ಪುತ್ತೂರು:ಜ್ಞಾನದ ಜೊತೆ ವ್ಯವಹಾರ ಹೆಚ್ಚಾಗುತ್ತದೆ.ಇದರ ಜೊತೆಗೆ ದೈಹಿಕ ಸಂಪತ್ತನ್ನು ಹೆಚ್ಚು ಮಾಡಲು ಕ್ರೀಡೆಯಿಂದ ಮಾತ್ರ ಸಾಧ್ಯ.ವಕೀಲರುಗಳಿಗೆ ಇವೆರಡೂ ಬಹಳ ಅಗತ್ಯ.ಇಲ್ಲಿ ಒಂದನ್ನು ಬಿಟ್ಟು ಇನ್ನೊಂದು ಮಾಡಲು ಸಾಧ್ಯವಿಲ್ಲ ಎಂದು ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ.ಜೋಷಿ ಅವರು ಹೇಳಿದರು.
ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಮಾ.೧೯ರಂದು ನಡೆದ ವಕೀಲರ ಕ್ರೀಡಾಕೂಟ `ಎಪಿಎಲ್-೨೦೨೩ ಸೀಸನ್ -೬’ರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜ್ಞಾನದ ಸಂಪತ್ತು ಮತ್ತು ಕ್ರೀಡಾ ಸಂಪತ್ತು ವಕೀಲರಿಗೆ ಬಹಳ ಅಗತ್ಯ. ಕೀಡೆಯು ನಮ್ಮಲ್ಲಿ ಸಹೋದರತ್ವ ಭಾವನೆ ಹುಟ್ಟು ಹಾಕುತ್ತಾ ಸ್ಪರ್ಧಾ ಮನೋಭಾವನೆಯನ್ನೂ ಬೆಳೆಸುತ್ತದೆ.ಇದರಿಂದ ನಮ್ಮಲ್ಲಿ ವಿಶಾಲವಾದ ಮನೋಭಾವ ಹೆಚ್ಚಾಗುತ್ತದೆ. ಇದು ಸಮಾಜದಲ್ಲಿ ಇರುವ ನಮಗೆ ಬೇರೆಯವರಲ್ಲಿ ಹೇಗೆ ಇರಬೇಕೆಂದು ಕಲಿಸಿಕೊಡುತ್ತದೆ ಎಂದರು.
ಪುತ್ತೂರು ವಕೀಲರ ಸಂಘದಿಂದ ಸಮಾಜಕ್ಕೆ ಉತ್ತಮ ವಿಚಾರ:
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ರಾಜಾರಾಮ ಸೂರ್ಯಂಬೈಲು ಅವರು ಮಾತನಾಡಿ ಪುತ್ತೂರಿನ ಮಣ್ಣಿಗೂ ನ್ಯಾಯಾಲಯಕ್ಕೂ ಬಹಳ ವಿಶೇಷತೆ ಇದೆ.ಸಮಾಜದಲ್ಲಿ ಒತ್ತಡವನ್ನು ಕಡಿಮೆ ಮಾಡಿ ಬೆರೆತು ಬಾಳುವ ವ್ಯವಸ್ಥೆಗೆ ಕ್ರೀಡಾ ಕೂಟ ಬಹಳ ಅಗತ್ಯ.ಪುತ್ತೂರಿನ ವಕೀಲರ ಸಂಘ ಸಮಾಜಕ್ಕೆ ಉತ್ತಮ ವಿಚಾರ ಕೊಡುತ್ತಿದ್ದು ಪುತ್ತೂರು ಬಾರ್ ಅಸೋಸಿಯೇಶನ್ ನನಗೆ ಮನೆ ಇದ್ದ ಹಾಗೆ ಎಂದರು.
ಮಾನವೀಯ ಗುಣವನ್ನು ಕ್ರೀಡೆ ಕಲಿಸುತ್ತದೆ:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಪ್ರಕಾಶ್ ಆಂಟನಿ ಮೊಂತೆರೊ ಅವರು ಮಾತನಾಡಿ ವಕೀಲರ ಕ್ರೀಡಾಕೂಟ ಎಪಿಎಲ್ ಆರಂಭದಿಂದ ಇಲ್ಲಿಯ ತನಕ ಇದೇ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.ಅಲ್ಲಿಂದ ಇಲ್ಲಿನ ತನಕ ನಾನು ಅತಿಥಿಯಾಗಿ ಭಾಗವಹಿಸಿರುವುದು ಸಂತೋಷದ ವಿಚಾರ. ಇವತ್ತು ಯುವ ಸಮೂಹಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಂಕ್ಗಳಿಸುವ ಉದ್ದೇಶಕ್ಕಿಂತಲೂ ಮಾನವೀಯ ಗುಣ ಕೊಡುವುದು ಬಹಳ ಅಗತ್ಯ. ಇಂತಹ ಮಾನವೀಯ ಗುಣ ಕ್ರೀಡಾ ಕೂಟ ಕಲಿಸುತ್ತದೆ ಎಂದರು.
ಎಲ್ಲರಿಂದಲೂ ಉತ್ತಮ ಸಹಕಾರ ಸಿಕ್ಕಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ವಕೀಲರ ಕ್ರೀಡಾಕೂಟದ ನಾಲ್ಕು ಸೀಸನ್ನಲ್ಲೂ ನಾನೇ ಅಧ್ಯಕ್ಷನಾಗಿರುವುದು ಸಂತೋಷ ತಂದಿದೆ. ಅದೇ ರೀತಿ ನ್ಯಾಯಾಧೀಶರುಗಳು ಸಹಿತ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ ಎಂದರು.
೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಕಾಂತರಾಜು ಯನ್.ವಿ., ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಎಸಿಜೆಯಂ ಪುತ್ತೂರು ನ್ಯಾಯಾಧೀಶ ಗೌಡ ಆರ್.ಪಿ, ಹಿರಿಯ ಸಿವಿಲ್ ನ್ಯಾಯಾಧೀಶ, ಜೆಎಂಎಫ್ಸಿ ಪ್ರಿಯ ರವಿ ಜೊಗ್ಲೆಕರ್, ಪ್ರಧಾನ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಜೆಎಂಎಫ್ಸಿ ಅರ್ಚನಾ ಕೆ ಉಣ್ಣಿತಾನ್, ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಶಿವಣ್ಣ ಎಚ್ ಆರ್, ವಕೀಲರ ಸಂಘದ ಕೋಶಾಧಿಕಾರಿ ಶ್ಯಾಮ್ ಪ್ರಸಾದ್, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಕೀಲರ ಸಂಘದ ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್, ನ್ಯಾಯವಾದಿಗಳಾದ ಶ್ರೀಗಿರೀಶ್ ಮಳಿ, ದೀಪಕ್ ಬೊಳುವಾರು, ಗೌರೀಶ್ ಕಂಪ, ಜಗನ್ನಾಥ್ ರೈ, ಭಾಸ್ಕರ್ ಪೆರುವಾಯಿ, ಮಮತಾ ಸುವರ್ಣ, ಮಹಾಬಲ ಗೌಡ, ಸಿದ್ದಿಕ್ ಅತಿಥಿಗಳನ್ನು ಗೌರವಿಸಿದರು. ಎಪಿಎಲ್ ಕ್ರೀಡಾ ಕಾರ್ಯದರ್ಶಿ ವಿಜಯಾನಂದ ಕೈಂತಜೆ ಸ್ವಾಗತಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಎನ್ ವಂದಿಸಿದರು.
ಕ್ರಿಕೆಟ್ನಲ್ಲಿ ಟ್ರೈಡೆಂಟ್ ವಾರಿಯರ್ಸ್ (ಪ್ರ),
ತ್ರೋ ಬಾಲ್ನಲ್ಲಿ ಲಕ್ಕಿ 9 (ಪ್ರ)
ಕ್ರಿಕೆಟ್ ಪಂದ್ಯಾಟದಲ್ಲಿ ನಾಲ್ಕು ತಂಡ ಭಾಗವಹಿಸಿತ್ತು.ಜಿ.ಜಗನ್ನಾಥ ರೈ ಮತ್ತು ಭಾಸ್ಕರ್ ಕೋಡಿಂಬಾಳ ಮಾಲಕತ್ವದ ಟ್ರೈಡೆಂಟ್ ವಾರಿಯರ್ಸ್, ಕೆ.ಫಝ್ಲಲ್ ರಹೀಂ ಮತ್ತು ಮಹಮ್ಮದ್ ಶಾಕೀರ್ ಮಾಲಕತ್ವದ ರೆಡ್ ಗೈಸ್, ಭಾಸ್ಕರ ಪೆರುವಾಯಿ ಮತ್ತು ಜಯರಾಮ ರೈ ಕೆ ಮಾಲಕತ್ವದ ಜೆ.ಬಿ.ಸುಪರ್ ಕಿಂಗ್ಸ್, ಕೃಷ್ಣಪ್ರಸಾದ್ ರೈ ಮತ್ತು ಪ್ರಸಾದ್ ಕುಮಾರ್ ರೈ ಮಾಲಕತ್ವದ ಬಾರ್ ಲಯನ್ಸ್ ಭಾಗವಹಿಸಿತ್ತು.ಮಹಿಳಾ ವಕೀಲರ ತಂಡದಲ್ಲಿ ಲಕ್ಕಿ ೯, ಲಾ ಕ್ವೀನ್ಸ್ ತ್ತ್ತು ಜುಡಿಷಿಯಲ್ ೧೧ ತಂಡ ಭಾಗವಹಿಸಿತ್ತು.ಕ್ರಿಕೆಟ್ ಮತ್ತು ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಟ್ರೈಡೆಂಟ್ ವಾರಿಯರ್ಸ್ (ಪ್ರ), ರೆಡ್ ಗೈಸ್ (ದ್ವಿ), ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಲಕ್ಕಿ ೯ ತಂಡ (ಪ್ರ), ಲಾ ಕ್ವೀನ್ಸ್(ದ್ವಿ), ಜುಡಿಷಿಯಲ್ ೧೧(ತೃ). ಮಹಿಳೆಯರ ಹಗ್ಗಜಗ್ಗಾಟದಲ್ಲಿ ಲಕ್ಕಿ ೯(ಪ್ರ), ಜ್ಯುಡೀಷಿಯಲ್ ೧೧(ದ್ವಿ), ಡಾಜ್ಬಾಲ್ ಪಂದ್ಯಾಟದಲ್ಲಿ ಲಕ್ಕಿ ೯ (ಪ್ರ), ಲಾ ಕ್ವೀನ್(ದ್ವಿ) ಸ್ಥಾನ ಪಡೆದಿದೆ. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.