





ಬಿಜೆಪಿ, ಜನಸಂಘದ ಕಾಲದ ಹಿರಿಯನ್ನು ಗೌರವಿಸುವ ವಿಶೇಷ ಕಾರ್ಯಕ್ರಮ
ಬೆಳಗ್ಗೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ


ಪುತ್ತೂರು: ದೇಶ ಕಂಡ ಅಪ್ರತಿಮ ನಾಯಕ, ಅಜಾತಶತ್ರು, ದೇಶದ ಪ್ರಧಾನಿಯಾಗಿ ನೆನಪಿನಲ್ಲಿಟ್ಟುಕೊಳ್ಳುವ ಹಲವಾರು ಕೊಡುಗೆಗಳನ್ನು ನೀಡಿದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿಯ ಅಂಗವಾಗಿ ನ.19ಕ್ಕೆ ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.





ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಅವರು ಮಾತನಾಡಿ 1980ರಲ್ಲಿ ಬಿಜೆಪಿ ಪ್ರಾರಂಭ ಆಗುವ ಸಂದರ್ಭದಲ್ಲಿ ಅದರ ನೇತೃತ್ವ ವಹಿಸಿರುವ ಅಟಲ್ ಬಿಹಾರಿ ವಾಜಪೇಯಿ ಅವರು ಜನಸಂಘದ ಕಾಲದಿಂದಲೂ ರಾಷ್ಟ್ರೀಯ ವಿಚಾರವಿಟ್ಟುಕೊಂಡು ಸಂಘಟನೆಗಾಗಿ ನಿರಂತರ ಕೆಲಸ ಕಾರ್ಯ ಮಾಡಿದವರು. ನಮ್ಮ ದೇಶದ ವಿದೇಶ ಸಚಿವರಾಗಿ, ವಿಪಕ್ಷ ನಾಯಕನಾಗಿ ಎಲ್ಲರ ಮೆಚ್ಚುಗೆ ಗಳಿಸಿದರು. ಸರಕಾರವನ್ನು ಸರಿದಾರಿಗೆ ತರುವಲ್ಲಿ ಅಪ್ರತಿಮ ಸಂಸದೀಯ ಪಟುವಾಗಿ ಕೆಲಸ ಮಾಡಿದ ಅವರು ದೇಶದ ಪ್ರಧಾನಿ ಆದ ಸಂದರ್ಭದಲ್ಲಿ ದೇಶದಲ್ಲಿ ದೊಡ್ಡ ರೀತಿಯ ಬದಲಾವಣೆ ತಂದಿದ್ದರು. ದೇಶದಲ್ಲಿ ಅಭಿವೃದ್ಧಿಗೆ ಪೂರಕವಾಗಿ ಹೊಸತನ ತಂದಿರುವ ಅವರು ಪೋಖ್ರಾನ್ ಅಣುಸ್ಥಾವರ, ಕಾರ್ಗೀಲ್ ವಿಜಯೋತ್ಸವದಲ್ಲಿ ಸಮರ್ಥ ನಾಯಕತ್ವ, ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ರಾಷ್ಟ್ರೀಯ ಹೆದ್ದಾರಿಗೆ ಶಕ್ತಿಕೊಟ್ಟವರು. ತಂತ್ರಜ್ಞಾನ ಮೂಲಕ ಕ್ರಾಂತಿಕಾರಿ ಬದಲಾವಣೆ, ಶಿಕ್ಷಣಕ್ಕೆ ವಿಶೇಷ ಕೊಡುಗೆ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ರಸ್ತೆ, ಮೂಲಭೂತ ಸೌಕರ್ಯಕ್ಕೆ ವಿಶೇಷ ಒತ್ತುಕೊಟ್ಟ ಅವರು ದೇಶದ ಮೂಲೆ ಮೂಲೆಗೆ ತನ್ನ ಪ್ರವಾಸ ಕೈಗೊಂಡು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ್ದಾರೆ. ಬೇರೆ ಬೇರೆ ಸಂದರ್ಭದಲ್ಲಿ ಅವರು ಮಂಗಳೂರಿಗೆ ಬಂದಿದ್ದರು. ಪುತ್ತೂರಿಗೂ 