ಸಮಾಜದ ಎಲ್ಲಾ ವರ್ಗದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸರಕಾರದ ಗುರಿ – ಸಂಜೀವ ಮಠಂದೂರು
ಪುತ್ತೂರು: ಸಮಾಜದ ಎಲ್ಲಾ ವರ್ಗದ ಫಲಾನುಭವಿಗಳನ್ನು ಗುರುತಿಸಿ ಅವರ ಜೀವನ ನಿರ್ವಹಣೆಗೆ ಸೌಲಭ್ಯ ವಿತರಣೆ ಮಾಡುವುದು ಸರಕಾರದ ಗುರಿಯಾಗಿದ್ದು, ಅದನ್ನು ಸರಕಾರ ನಿರಂತರ ಮಾಡುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ತಾ.ಪಂ ವಠಾರದಲ್ಲಿ ಮಾ.13ರಂದು ನಡೆದ ಪುತ್ತೂರು ತಾ.ಪಂ ಅನುದಾನದಲ್ಲಿ ಶೇ.5ರಲ್ಲಿ ರೂ.7.14ಲಕ್ಷ ದಲ್ಲಿ 6 ಮಂದಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದಿಂದ ತಲಾ ರೂ. 8ಸಾವಿರದಂತೆ 50 ಮಂದಿ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫಲಾನುಭವಿಗಳ ಜೀವನ ನಿರ್ವಹಣೆಗೆ ಸರಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ಮುಖ್ಯವಾಗಿ ವಿಕಲಚೇತನರಿಗೆ ಮತ್ತು ಕುಶಲಕರ್ಮಿಗಳಿಗೆ ಅವರ ಜೀವನ ನಿರ್ವಹಣೆಗೆ ಸವಲತ್ತನ್ನು ಸರಕಾರವೇ ನೀಡುತ್ತಿದೆ. ತಾವು ಪಡೆದ ಸವಲತ್ತುಗಳು ಪೂರ್ಣ ಮಟ್ಟದಲ್ಲಿ ಉಪಯೋಗವಾಗಲಿ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ, ವಿಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷರು, ಜಿಲ್ಲಾ ಕೈಗಾರಿಕ ವಿಭಾಗದ ಅಧಿಕಾರಿ ಮಂಜುನಾಥ ಹೆಗ್ಡೆ, ಏಸ್ ಮೋಟಾರ‍್ಸ್ ಸಂಸ್ಥೆಯ ಮಾಲಕ ಆಕಾಶ್ ಐತಾಳ್. ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಸವಲತ್ತುಗಳ ಕುರಿತು ಮಾಹಿತಿ ನೀಡಿದರು.