ಕಡಬ: ಇಲ್ಲಿನ ನೂತನ ತಾಲೂಕು ಪಂಚಾಯತ್ ಕಟ್ಟಡ, ಮಿನಿ ವಿಧಾನ ಸೌಧ ಕಟ್ಟಡ, ಕೊಯಿಲ ಪಶು ವೈದ್ಯಕೀಯ ಕಾಲೇಜಿನ ಉದ್ಘಾಟನೆ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಗಳು ಮಾ.24ರಂದು ನಡೆಯಲಿದ್ದು ಈ ಬಗ್ಗೆ ಕಡಬ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿಯಾಗಿ ಸಚಿವ ಎಸ್.ಅಂಗಾರ ಅವರು ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಅಂಗಾರ ಅವರು, ಕಡಬ ತಾಲೂಕಿಗೆ ಸಂಬಂಧಪಟ್ಟು ಅತಿ ಅಗತ್ಯವಾಗಿದ್ದ ತಾಲೂಕು ಪಂಚಾಯತ್ ಕಟ್ಟಡ, ಮಿನಿ ವಿಧಾನಸೌಧ ಕಟ್ಟಡ, ಕೊಯಿಲ ಪಶು ವೈದ್ಯಕೀಯ ಕಾಲೇಜು ಇವುಗಳ ಉದ್ಘಾಟನೆ ನಡೆಸಲಾಗುವುದು. ಅಲ್ಲದೆ ಸುಮಾರು 218 ಕೋಟಿ ವೆಚ್ಚದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಕಾಮಗಾರಿಗೆ ಶಿಲಾನ್ಯಾಸ ಅಲ್ಲದೆ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯೂ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಚೌವಾನ್, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಕೇಂದ್ರ ಸರಕಾರದ ತೋಟಗಾರಿಕೆ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ಗಣ್ಯರು, ಸಚಿವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಅಧಿಕಾರಿಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ ಅವರು ಕಾರ್ಯಕ್ರಮದ ತಯಾರಿಯ ಬಗ್ಗೆ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ವೇದಿಕೆಯಲ್ಲಿ ಕಡಬ ತಹಸೀಲ್ದಾರ್ ರಮೇಶ್ ಬಾಬು, ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಪಿ.ಆರ್.ಇಡಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಭರತ್ ಬಿ. ಕಿರಿಯ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಕರ್ನಾಟಕ ಗೃಹ ಮಂಡಳಿಯ ಕಿರಿಯ ಇಂಜಿನಿಯರ್ ಪ್ರದೀಪ್, ಉಪ ತಹಸೀಲ್ದಾರ್ ಮನೋಹರ್, ತಾ.ಪಂ. ವ್ಯವಸ್ಥಾಪಕ ಭುವನೇಂದ್ರ ಕುಮಾರ್, ವಿಷಯ ನಿರ್ವಾಹಕಿ ಲಲಿತಾ ಸೇರಿದಂತೆ ವಿವಿಧ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.