ಪುತ್ತೂರು: ಎ.10ರಿಂದ 20ರ ತನಕ ನಡೆಯುವ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪೂರ್ವಭಾವಿಯಾಗಿ ಎ.1ರಂದು ನಡೆಯುವ ಗೊನೆ ಮುಹೂರ್ತದಂದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿಯಂತೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆತನದಿಂದ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಮಾ.26ರಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಲ್ಲಿ ನಡೆಯಿತು.
ಕುಟುಂಬದ ಯಜಮಾನ ರಾಧಾಕೃಷ್ಣ ನಾಯ್ಕ್ ಮಾತನಾಡಿ ಕುಟುಂಬಸ್ಥರು ಹಾಗೂ ಪರಿವಾರಬಂಟ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ದಾ ಭಕ್ತಿಯಿಂದ ಭಾಗವಹಿಸಿ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಮಾಡಿ ಸಾರ್ವಜನಿಕ ಅನ್ನಸಂತರ್ಪಣೆ ಸುಸೂತ್ರವಾಗಿ ನಡೆಯಲು ಸಹಕರಿಸಬೇಕೆಂದರು. ಅದೇ ರೀತಿ ಎ.12ರ ದೇವರ ಪೇಟೆ ಸವಾರಿಯಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಲ್ಲಿರುವ ದೇವರ ಕಟ್ಟೆಗೆ ದೇವರ ಆಗಮನವಾಗಲಿದ್ದು ಅಂದು ಎಲ್ಲರು ಉಪಸ್ಥಿತರಿರಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಯರಾಮ್ ನಾಯ್ಕ್ ಮಂಗಳೂರು, ರತ್ನಾಕರ ನಾಯ್ಕ್ ಮುಕ್ರಂಪಾಡಿ, ಪ್ರವೀಣ್ ನಾಯ್ಕ್ ಕೆಮ್ಮಾಯಿ, ನವೀನ್ಚಂದ್ರ ನಾಯ್ಕ್ ನೆಹರೂನಗರ, ಸುದೇಶ್ ನಾಯ್ಕ್ ಅಜೇಯನಗರ, ಹರೀಶ್ ನಾಯ್ಕ್ ಅಜೇಯನಗರ, ಸುದರ್ಶನ್ ನಾಯ್ಕ್ ಕಂಪ, ಸುರೇಶ್ ನಾಯ್ಕ್, ಜಯಪ್ರಕಾಶ್ ನಾಯ್ಕ್ ಪುರುಷರಕಟ್ಟೆ, ನಯನ ನಾಯ್ಕ್ ಕೊಟ್ಟಿಬೆಟ್ಟು, ಪವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.