ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಧಾರ್ಮಿಕ ಸಭೆ

0

ಪುತ್ತೂರು:ಲೌಕಿಕ ಜೀವನದಲ್ಲಿ ನಾವು ಆಗಾಗ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸುವ ಮೂಲಕ ದೇವಸ್ಥಾನಗಳಲ್ಲಿ ದೇವರ ಚೈತನ್ಯವನ್ನು ವೃದ್ಧಿಸಿಕೊಳ್ಳಲಾಗುತ್ತಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಹೇಳಿದರು.


ಮುಕ್ವೆ ಮಜಲುಮಾರು ಶ್ರೀಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಾ.29ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಬ್ರಹ್ಮಕಲಶದ ಬಗ್ಗೆ ಹಲವರಲ್ಲಿ ಜಿಜ್ಞಾಸೆಯಿದೆ. ಆದರೆ ಬ್ರಹ್ಮಕಲಶೋತ್ಸವದಲ್ಲಿ ಊರಿನ ಎಲ್ಲಾ ವರ್ಗದ ಜನರು ಒಂದಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರ ಮೂಲಕ ಜನರ ಮನಸ್ಸು ಶುಚಿಗೊಳ್ಳುತ್ತದೆ. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಗಳಿಗೆ ಉಳ್ಳವರಿಂದ ಸಂಗ್ರಹಿಸಿದ ಹಣವನ್ನು ವಿವಿಧ ರೂಪದಲ್ಲಿ ಕೆಲಸ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಹಣ ವಿವಿಧ ರೂಪದಲ್ಲಿ ಹಂಚಿಹೋಗುತ್ತಿದ್ದು ಅರ್ಥ ವ್ಯವಸ್ಥೆಯು ಚೇತರಿಸಿಕೊಳ್ಳುತ್ತಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯಿದ್ದು ಶ್ರದ್ಧಾ ಕೇಂದ್ರಗಳ ಮೂಲಕ ಧಾರ್ಮಿಕ ಶಿಕ್ಷಣ ನೀಡುವ ಕರ್ತವ್ಯ ನಮ್ಮ ಮೇಲಿದೆ. ಮಹಾಲಿಂಗೇಶ್ವರ ದೇವಸ್ಥಾನದ ಮೂಲಕ 15 ಕೇಂದ್ರಗಳಲ್ಲಿ 1500 ಮಕ್ಕಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.


ಸ್ವರ್ಣೋದ್ಯಮಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ದೇವಸ್ಥಾನದ ಉನ್ನತೀಕರಣದಲ್ಲಿ ಊರಿನ ಜನರು ಒಗ್ಗಟ್ಟಿನಿಂದ ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ನಮ್ಮಲ್ಲಿ ನಮ್ಮ ಬದಲಾವಣೆಯೇ ದೇವಸ್ಥಾನಗಳ ಉನ್ನತೀಕರಣದ ಉದ್ದೇಶವಾಗಿದೆ. ಉಮಾಮಹೇಶ್ವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಇಲ್ಲಿನ ಚಿತ್ರಣವೇ ಬದಲಾಗಿದೆ ಎಂದರು.


ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ಮಾತನಾಡಿ, ಬ್ರಹ್ಮಕಲಶೋತ್ಸವದ ಮೂಲಕ ದೇವರ ಚೈತನ್ಯ ವೃದ್ಧಿಯಾಗಿ ಊರಿಗೆ ಕ್ಷೇಮ ಪ್ರಾಪ್ತಿಯಾಗುತ್ತದೆ. ಜನರಲ್ಲಿ ಧರ್ಮದ ಬಗ್ಗೆ ಜಾಗೃತಿ ಉಂಟಾಗುತ್ತದೆ. ನಮ್ಮ ಜೀವನದ ಕೆಲಸ ಕಾರ್ಯಗಳು ಧರ್ಮದ ಆಧಾರದಲ್ಲಿ ನಡೆಯಬೇಕು. ನಮ್ಮ ಸಂಪಾಧನೆ, ಕಲ್ಪನೆಗಳು ಧರ್ಮದ ಆಧಾರದಲ್ಲಿದ್ದಾಗ ದೇವರ ಅನುಗ್ರಹ ದೊರೆತು ನಮ್ಮ ಕಾರ್ಯಗಳು ಯಶಸ್ವಿಯಾಗಿ ನೆರವೇರಲು ಸಾಧ್ಯ ಎಂದರು.


