ದೇಶ ಉಳಿಯಲು ಜಾತಿ ರಹಿತವಾಗಿ ಒಂದಾಗಿ – ರಾಘವೇಶ್ವರ ಶ್ರೀ
ಜಗತ್ತು ರಾಮನಲ್ಲಿ ನಂಬಿಕೆ ಇಟ್ಟಿದೆ – ಡಾ. ಪ್ರಭಾಕರ ಭಟ್
ಪುಣಚ: ಬೇರೆ ಬೇರೆ ಆಚರಣೆಯ ಜಾತಿ ಪದ್ದತಿ ನಮ್ಮಲ್ಲಿದ್ದರೂ ಧರ್ಮ, ದೇಶ ಮತ್ತು ಸಂಸ್ಕೃತಿ ವಿಚಾರದಲ್ಲಿ ನಾವೆಲ್ಲಾ ಒಂದುಗೂಡಬೇಕು. ಒಂದೇ ಭಾವದಿಂದ ನಾವೆಲ್ಲಾ ಇದ್ದರೆ ಮಾತ್ರ ದೇಶದ ಭವಿಷ್ಯವನ್ನು ಕಾಣಲು ಸಾಧ್ಯ. ಅಧ್ಯಾತ್ಮಿಕ ಚೈತನ್ಯವನ್ನು ಮೈಗೂಡಿಸಿಕೊಳ್ಳಲು ದೇಶ ರಕ್ಷಣೆಯ ಕಾರ್ಯದಲ್ಲಿ ನಾವೆಲ್ಲಾ ಭಾಗಿಗಳಾಗೋಣ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ನುಡಿದರು.
ಪುಣಚ ಶ್ರೀ ಮಹಿಷಮರ್ದಿನಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ. 13 ರಂದು ನಡೆದ ಕೊನೆಯ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ’ದೇವಿ ಮಹಾತ್ಮೆಯಲ್ಲಿ ಒಂದು ಸಂಘಟನೆಯ ತತ್ವವಿದೆ. ದುಷ್ಟ ಸಂಹಾರಕ್ಕಾಗಿ ಸಮಸ್ತ ದೇವತೆಗಳ ಅಂತಃಸತ್ವವಾಗಿ ಹೇಗೆ ದೇವಿ ಆವಿರ್ಭವಿಸಿದಳೋ ಅದೇ ರೀತಿ ಹಿಂದು ಸಮಾಜದ ರಕ್ಷಣೆಗಾಗಿ ನಾವೆಲ್ಲಾ ಒಂದಾಗಬೇಕಿದೆ. ಮಹಿಷನೆಂಬ ಕತ್ತಲು ದೂರವಾಗಲು ಮಹಿಷಮರ್ದಿನಿ ನಮಗೆಲ್ಲಾ ಅನುಗ್ರಹಿಸಲಿ. ದಕ್ಷಿಣ ಕನ್ನಡದಲ್ಲಿ ಆಪತ್ತುಗಳು ಬಹಳವಿದ್ದರೂ ಅತ್ಯುಚ್ಛ ಮಟ್ಟದ ಹಿಂದು ಜಾಗೃತಿ ಕೂಡ ಇದೆ. ಭಾರತ ಭಾರತವಾಗಿ ಉಳಿಯಲಿ’ ಎಂದರು.
ಈ ಗ್ರಾಮದ ವ್ಯಕ್ತಿಯಾಗಲು ಹೆಮ್ಮೆಪಟ್ಟಿದ್ದೇನೆ – ರವಿ ಶೆಟ್ಟಿ: ಸಭಾಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲುರವರು ಮಾತನಾಡಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯುವಲ್ಲಿ ಶ್ರಮಿಸಿದ ಪ್ರತಿಯೊಂದು ಸಮಿತಿಯವರನ್ನು ಅಭಿನಂದಿಸಿ, ನಾಡಿನೆಲ್ಲೆಡೆ ಶ್ಲಾಘನೆಗೆ ಒಳಪಟ್ಟ ಬ್ರಹ್ಮಕಲಶೋತ್ಸವ ನಡೆದ ಈ ಗ್ರಾಮದ ಓರ್ವ ವ್ಯಕ್ತಿ ಎಂದೆನಿಸಿಕೊಳ್ಳಲು ಬಹಳ ಹೆಮ್ಮೆಯಾಗುತ್ತಿದೆ. ಈ ಗ್ರಾಮದ ಎಲ್ಲಾ ಮನೆಗಳಲ್ಲಿ ಸುಭೀಕ್ಷೆ ನೆಲೆಸಲು ಆ ಮಹಾಮಾತೆ ಅನುಗ್ರಹಿಸಲಿ’ ಎಂದರು.
