ಬಾಲಕಿಯ ಅತ್ಯಾಚಾರಕ್ಕೆ ಯತ್ನ: ಪೋಕ್ಸೋ ಕಾಯ್ದೆಯಡಿ ಆರೋಪಿಗಳಿಬ್ಬರ ಬಂಧನ

0

ಉಪ್ಪಿನಂಗಡಿ: ಮನೆಗೆ ನುಗ್ಗಿ ಬಾಲಕಿಯೋರ್ವರ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲಾಪು ಎಂಬಲ್ಲಿ ನಡೆದಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ನಿವಾಸಿಗರಾದ ಹಸೈನಾರ್ (24) ಹಾಗೂ ಅಬ್ಬಾಸ್ (30) ಬಂಧಿತ ಆರೋಪಿಗಳು. ಆರೋಪಿಗಳು ಕಳೆದ ಮೂರು ದಿನಗಳಿಂದ ಮರ ತುಂಡರಿಸುವ ಕೆಲಸದ ನಿಮಿತ್ತ ಕರಾಯ ಗ್ರಾಮದಲ್ಲಿ ಕಾರ್ಯ ನಿರ್ವಹಿಸಿದ್ದು, ಈ ಸಂದರ್ಭದಲ್ಲಿ ನೀರು ಕೇಳುವ ನೆಪದಲ್ಲಿ ಸಂತ್ರಸ್ತ ಬಾಲಕಿಯ ಮನೆಗೆ ಹೋಗಿದ್ದರು. ಮನೆಯಲ್ಲಿನ ಸದಸ್ಯರ ಬಗ್ಗೆ ಗಮನಿಸಿದ ಆರೋಪಿಗಳ ಪೈಕಿ ಹಸೈನಾರ್ ಶುಕ್ರವಾರದಂದು ಸಾಯಂಕಾಲ ಸಂತ್ರಸ್ತೆಯ ಮನೆಗೆ ಬಂದು, ಮರ ತುಂಡರಿಸುವ ಚೈನ್ ಇಲ್ಲಿ ಬಾಕಿಯಾಗಿದೆ ಎಂದು ಹೇಳಿ ಬಾಲಕಿಯ ಕೈಗೆ ಚೀಟಿಯೊಂದನ್ನು ನೀಡಿ, ಈ ನಂಬರಿಗೆ ಪೋನ್ ಮಾಡು, ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂಬುವುದಾಗಿ ಜೀವ ಬೆದರಿಕೆಯೊಡ್ಡಿ ಹೋಗಿದ್ದ. ಮರು ದಿನ ರಾತ್ರಿ 8 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ನಲ್ಲಿ ತನ್ನ ಸಹಚರ ಅಬ್ಬಾಸ್ ಎಂಬಾತನೊಂದಿಗೆ ಬಂದ ಆರೋಪಿಯು ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ, ಬಾಲಕಿಯನ್ನು ಬಲವಂತವಾಗಿ ಮನೆಯೊಳಗಿನ ರೂಮಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಬಾಲಕಿ ಹಾಗೂ ಬಾಲಕಿಯ ತಾಯಿ ರಕ್ಷಣೆಗಾಗಿ ಬೊಬ್ಬೆ ಹೊಡೆದಾಗ ನೆರೆ ಮನೆಯವರು ಓಡಿ ಬಂದು ಬಾಲಕಿಯನ್ನು ರಕ್ಷಿಸಿರುತ್ತಾರೆ.

ಬಳಿಕ ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಲಾಯಿತು. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮನೆ ಮಂದಿಯ ಎದುರೇ ಮನೆಯೊಳಗೆ ನುಗ್ಗಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಈ ಘಟನೆ ಕಳವಳಕಾರಿಯಾಗಿದೆ.

LEAVE A REPLY

Please enter your comment!
Please enter your name here