ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ 10ನೇ ತರಗತಿ ಮಕ್ಕಳ ದೀಪ ಪ್ರದಾನ ಕಾರ್ಯಕ್ರಮ ನಡೆಯಿತು. ಅಭ್ಯಾಗತರಾಗಿ ಆಗಮಿಸಿದ್ದ ಉಪ್ಪಿನಂಗಡಿ ಶ್ರೀರಾಮ ಹಾಗೂ ಇಂದ್ರಪ್ರಸ್ಥ ಶಾಲಾ ಸಂಚಾಲಕರು, ಹಿರಿಯ ಪೋಷಕರು ಆದ ಯು. ಜಿ. ರಾಧ ಮಾತನಾಡಿ “ಶಾಲಾ ದಿನಗಳ ಗುಣಮಟ್ಟದ ಕಲಿಕೆ ವಿದ್ಯಾರ್ಥಿಯಲ್ಲಿ ಗಟ್ಟಿಯಾದರೆ ಬದುಕಿನಲ್ಲಿ ಖುಷಿ ಕಾಣಲು ಸಾಧ್ಯವಿದೆ. ಉನ್ನತ ಶಿಕ್ಷಣ, ಉದ್ಯೋಗ ಮುಂತಾದವುಗಳಿಗಾಗಿ ಸರ್ಟಿಫಿಕೇಟ್ ಆಧಾರದ ಶಿಕ್ಷಣ ಸಹಕಾರಿಯಾಗುವುದು ಒಂದು ಭಾಗವಾದರೆ ಸಮಾಜ ಮುಖಿಯಾಗಿ ಸಂಸ್ಕಾರಯುತವಾದ ಬದುಕಿಗೆ ಮಕ್ಕಳು ಬದ್ಧರಾಗಿರಬೇಕಾದುದು ಇಂದಿನ ಅಗತ್ಯವಾಗಿದೆ” ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ಮಧ್ಯಾಹ್ನದ ಊಟದ ’ಅನ್ನಪೂರ್ಣ ಯೋಜನೆ’ಯು ಪೋಷಕರ ಹಾಗೂ ಸಮಾಜದ ಸಹೃದಯರಿಂದ ಉತ್ತಮ ರೀತಿಯಲ್ಲಿ ಆರಂಭಗೊಂಡು ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಪದವಿ ಪೂರ್ವ ವಿಭಾಗದಲ್ಲಿ ಆಂಗ್ಲ ಭಾಷಾ ವಿಷಯದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿ ಆಗಿದ್ದು, ಇದೀಗ ಮನೋವಿಜ್ಞಾನದಲ್ಲಿ ಪದವಿ ಕಲಿಕಾರ್ಥಿಯಾಗಿರುವ ಶಾಲಾ ಹಿರಿಯ ವಿದ್ಯಾರ್ಥಿನಿ ಸಿಂಚನ ಕಲ್ಲೂರಾಯ ದೀಪ ಬೆಳಗಿಸಿ ಭಾಷಾ ಕಲಿಕಾ ಸಾಧ್ಯತೆಗಳಿಗೆ ತಾನು ತೊಡಗಿಸಿಕೊಂಡ ರೀತಿಯನ್ನು ತಿಳಿಸುತ್ತಾ ಶಾಲಾ ದಿನಗಳ ಕಲಿಕೆ – ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹವನ್ನು ನೆನಪಿಸಿಕೊಂಡರು.
ಪೋಷಕರ ವತಿಯಿಂದ ಮಾತನಾಡಿದ ರವೀಂದ್ರ ಪಿ ರವರು ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುವುದರೊಂದಿಗೆ ಮಾತೃತ್ವದ ಸ್ಪರ್ಶ ಹಾಗೂ ನೇವರಿಕೆ ನೀಡುತ್ತಿರುವ ಶಿಕ್ಷಕ ವೃಂದದವರ ಕಾಳಜಿಯನ್ನು ತಿಳಿಸುತ್ತಾ ಅನ್ನಪೂರ್ಣ ಯೋಜನೆಗೆ ತಮ್ಮ ಸಹಕಾರವನ್ನು ಸೂಚಿಸಿದರು.
ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ರಮೇಶ ಪಜಿಮಣ್ಣು ಹಾಗೂ ಉಪಾಧ್ಯಕ್ಷೆ ನವೀನಾಕ್ಷಿ ಶಾಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪೋಷಕರು, ಆಡಳಿತ ಸಮಿತಿ, ಶಿಕ್ಷಕ ವೃಂದ ಹೊಂದಿರುವ ಕೌಟುಂಬಿಕ ಸೌಹಾರ್ದತೆಯ ಅನುಭವವನ್ನು ನೆನಪಿಸುತ್ತ ಅನ್ನಪೂರ್ಣ ಯೋಜನೆಗೆ ತಮ್ಮ ಆರ್ಥಿಕ ಸಹಕಾರ ತಿಳಿಸಿದರು.
ಪದವಿಪೂರ್ವ ವಿಭಾಗದಲ್ಲಿ ಕಲಿಯುತ್ತಿರುವ ಶಾಲಾ ಹಿರಿಯ ವಿದ್ಯಾರ್ಥಿ ಮಿಥುನ್ ಪರೀಕ್ಷಾ ತಯಾರಿಯ ಮಾಹಿತಿ ನೀಡಿ ಶುಭ ಹಾರೈಸಿದರು.
ಅಧ್ಯಕ್ಷರಾದ ರಮೇಶ್ಚಂದ್ರ, ಸಂಚಾಲಕರಾದ ವಸಂತ ಸುವರ್ಣ, ಖಜಾಂಜಿಗಳಾದ ಅಶೋಕ್ ಕುಂಬ್ಳೆ, ಆಡಳಿತ ಸಮಿತಿ ಸದಸ್ಯರಾದ ತಿರುಮಲೇಶ್ವರ ಭಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಹ ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು. ಮಾತೃ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಸಹಭೋಜನದೊಂದಿಗೆ ಸಂಪನ್ನಗೊಂಡಿತು.