1997ರಲ್ಲೂ ಬಂದಿದ್ದರು. ಇವತ್ತು ಅವರ ಜನ್ಮಶತಾಬ್ದಿಯ ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಯಲ್ಲಿ ಯಾರು ಪಕ್ಷಕಾಗಿ ಕೆಲಸ ಮಾಡಿದ್ದಾರೋ ಅವರನ್ನು ಗುರುತಿಸುವುದು ಬಿಜೆಪಿ ಪಕ್ಷದ ಅಪೇಕ್ಷೆಯಾಗಿತ್ತು. ಅದನ್ನು ಎಲ್ಲಾ ಜಿಲ್ಲೆಯಲ್ಲಿ ದೇಶದಾದ್ಯಂತ ಮಾಡಿದ್ದಾರೆ. ಇದೇ ಕಾರ್ಯಕ್ರಮ ಅಟಲ್ ವಿರಾಸತ್ ಮೂಲಕ ನಮ್ಮ ಜಿಲ್ಲೆಯಲ್ಲಿ ಪುತ್ತೂರಿನಲ್ಲಿ ನಡೆಯಲಿದೆ ಎಂದರು.
ಈ ವರ್ಷ ಅತ್ಯಂತ ದೊಡ್ಡ ನಮಗೆ ಪ್ರೇರಣೆ ಕೊಟ್ಟಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷ ಕೂಡಾ ಹೌದು, ಅಟಲ್ ಬಿಹಾರಿ ಜನ್ಮಶತಾಬ್ದಿ ವರ್ಷವೂ ಹೌದು, ವಂದೆ ಮಾತರಂಗೆ 150 ವರ್ಷ ಆಗಿರುವುದು ಹೌದು. ಈ ನಿಟ್ಟಿನಲ್ಲಿ ಅಟಲ್ ವಿರಾಸತ್ ಉತ್ಸವವನ್ನು ಒಳ್ಳೆಯ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಪದಾಧಿಕಾರಿಗಳು ಸೇರಿ ಪೂರ್ವ ಭಾವಿ ಸಭೆ ಮಾಡಿದ್ದೇವೆ. ಪುತ್ತೂರಿನಲ್ಲೂ ಪೂರ್ವಭಾವಿ ಸಭೆ ಮಾಡಿದ್ದೇವೆ. ಪುತ್ತೂರಿನಲ್ಲಿ ಸಾವಿರಾರು ಸಂಖ್ಯೆಯ ಜನರನ್ನು ಸೇರಿಸುವ ಮೂಲಕ ಅಟಲ್ ವಿರಾಸತ್ ಕಾರ್ಯಕ್ರಮ ಅತ್ಯಂತ ಯಶಸ್ವಿ ಮಾಡುವ ನಿಟ್ಟಿನಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಾನಿಧ್ಯದಲ್ಲಿ ನ.19ಕ್ಕೆ ಬೆಳಿಗ್ಗೆ ಅಲ್ಲಿಂದ ಶೋಭಾಯಾತ್ರೆ ಹೊರಟು ಬೆಳಗ್ಗೆ ಗಂಟೆ 10ಕ್ಕೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಮೈದಾನದಲ್ಲಿ ಮಾಡಲಿದ್ದೇವೆ. ಕಾರ್ಯಕ್ರಮದಲ್ಲಿ ರಾಜ್ಯದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭಾಗವಹಿಸಲಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ನಾಯಕರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಎಲ್ಲಾ ಶಾಸಕರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗಾಗಿ ಈಗಾಗಲೇ 45ರಲ್ಲಿ 40 ಗ್ರಾಮಗಳಲ್ಲಿ ಸಭೆ ಮಾಡಲಾಗಿದೆ ಎಂದವರು ಹೇಳಿದರು.