ಮಜಲುಮಾರು ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಮಾಜಿ ಅಧ್ಯಕ್ಷ ತಿರುಮಲೇಶ್ವರ ಭಟ್ ಮಾತನಾಡಿ, ದೇವಸ್ಥಾನಗಳಲ್ಲಿ ರಾಜಕೀಯಕ್ಕೆ ಅವಕಾಶ ಕೊಡಬಾರದು. ದೇವಸ್ಥಾನಕ್ಕೆ ಬರುವಾಗ ಚಪ್ಪಲಿ ಹೊರಗಿಟ್ಟು ಬರುವಂತೆ ದೇವಸ್ಥಾನ ರಾಜಕೀಯವನ್ನು ಬಿಟ್ಟು ಬರಬೇಕು. ದೇವಸ್ಥಾನದ ಕಾರ್ಯದಲ್ಲಿ ಪ್ರತಿಯೊಬ್ಬರೂ ಏಕರೂಪದ ಮನಸ್ಸಿನಿಂದ ತೊಡಗಿಸಿಕೊಳ್ಳಬೇಕು. ಧಾರ್ಮಿಕ ಭಾವನೆ, ಸಮಾನ ಮನಸ್ಸಿನಿಂದ ದೇವಸ್ಥಾನದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಆನಂದ ಕೆ. ಮಾತನಾಡಿ, ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಬ್ರಹ್ಮಕಲಶೋತ್ಸವಕ್ಕೆ ಶ್ರೀಕ್ಷೇತ್ರದಿಂದ ರೂ.5ಲಕ್ಷ ದೇಣಿಗೆ ನೀಡಲಾಗಿದೆ ಎಂದು ಹೇಳಿದ ಅವರು ಸ್ವಚ್ಚತೆ ಹಾಗೂ ಅಭಿವೃದ್ಧಿಯಲ್ಲಿ ಮಜಲುಮಾರು ಕ್ಷೇತ್ರ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
ನರಿಮೊಗರು ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಾ ಮಾತನಾಡಿ, ದೇವಸ್ಥಾನದಲ್ಲಿ ಉತ್ತಮ ಸಂಘಟನೆಯಿದ್ದು ಎಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ನೆರವೇರುತ್ತಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಊರ, ಪರವೂರ ಭಕ್ತಾದಿಗಳು ಆರ್ಥಿಕ, ಸಾಮಾಗ್ರಿ ಹಾಗೂ ಶಾರೀರಿಕವಾಗಿ ಸಹಕಾರ ನೀಡಿದ ಫಲವಾಗಿ ಎಲ್ಲಾ ಕಾರ್ಯಗಳು ಉತ್ತಮ ರೀತಿಯಲ್ಲಿ ನೆರವೇರುವಲ್ಲಿ ಸಹಕಾರಿಯಾಗಿದೆ ಎಂದರು.
ಮಜಲುಮಾರು ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಕೇಂದ್ರ ಸರಕಾರದ ಅಟಲ್ ಸಾಧನಾ ಪುರಸ್ಕಾರ ಪ್ರಶಸ್ತಿ ಪುರಸ್ಕೃತ ಎಸ್.ಜಿ ಗ್ರೂಪ್‌ನ ಸತ್ಯಶಂಕರ್ ಹಾಗೂ ರಂಜಿತಾ ಸತ್ಯಶಂಕರ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ದುರ್ಗಾ ಭಜನಾ ಮಂಡಳಿಯ ಸದಸ್ಯರಾದ ವಸಂತಿ, ವಿಮಲ ಹಾಗೂ ಪದ್ಮ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ನವೀನ್ ರೈ ಶಿಬರ ಸ್ವಾಗತಿಸಿದರು. ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ಬೆಳಿಯಪ್ಪ ಗೌಡ ಕೆದ್ಕಾರ್, ಸದಸ್ಯರಾದ ಸುಧೀರ್ ಹೆಬ್ಬಾರ್ ಮಣಿಯ, ಕೇಶವ ಪೂಜಾರಿ ಮುಕ್ವೆ, ಪದ್ಮನಾಭ ಪೂಜಾರಿ ಬೆದ್ರಾಳ, ಗಂಗಾಧರ ಸುವರ್ಣ, ಅಲಂಕಾರ ಸಮಿತಿ ಸಂಚಾಲಕ ಪ್ರವೀಣ್ ನಾಕ್ ಸೇರಾಜೆ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಮಂಜುನಾಥ ಶೇಖ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ನವೀನ್ ರೈ ಪಂಜಳ ಹಾಗೂ ಕೆಯ್ಯೂರು ಕೆಪಿಎಸ್ ನ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಶ್ರೀದೇವಿ ಭಜನಾ ಮಂಡಳಿ ಪುರುಷರಕಟ್ಟೆ ಹಾಗೂ ದಾಬೋ

ಶ್ರೀ ಪೂರ್ಣಾನಂದ ಭಜನಾ ಮಂದಿರ ಪುರುಷರಕಟ್ಟೆ ಇವರಿಂದ ಭಜನೆ, ಸಭಾ ಕಾರ್ಯಕ್ರಮದ ಬಳಿಕ ಪಂಚಮಿ ಸ್ವರಾಂಜಲಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ವಿಧಿ ವಿಧಾನಗಳು:
ಬ್ರಹ್ಮಕಲಶೋತ್ಸವದಲ್ಲಿ ಬೆಳಿಗ್ಗೆ ಉಷಃಪೂಜೆ, ಅಂಕುರಪೂಜೆ, ಮಹಾಗಣಪತಿಹೋಮ, ಸೃಷ್ಠಿತತ್ವಹೋಮ, ತತ್ವಕಲಶಪೂಜೆ, ತತ್ವಕಲಶಾಭಿಷೇಕ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರೀಪೂಜೆ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಅಧಿವಾಸಹೋಮ, ಕಲಶಾಧಿವಾಸ, ಅಧಿವಾಸಬಲಿ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ಇಂದು ಬ್ರಹ್ಮಕಲಶ, ಪುಷ್ಪರಥ ಸಮರ್ಪಣೆ, ಪುಷ್ಪರಥೋತ್ಸವ
ಬ್ರಹ್ಮಕಲಶೋತ್ಸವದಲ್ಲಿ ಮಾ.30ರಂದು ಪೂರ್ವಾಹ್ನ 108 ಕಾಯಿ ಮಹಾಗಣಪತಿಹೋಮ, ಮೀನ ಲಗ್ನ ಶುಭಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ, ಪುಷ್ಪ ರಥ ಸಮರ್ಪಣೆ, ಸಂಜೆ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಪಿ.ಕೆ ಗಣೇಶ್ ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ದೇವರಿಗೆ ಪ್ರಥಮ ಪುಷ್ಪರಥೋತ್ಸವ ವಸಂತಕಟ್ಟೆ ಪೂಜೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here