ಜಗತ್ತು ರಾಮನಲ್ಲಿ ನಂಬಿಕೆ ಇಟ್ಟಿದೆ – ಡಾ. ಪ್ರಭಾಕರ ಭಟ್: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಬ್ರಹ್ಮಕಲಶೋತ್ಸವದ ಸಮಾರೋಪ ಭಾಷಣ ಮಾಡಿ ಮಾತನಾಡಿ ’ದೇಶ ಮತ್ತು ನಮಗೆ ಅವಿನಾಭಾವ ಸಂಬಂಧವಿದೆ. ಈ ದೇಶದ ಕಣ ಕಣಕ್ಕೂ ಪಾವಿತ್ರ್ಯತೆಯ ಗುಣವಿದೆ. ಈ ಭೂಮಿಯ ನೀರು, ಗೋವು ಅತ್ಯಂತ ಪವಿತ್ರ ಎಂದು ನಂಬಿ ಅದರ ಫಲವನ್ನೂ ಪಡೆಯುತ್ತೇವೆ. ’ ವಂದೇ ಮಾತರಂ’ ಮತ್ತು ’ಭಾರತ್ ಮಾತಾ ಕೀ ಜೈ’ ಘೋಷಣೆಗಳು ನಮಗೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಹೊರತು ಬೇರೆ ಯಾರೂ ಅಲ್ಲ. ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬಂದಿಲ್ಲ. ಹೋರಾಟ ಮಾಡಿ ಪ್ರಾಣ ಸಮರ್ಪಣೆ ಮಾಡಿ ತಂದುಕೊಟ್ಟ ಸ್ವಾತಂತ್ರ್ಯ. ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದರು. ಹಿಂದು ಸಮಾಜ ಶಕ್ತಿಯನ್ನು ಕಳೆದುಕೊಂಡರೆ ದೇವಸ್ಥಾನ, ಮಠ ಮಂದಿರಗಳು ಉಳಿಯುತ್ತದಾ ? ಎಂದು ಪ್ರಶ್ನಿಸಿದ ಭಟ್ ರವರು ದೇವಸ್ಥಾನಕ್ಕೆ ಬರಬೇಕಾದದ್ದು ದೇವಸ್ಥಾನದ ರಕ್ಷಣೆಗಾಗಿ ಬರಬೇಕು. ಆ ಮೂಲಕ ಧರ್ಮದ ರಕ್ಷಣೆ ಮಾಡಬೇಕು. ಹಿಂದು ಸಮಾಜ ಹೇಡಿ ಸಮಾಜವಾಗಬಾರದು. ಜಗತ್ತು ರಾಮನಲ್ಲಿ, ರಾಮ ರಾಜ್ಯದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಅದಕ್ಕೆ ರಾಮರಾಜ್ಯದಲ್ಲಿರುವ ನಾವೆಲ್ಲಾ ಶಕ್ತಿ ತುಂಬುವ ಕಾರ್ಯ ಮಾಡೋಣ’ ಎಂದು ಹೇಳಿ ಧರ್ಮ ಸಂಸ್ಕೃತಿ, ಪುರಾಣವನ್ನು ಮಕ್ಕಳಿಗೆ ಓದಿಸಿ ಎಂದು ಕರೆ ನೀಡಿದರು.
ಸನಾತನ ಧರ್ಮ ಉತ್ಥಾನಕ್ಕೆ ಸರಕಾರದ ಅನುದಾನ – ಮಠಂದೂರು: ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ’ಧಾರ್ಮಿಕ ಆಚರಣೆಗಳಿಗೆ ಪೂರಕವಾದ ದೇವಸ್ಥಾನಗಳು ಸನಾತನ ಹಿಂದು ಧರ್ಮದ ಉತ್ಥಾನ ಮಾಡಬೇಕೆಂಬ ಹಿನ್ನೆಲೆಯಲ್ಲಿ ಸರಕಾರ ಅನುದಾನಗಳನ್ನು ಕೊಡುವ ಕೆಲಸ ಮಾಡುತ್ತಿದೆ. ಗೌರವಿಸಿ ಸನ್ಮಾನಿಸಿರುವುದಕ್ಕೆ ಮತ್ತು ಜನಸೇವೆ ಮಾಡಲು ಆಶೀರ್ವಾದ ಮಾಡಿರುವುದಕ್ಕೆ ನನಗೆ ಸಂತೃಪ್ತಿ ಇದೆ’ ಎಂದರು.