ಪುತ್ತೂರಿಗೆ ಪ್ರಥಮ ಸ್ಥಾನ
8 ತಿಂಗಳ ಹಿಂದೆ ನಮ್ಮ ಜಿಲ್ಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿಯನ್ನು ಯಶಸ್ವಿಯಾಗಿ ಮಾಡುವ ಸಲುವಾಗಿ ಜಿಲ್ಲೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು ಮತ್ತು ಪ್ರತಾಪ್ ಸಿಂಹ ನಾಯಕ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಅವರ ಜವಾಬ್ದಾರಿಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಬಿಜೆಪಿಗಾಗಿ ಅನೇಕ ವರ್ಷಗಳಿಂದ ಕೆಲಸ ಮಾಡಿರುವ ಹಿರಿಯರನ್ನು ಗುರುತಿಸಿ ಅವರಿಗೆ ಗೌರವಿಸುವ ಕೆಲಸ ಮಾಡಿದ್ದಾರೆ. ಬೇರೆ ಬೇರೆ ಸಾಮಾಜಿಕ ಕೆಲಸವನ್ನೂ ಮಾಡಲಾಗಿದೆ. ಎಲ್ಲಾ ಕಾರ್ಯಕ್ರಮದ ಮಧ್ಯೆ ಅಟಲ್ ವಿರಾಸತ್ ಕಾರ್ಯಕ್ರಮ ಮಾಡಲು ಕೇಂದ್ರದಿಂದ ಸೂಚನೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ಪೂರ್ವ ತಯಾರಿ ಮಾಡಲಾಗಿದೆ. ಪುತ್ತೂರಿನಲ್ಲಿ 36ರಲ್ಲಿ 34 ಶಕ್ತಿ ಕೇಂದ್ರದಲ್ಲಿ ಅಭ್ಯಾಸ ವರ್ಗ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಪ್ರಥಮ ಸ್ಥಾನದಲ್ಲಿದೆ. ಬಿಜೆಪಿ ದೇಶಕ್ಕೆ ರಾಜ್ಯಕ್ಕೆ ಏನೆಲ್ಲ ಕೊಟ್ಟಿದೆ ಎಂಬುದನ್ನು ಕಾರ್ಯಕರ್ತರಿಗೆ ತಿಳಿಸುವ ಮೂಲಕ ಜನಸಾಮಾನ್ಯರಿಗೆ ಮುಟ್ಟಿಸುವ ರೀತಿಯಲ್ಲಿ ಅಭ್ಯಾಸ ವರ್ಗದಲ್ಲಿ ವಿಶೇಷ ಒತ್ತು ಕೊಡುವ ಕೆಲಸ ಮಾಡಿದ್ದೇವೆ. ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿತ್ತು. ಅದರಲ್ಲೂ ಪುತ್ತೂರಿನಲ್ಲಿ ಅತ್ಯಂತ ಯಶಸ್ವಿಯಾಗಿದೆ.
ಸತೀಶ್ ಕುಂಪಲ, ಅಧ್ಯಕ್ಷರು, ಬಿಜೆಪಿ ಜಿಲ್ಲೆ
ಪುತ್ತೂರಿಗೆ ಬಂದಿದ್ದ ಮೈದಾನದಲ್ಲೇ ಜನ್ಮಶತಾಬ್ದಿ ಸಮಾವೇಶ
ಕಾಕತಾಳಿಯವೋ ಏನೂ 1987ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪುತ್ತೂರಿಗೆ ಬಂದಾಗ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲೇ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಇದೀಗ ಮತ್ತೆ ಕಾಕತಾಳಿಯವೋ ಏನೊ ನ.19ರಂದು ಅದೇ ಸ್ಥಳದಲ್ಲಿ ಅವರ ಜನ್ಮಶತಾಬ್ದಿ ಕಾರ್ಯಕ್ರಮ ನಡೆಯುತ್ತಿರುವುದು ಒಂದು ವಿಶೇಷತೆಯನ್ನು ಕಂಡಿದೆ.
ಸತೀಶ್ ಕುಂಪಲ, ಅಧ್ಯಕ್ಷರು, ಜಿಲ್ಲಾ ಬಿಜೆಪಿ









