಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸರಿತಾ ಸ್ವಾಗತಿಸಿ, ಗ್ರಂಥಾಲಯ ಮೇಲ್ವಿಚಾರಕಿ ಸಾರಿಕಾ ವಂದಿಸಿದರು. ಗ್ರಾಮ ಪಂಚಾಯತ್ 1ಗ್ರೇಡ್ ಕಾರ್ಯದರ್ಶಿ ಸುನಂದಾ ರೈ ಕಾರ್ಯಕ್ರಮ ನಿರೂಪಿಸಿದರು.