ತಾಯಂದಿರ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡೋಣ – ಶರಣ್ ಪಂಪ್‌ವೆಲ್: ವಿಶ್ವಹಿಂದು ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ರವರು ಮಾತನಾಡಿ ’ದೇವೀ ಶಕ್ತಿಯೇ ಭಾರತವನ್ನು ಕಾಪಾಡುತ್ತಿದೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದು ಹೆಣ್ಮಕ್ಕಳನ್ನು ಭಯೋತ್ಪಾದಕರ ಜೊತೆ ಜೋಡಣೆ ಮಾಡುವ ದುಷ್ಕೃತ್ಯ ದೇಶದೆಲ್ಲೆಡೆ ನಡೆಯುತ್ತಿದೆ. ಈ ಬಗ್ಗೆ ನಮ್ಮಲ್ಲಿ ಜಾಗೃತಿಯಾಗಬೇಕಿದೆ. ತಾಯಂದಿರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ನಮ್ಮ ತಾಯಂದಿರೇ ಉತ್ತರ ಕೊಡಬೇಕಾಗಿದೆ. ಜಾತಿ ಸಂಘರ್ಷವನ್ನು ಬಿಟ್ಟು ಹಿಂದು ಸಮಾಜ ಉನ್ನತಿಗಾಗಿ ಒಗ್ಗಟ್ಟಾಗೋಣ’ ಎಂದು ಕರೆ ನೀಡಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಾಯಕ ಮಹಾಪ್ರಬಂಧಕ ಆನಂದ ನಾಯ್ಕ ಬೈರಿಕಟ್ಟೆಯವರು ಮಾತನಾಡಿ ’ಹಿರಿಯರ ದೂರದರ್ಶಿತ್ವ, ಕಿರಿಯರ ಛಲ, ಸರಕಾರದ ಅನುದಾನ, ಭಕ್ತರ ದೇಣಿಗೆಯಿಂದ ಇಂದು ಪುಣಚ ಅಭಿವೃದ್ಧಿ ಕಂಡಿದೆ’ ಎಂದರು.
ವೇದಿಕೆಯಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್ ಉಪಸ್ಥಿತರಿದ್ದರು.
ಗೌರವಾರ್ಪಣೆ: ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಾಸಕ ಸಂಜೀವ ಮಠಂದೂರು, ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ಕತಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ರವೀಂದ್ರ ಪರಿಯಾಲು ಸ್ವಾಗತಿಸಿದರು. ಹರೀಶ್ ಆಜೇರು ಆಶಯ ಗೀತೆ ಹಾಡಿದರು. ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಶಂಕರನಾರಾಯಣ ಭಟ್ ಮಲ್ಯ ದಂಪತಿ ಸ್ವಾಮೀಜಿಯವರನ್ನು ಗೌರವಿಸಿದರು. ಅಶೋಕ್ ಮೂಡಂಬೈಲು, ವೀರಪ್ಪ ಮೂಲ್ಯ, ಕಿರಣ್ ಚಂದ್ರ, ಡಾ. ಕೃಷ್ಣಮೂರ್ತಿಯವರು ಅತಿಥಿಗಳನ್ನು ಗೌರವಿಸಿದರು. ಚೈತ್ರ, ನಮಿತಾ ಹಾಗೂ ಶೃತಿ ಶಾಂತಿಮಂತ್ರ ಪಠಿಸಿದರು.
ಬ್ರಹ್ಮಕಲಶಾಭಿಷೇಕದ ದಿನಪೂರ್ತಿ ಕಾರ್ಯಕ್ರಮಗಳು ’ಸುದ್ದಿ ಪುತ್ತೂರು ಲೈವ್’ ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು.